*ಆ್ಯನಿವರ್ಸರಿ ಪಾರ್ಟಿಯಲ್ಲೇ ಗಲಾಟೆ*: *ಗಂಭೀರವಾಗಿ ಗಾಯಗೊಂಡ ಜಿಮ್ ಟ್ರೈನರ್ ಸಾವು*

ಪ್ರಗತಿವಾಹಿನಿ ಸುದ್ದಿ: ಆ್ಯನಿವರ್ಸರಿ ಕಾರ್ಯಕ್ರಮದ ಬಳಿಕ ನಡೆದ ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜಿಮ್ ಟ್ರೈನರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 25 ವರ್ಷದ ನಂದನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ,
ಶನಿವಾರ ಜಿಮ್ನ ಮೊದಲ ವರ್ಷದ ಆ್ಯನಿವರ್ಸರಿ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮ ಮುಗಿದ ಬಳಿಕ ಸಿಬ್ಬಂದಿ ಹಾಗೂ ಪರಿಚಿತರೊಂದಿಗೆ ನಂದನ್ ಅಪಾರ್ಟ್ಮೆಂಟ್ಗೆ ತೆರಳಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪಾರ್ಟಿ ವೇಳೆ ವಾಶ್ರೂಂನಲ್ಲಿ ಗಲಾಟೆ ನಡೆದಿದ್ದು, ಈ ಸಂದರ್ಭದಲ್ಲಿ ಗಾಜಿನ ವಸ್ತುವೊಂದು ಒಡೆದು ನಂದನ್ ಅವರ ತಲೆ ಭಾಗಕ್ಕೆ ಚುಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ನಂದನ್ ಅವರನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಕರಣ ಸಂಬಂಧ ವಿಶ್ವನಾಥ, ವಿಜಯ್, ಶರತ್ ಹಾಗೂ ನಿಶಾಂತ್ ಎಂಬ ನಾಲ್ವರನ್ನು ಅಮೃತಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನಾಲ್ವರೂ ಜಿಮ್ ಟ್ರೈನರ್ಗಳೇ ಎಂದು ಪೊಲೀಸರು ತಿಳಿಸಿದ್ದಾರೆ.
ಈಶಾನ್ಯ ವಿಭಾಗದ ಡಿಸಿಪಿ ಜಿ.ಕೆ. ಮಿಥುನ್ ಕುಮಾರ್ ಮಾಹಿತಿ ನೀಡಿದ್ದು, ನಂದನ್ ಜಿಮ್ ಟ್ರೈನರ್ ಆಗಿದ್ದರು. ಅನುಷ್ ಎಂಬುವರಿಗೆ ನಂದನ್ ವೈಯಕ್ತಿಕ ಟ್ರೈನರ್ ಆಗಿದ್ದು, ಅನುಷ್ ಅವರ ಮನೆಗೆ ಪಾರ್ಟಿಗಾಗಿ ತೆರಳಿದ್ದ ವೇಳೆ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ವೈಯಕ್ತಿಕ ಕಾರಣಗಳಿಂದ ಗಲಾಟೆ ನಡೆದಿರುವ ಸಾಧ್ಯತೆ ಇದೆ. ಘಟನೆಗೆ ನಿಖರ ಕಾರಣವೇನು ಹಾಗೂ ನಂದನ್ ಮೇಲೆ ಹಲ್ಲೆ ನಡೆಸಲು ಕಾರಣವೇನು ಎಂಬುದನ್ನು ತನಿಖೆ ಮಾಡಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ನಂದನ್ ಕುಟುಂಬಸ್ಥರು ಕೂಡ ಹಲ್ಲೆ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ನಾಲ್ವರು ಸೇರಿ ಹಲ್ಲೆ ನಡೆಸಿರುವ ಸಾಧ್ಯತೆ ಇದೆ ಎಂದು ನಂದನ್ ತಾಯಿ ಆರೋಪಿಸಿದ್ದು, ದೇಹದ ಮೇಲೆ ಹಲ್ಲೆ ಹಾಗೂ ಕಚ್ಚಿದ ಗುರುತುಗಳಿವೆ. ತಲೆಯ ಹಿಂಭಾಗದಲ್ಲೂ ಗಾಯವಾಗಿತ್ತು ಎಂದು ತಿಳಿಸಿದ್ದಾರೆ.
“ನಂದನ್ ನನಗೆ ಜೀವನದ ಆಧಾರವಾಗಿದ್ದ. ಇಷ್ಟು ದಿನ ನನಗಾಗಿ ಕಷ್ಟಪಟ್ಟಿದ್ದೆ. ‘ಈಗ ನೀನು ಸುಖವಾಗಿ ಇರು ಅಮ್ಮ’ ಎಂದು ಹೇಳಿದ್ದ. ಈಗ ಇದ್ದ ಒಬ್ಬ ಮಗನೂ ಇಲ್ಲದಂತಾಗಿದೆ” ಎಂದು ನಂದನ್ ತಾಯಿ ಕಣ್ಣೀರಿಟ್ಟಿದ್ದಾರೆ.
ಘಟನೆ ಸಂಬಂಧ ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಗಲಾಟೆಯ ನಿಖರ ಕಾರಣ ಹಾಗೂ ನಂದನ್ ಸಾವಿಗೆ ಕಾರಣವಾದ ಘಟನೆಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




