Kannada NewsKarnataka NewsLatestSports

*ವೈಭವ್‌ ಸೂರ್ಯವಂಶಿಗೆ ‘ನೀನಿನ್ನೂ ಮಗು’ ಎಂದ ಪಾಕ್ ಕ್ರಿಕೆಟಿಗ*: *ಮುಂದಿನ ಓವರ್‌ನಲ್ಲೇ ಉತ್ತರ ಕೊಟ್ಟ ಅಭಿಷೇಕ್*

ಪ್ರಗತಿವಾಹಿನಿ ಸುದ್ದಿ: ಏಷ್ಯನ್ ಗೇಮ್ಸ್‌ ಕ್ರಿಕೆಟ್‌ ಫೈನಲ್‌ನಲ್ಲಿ ಪಾಕಿಸ್ತಾನವನ್ನು 19 ರನ್‌ಗಳಿಂದ ಮಣಿಸಿದ ಭಾರತ ಸತತ ಎರಡನೇ ಬಾರಿಗೆ ಚಿನ್ನದ ಪದಕ ಗೆದ್ದಿದೆ. ಆದರೆ ಪಂದ್ಯ ಮುಗಿದ ಬಳಿಕ ಭಾರತದ ಯುವ ಬ್ಯಾಟರ್‌ ವೈಭವ್‌ ಸೂರ್ಯವಂಶಿ ಹಾಗೂ ಪಾಕಿಸ್ತಾನದ ಸೈಮ್ ಅಯೂಬ್ ನಡುವಿನ ಸನ್ನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 9 ಎಸೆತಗಳಲ್ಲಿ 2 ಸಿಕ್ಸರ್‌ಗಳೊಂದಿಗೆ 15 ರನ್ ಗಳಿಸಿದ್ದರು. ಸೈಮ್ ಅಯೂಬ್ ಎಸೆದ ಮೂರನೇ ಓವರ್‌ನ ಮೊದಲ ಎಸೆತವನ್ನು ರಿವರ್ಸ್ ಸ್ವೀಪ್ ಮಾಡಲು ಪ್ರಯತ್ನಿಸಿದಾಗ ಚೆಂಡು ಗ್ಲೌಸ್‌ಗೆ ತಾಗಿ ವಿಕೆಟ್‌ಕೀಪರ್ ಉಸ್ಮಾನ್ ಖಾನ್ ಕೈ ಸೇರಿತು.

ವೈಭವ್ ವಿಕೆಟ್ ಪಡೆದ ಬಳಿಕ ಸೈಮ್ ಅಯೂಬ್ ಕೈಗಳಿಂದ ಮಗುವನ್ನು ತೂಗುವ ರೀತಿಯ ಸನ್ನೆ ಮಾಡಿ ಸಂಭ್ರಮಿಸಿದರು. ಈ ಮೂಲಕ ವೈಭವ್ ಇನ್ನೂ ಮಗು ಎಂಬ ರೀತಿಯಲ್ಲಿ ಕಿಚಾಯಿಸಿದ ಸನ್ನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

ಆದರೆ ಸೈಮ್ ಅಯೂಬ್‌ಗೆ ಅದೇ ಓವರ್‌ನಲ್ಲಿ ಭಾರತದ ಅಭಿಷೇಕ್ ಶರ್ಮಾ ಬ್ಯಾಟ್‌ನಿಂದ ಉತ್ತರ ಸಿಕ್ಕಿತು. ಮುಂದಿನ ಮೂರು ಎಸೆತಗಳನ್ನು ಅಭಿಷೇಕ್ ಬೌಂಡರಿಗೆ ಅಟ್ಟುವ ಮೂಲಕ ಸೈಮ್ ಅಯೂಬ್‌ ಮೇಲೆ ಒತ್ತಡ ಹೆಚ್ಚಿಸಿದರು. ಅಷ್ಟೇ ಅಲ್ಲ, ಅಭಿಷೇಕ್ ಶರ್ಮಾ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಸೈಮ್ ಅಯೂಬ್ ಬೌಲಿಂಗ್‌ನಲ್ಲಿ ಭಾರತ ರನ್‌ಗಳ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಂಡಿತು.

ಬೌಲಿಂಗ್ ಮಾತ್ರವಲ್ಲದೆ ಫೀಲ್ಡಿಂಗ್‌ನಲ್ಲೂ ಸೈಮ್ ಅಯೂಬ್ ದುಬಾರಿ ಎನಿಸಿದರು. ಅಭಿಷೇಕ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಸೇರಿದಂತೆ ಭಾರತದ ಪ್ರಮುಖ ಬ್ಯಾಟರ್‌ಗಳ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಪಾಕಿಸ್ತಾನಕ್ಕೆ ಹಿನ್ನಡೆಯಾಯಿತು.

ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 211 ರನ್ ಗಳಿಸಿತು. ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 61 ರನ್ ಹಾಗೂ ತಿಲಕ್ ವರ್ಮಾ 22 ಎಸೆತಗಳಲ್ಲಿ ಅಜೇಯ 51 ರನ್ ಗಳಿಸಿದರು.

ವೈಭವ್ ಸೂರ್ಯವಂಶಿ 15 ರನ್ ಗಳಿಸಿದರೆ, ಶಿವಂ ದುಬೆ ಕೊನೆಯಲ್ಲಿ 15 ಎಸೆತಗಳಲ್ಲಿ 27 ರನ್ ಬಾರಿಸಿ ಭಾರತದ ಮೊತ್ತವನ್ನು 200ರ ಗಡಿ ದಾಟಿಸಿದರು. 212 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ನಾಯಕ ಶಹಿಬಜಾದಾ ಫರ್ಹಾನ್ 10 ರನ್ ಹಾಗೂ ಉಸ್ಮಾನ್ ಖಾನ್ 3 ರನ್‌ಗಳಿಗೆ ಔಟಾದರು. ಮುವಾಜ್ ಸದಾಕತ್ 23 ರನ್ ಗಳಿಸಿದರು.

ಪಾಕಿಸ್ತಾನದ ಪರ ಹಸನ್ ನವಾಜ್ 96 ರನ್‌ಗಳ ಏಕಾಂಗಿ ಹೋರಾಟ ನಡೆಸಿದರೂ ಗೆಲುವು ಸಾಧ್ಯವಾಗಲಿಲ್ಲ. 20 ಓವರ್‌ಗಳಲ್ಲಿ 6 ವಿಕೆಟ್‌ಗೆ 192 ರನ್ ಗಳಿಸಿದ ಪಾಕಿಸ್ತಾನ 19 ರನ್‌ಗಳಿಂದ ಸೋಲನುಭವಿಸಿತು. ಭಾರತದ ಪರ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಹಾಗೂ ಶಿವಂ ದುಬೆ ತಲಾ ಎರಡು ವಿಕೆಟ್ ಪಡೆದು ಪಾಕಿಸ್ತಾನದ ಚೇಸ್‌ಗೆ ಕಡಿವಾಣ ಹಾಕಿದರು.

*ಯುಪಿ ಚುನಾವಣೆಗೆ ಕಾಂಗ್ರೆಸ್ ಬಿಗ್‌ ಪ್ಲಾನ್*: *ಆರಾಧನಾ ಮಿಶ್ರಾಗೆ ರಾಜ್ಯಾಧ್ಯಕ್ಷ ಪಟ್ಟ; ಬ್ರಾಹ್ಮಣ, ಮಹಿಳಾ ಮತಬ್ಯಾಂಕ್ ಮೇಲೆ ಕಣ್ಣು* – Pragati Vahini

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button