
ಪ್ರಗತಿವಾಹಿನಿ ಸುದ್ದಿ: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ 750 ಕೆಜಿ ತೂಕದ ಚಿನ್ನದಂಬಾರಿ ಹೊರುವ ಮುಂದಿನ ಗಜರಾಜ ಯಾರು ಎಂಬ ಕುತೂಹಲ ಹೆಚ್ಚಾಗಿದೆ. ಅಭಿಮನ್ಯು ನಿವೃತ್ತಿ ಬಳಿಕ ಈ ಬಾರಿ ಅಂಬಾರಿ ಹೊರುವ ಆನೆಯ ಆಯ್ಕೆ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಧನಂಜಯನ ಹೆಸರು ಮುನ್ನೆಲೆಗೆ ಬಂದಿದೆ.
ಮಹೇಂದ್ರ, ಪ್ರಶಾಂತ ಮತ್ತು ಏಕಲವ್ಯ ಆನೆಗಳ ನಡುವೆ ಸ್ಪರ್ಧೆ ಇದ್ದರೂ ಧನಂಜಯ ಮುನ್ನಡೆ ಸಾಧಿಸಿದ್ದಾನೆ. ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಧನಂಜಯನೇ ಅಂಬಾರಿ ಹೊರುವ ಸಾಧ್ಯತೆ ಹೆಚ್ಚಿದೆ ಎಂಬ ಸುಳಿವು ನೀಡಿದ್ದಾರೆ.
ಧನಂಜಯನ ಸಾಮರ್ಥ್ಯ, ಗಾಂಭೀರ್ಯ ಹಾಗೂ ದಸರಾ ತಾಲೀಮಿನಲ್ಲಿ ತೋರಿಸಿರುವ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಹಲವು ಹಂತಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ ಧನಂಜಯನ ಹೆಸರು ಹೆಚ್ಚು ಚರ್ಚೆಗೆ ಬಂದಿದೆ.
ಅಭಿಮನ್ಯು ಹಲವು ವರ್ಷಗಳ ಕಾಲ ಚಿನ್ನದಂಬಾರಿ ಹೊತ್ತು ಮೈಸೂರು ದಸರೆಯ ಪ್ರಮುಖ ಆಕರ್ಷಣೆಯಾಗಿದ್ದ. ಅಭಿಮನ್ಯು ನಿವೃತ್ತಿಯಾದ ಹಿನ್ನೆಲೆಯಲ್ಲಿ ಹೊಸ ಅಂಬಾರಿ ಆನೆಗೆ ವಿಶೇಷ ತಾಲೀಮು ಮತ್ತು ಸಿದ್ಧತೆ ನಡೆಸಲಾಗುತ್ತಿದೆ.
ಅಂಬಾರಿ ಹೊರುವ ಆನೆಯ ಆಯ್ಕೆ ಕುರಿತು ಸರ್ಕಾರದ ಮಟ್ಟದಲ್ಲೂ ಚರ್ಚೆ ನಡೆಯುತ್ತಿದೆ. ಅಂತಿಮ ನಿರ್ಧಾರವನ್ನು ಅರಣ್ಯ ಇಲಾಖೆ ಅಧಿಕೃತವಾಗಿ ಪ್ರಕಟಿಸಬೇಕಿದೆ. ಈ ನಡುವೆ ಧನಂಜಯನಿಗೆ ಐತಿಹಾಸಿಕ ಅವಕಾಶ ಸಿಗುತ್ತಾ ಎಂಬ ಕುತೂಹಲ ಮೈಸೂರು ಜನರಲ್ಲಿ ಹೆಚ್ಚಾಗಿದೆ. ಅಂತಿಮ ಆಯ್ಕೆ ಪ್ರಕಟವಾದ ಬಳಿಕ ಈ ಬಾರಿಯ ಜಂಬೂಸವಾರಿಯಲ್ಲಿ 750 ಕೆಜಿ ಚಿನ್ನದಂಬಾರಿಯನ್ನು ಯಾರು ಹೊರುತ್ತಾರೆ ಎಂಬುದು ಸ್ಪಷ್ಟವಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




