*ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾದ ಬಾಲಕಿ: 9 ವರ್ಷದ ಬಾಲೆ ಹೊಟ್ಟೆಯಲ್ಲಿತ್ತು 1ಕೆಜಿ ತೂಕದ ಕೂದಲು; ಏನಿದು ವಿಚಿತ್ರ ಕಾಯಿಲೆ?*

ಪ್ರಗತಿವಾಹಿನಿ ಸುದ್ದಿ: ಹೊಟ್ಟೆನೋವು ಹಾಗೂ ವಾಂತಿಯಿಂದದು ಆಸ್ಪತ್ರೆಗೆ ದಾಖಲಾಗಿದ್ದ 9 ವರ್ಷದ ಬಾಲಕಿಯೊಬ್ಬಳಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಆಕೆಯ ಹೊಟ್ಟೆ ಮತ್ತು ಸಣ್ಣ ಕರುಳಿನಲ್ಲಿದ್ದ ಬರೋಬ್ಬರಿ 1 ಕೆಜಿ ತೂಕದ ಕೂದಲಿನ ಉಂಡೆಯನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಕೇರಳದ ತಿರುವನಂತಪುರಂ ಸಮೀಪದ ನೆಯ್ಯಾಟಿನ್ಕರಾದ ‘ನಿಮ್ಸ್ ಮೆಡಿಸಿಟಿ’ ಆಸ್ಪತ್ರೆಯಲ್ಲಿ ಈ ಅಪರೂಪದ ಶಸ್ತ್ರಚಿಕಿತ್ಸೆ ನಡೆದಿದೆ. ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಅಲ್ಟ್ರಾಸೌಂಡ್, ಸಿಟಿ ಸ್ಕ್ಯಾನ್ ಹಾಗೂ ಎಂಡೋಸ್ಕೋಪಿ ಪರೀಕ್ಷೆಗೆ ಒಳಪಡಿಸಿದಾಗ ಕರುಳಿನಲ್ಲಿ ಮತ್ತು ಹೊಟ್ಟೆಯಲ್ಲಿ ಭಾರಿ ಪ್ರಮಾಣದ ಕೂದಲು ಸಂಗ್ರಹವಾಗಿರುವುದು ಪತ್ತೆಯಾಗಿತ್ತು.
ಪೀಡಿಯಾಟ್ರಿಕ್ ಸರ್ಜರಿ ವಿಭಾಗದ ಹಿರಿಯ ವೈದ್ಯ ಡಾ. ಬಿಜು ಐ. ಜಿ. ನಾಯರ್ ಅವರ ನೇತೃತ್ವದ ವೈದ್ಯರ ತಂಡವು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಕೂದಲಿನ ಮುದ್ದೆಯನ್ನು ಹೊರತೆಗೆದಿದೆ.
ವೈದ್ಯಕೀಯ ಭಾಷೆಯಲ್ಲಿ ಇದನ್ನು ‘ರಪಂಜಲ್ ಸಿಂಡ್ರೋಮ್’ ಅಥವಾ ‘ಟ್ರಿಕೋಬೆಜೋರ್’ ಎಂದು ಕರೆಯಲಾಗುತ್ತದೆ. ಮಾನಸಿಕ ಒತ್ತಡ ಅಥವಾ ಅಸ್ವಸ್ಥತೆಯಿಂದ ಸ್ವತಃ ತಮ್ಮ ಕೂದಲನ್ನು ತಾವೇ ಕತ್ತರಿಸಿ ತಿನ್ನುವ ಹವ್ಯಾಸದಿಂದಾಗಿ ಈ ರೀತಿಯ ಸಮಸ್ಯೆ ಎದುರಾಗುತ್ತದೆ. ಹೊಟ್ಟೆಯಲ್ಲಿ ಜೀರ್ಣವಾಗದ ಕೂದಲು ಕ್ರಮೇಣ ಗಟ್ಟಿಯಾದ ಉಂಡೆಯಾಗಿ ಮಾರ್ಪಡುತ್ತದೆ.
ಸದ್ಯ ಬಾಲಕಿ ಸಂಪೂರ್ಣ ಚೇತರಿಸಿಕೊಂಡಿದ್ದು, ಸಾಮಾನ್ಯ ಆಹಾರ ಸೇವನೆ ಆರಂಭಿಸಿದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಜಗತ್ತಿನಾದ್ಯಂತ ಈವರೆಗೆ 100ಕ್ಕೂ ಕಡಿಮೆ ಇಂತಹ ಅಪರೂಪದ ಪ್ರಕರಣಗಳು ವರದಿಯಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




