*ಜೀವಾವಧಿ ಕೈದಿಗಳಿಗೆ ಕಂಕಣ ಭಾಗ್ಯ; ಬೆಳಗ್ಗೆ ಮದುವೆ ಸಂಜೆ ಜೈಲಿಗೆ ವಾಪಸ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮೂಡಲಗಿ ತಾಲೂಕಿನ ಇಬ್ಬರು ಕೈದಿಗಳಿಗೆ ಮದುವೆಯಾಗಲು ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠ ಒಂದು ದಿನದ ತಾತ್ಕಾಲಿಕ ಪರೋಲ್ ಮಂಜೂರು ಮಾಡಿದೆ.
2023ರ ಜುಲೈ 17ರಂದು ವಡೇರಹಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶಂಕರ ಸಿದ್ದಪ್ಪ ಜಗಮುತ್ತಿ (28) ಕೊಲೆಯಾಗಿದ್ದರು. ಈ ಪ್ರಕರಣದಲ್ಲಿ ಅವರ ಪತ್ನಿ ಸಿದ್ದವ್ವ ಉರ್ಫ್ ಪ್ರಿಯಾಂಕಾ (21) ಹಾಗೂ ಬೈರನಟ್ಟಿ ಗ್ರಾಮದ ಶ್ರೀಧರ ಅರ್ಜುನ ತಳವಾರ (21) ಆರೋಪಿಗಳಾಗಿದ್ದರು. ವಿಚಾರಣೆ ಬಳಿಕ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೂ ಕಠಿಣ ಜೀವಾವಧಿ ಶಿಕ್ಷೆ ಹಾಗೂ ತಲಾ ₹3 ಲಕ್ಷ ದಂಡ ವಿಧಿಸಲಾಗಿತ್ತು. ಸದ್ಯ ಇಬ್ಬರೂ ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಮದುವೆಯಾಗುವ ಉದ್ದೇಶದಿಂದ ಇಬ್ಬರೂ 90 ದಿನಗಳ ಪರೋಲ್ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯವು 90 ದಿನಗಳ ಬದಲಿಗೆ ಒಂದು ದಿನದ ತಾತ್ಕಾಲಿಕ ಪರೋಲ್‌ಗೆ ಮಾತ್ರ ಅನುಮತಿ ನೀಡಿದೆ.
ನ್ಯಾಯಾಲಯದ ಆದೇಶದಂತೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಪೊಲೀಸ್ ಭದ್ರತೆಯಲ್ಲಿ ವಿವಾಹ ನೆರವೇರಲಿದೆ. ಮದುವೆ ಮುಗಿದ ಬಳಿಕ ಅದೇ ದಿನ ಇಬ್ಬರೂ ಮತ್ತೆ ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ಹಾಜರಾಗಬೇಕಿದೆ.
ಇಬ್ಬರ ವಿವಾಹದ ದಿನಾಂಕವನ್ನು ನಿಗದಿಪಡಿಸಿ ಒಂದು ವಾರದೊಳಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಹೈಕೋರ್ಟ್ ಸೂಚಿಸಿದೆ.
ಹೀಗಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಈ ಜೋಡಿಯ ವಿವಾಹ ಯಾವ ದಿನ ನಡೆಯಲಿದೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



