Kannada NewsKarnataka NewsLatestNational

*ಬೆಳ್ಳಂಬೆಳಗ್ಗೆ ಭೀಕರ ವಿಮಾನ ದುರಂತ*: *32 ಮಂದಿ ಸಾವು, ತನಿಖೆಗೆ ಆದೇಶ*

ಪ್ರಗತಿವಾಹಿನಿ ಸುದ್ದಿ: ನೈಜೀರಿಯಾದಲ್ಲಿ ಸಂಭವಿಸಿದ ಭೀಕರ ಸೇನಾ ವಿಮಾನ ಅಪಘಾತದಲ್ಲಿ ವಿಮಾನದಲ್ಲಿದ್ದ 32 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ 25 ಪ್ರಯಾಣಿಕರು ಹಾಗೂ ಏಳು ಸಿಬ್ಬಂದಿ ಸೇರಿದ್ದಾರೆ ಎಂದು ನೈಜೀರಿಯಾ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಕಚೇರಿ ದೃಢಪಡಿಸಿದೆ.

ಸೋಮವಾರ ಬೆಳಗ್ಗೆ ಬೆನಿನ್‌ನಿಂದ ಲಾಗೋಸ್‌ಗೆ ತೆರಳುತ್ತಿದ್ದ ನೈಜೀರಿಯಾ ವಾಯುಪಡೆಯ ATR-42 ವಿಮಾನ ಹಾರಾಟ ನಡೆಸುತ್ತಿತ್ತು. ಇದು ನಿಯಮಿತ ಕಾರ್ಯಾಚರಣೆಯ ಭಾಗವಾಗಿತ್ತು ಎಂದು ನೈಜೀರಿಯಾ ವಾಯುಪಡೆ ತಿಳಿಸಿದೆ.

ವಿಮಾನವು ಒಂಡೋ ರಾಜ್ಯದ ಇಗ್ಬೊಕೊಡಾ ಪ್ರದೇಶದ ಸಮೀಪದಲ್ಲಿದ್ದಾಗ ಏರ್ ಟ್ರಾಫಿಕ್ ಕಂಟ್ರೋಲ್‌ನೊಂದಿಗೆ ಸಂಪರ್ಕ ಕಳೆದುಕೊಂಡಿದೆ. ಸ್ಥಳೀಯ ಸಮಯ ಸುಮಾರು ಬೆಳಗ್ಗೆ 9.13ಕ್ಕೆ ವಿಮಾನದಿಂದ ಸಂಪರ್ಕ ಕಡಿತಗೊಂಡಿದ್ದು, ಹಲವು ಬಾರಿ ರೇಡಿಯೋ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆ ಬಂದಿರಲಿಲ್ಲ.

ಸ್ವಲ್ಪ ಸಮಯದ ಬಳಿಕ ಇಗ್ಬೊಕೊಡಾದ ನೌಕಾ ನೆಲೆಯ ಸಮೀಪ ವಿಮಾನ ಪತನಗೊಂಡಿರುವುದು ದೃಢಪಟ್ಟಿದೆ. ವಿಮಾನದ ಅವಶೇಷಗಳು ಪತ್ತೆಯಾಗಿದ್ದು, ಆರಂಭದಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು.

ಅಪಘಾತದ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ವಿಮಾನದಲ್ಲಿದ್ದವರಲ್ಲಿ ಹೆಚ್ಚಿನವರು ನೈಜೀರಿಯಾ ವಾಯುಪಡೆಯ ಸಿಬ್ಬಂದಿಯಾಗಿದ್ದರು ಎಂದು ವರದಿಯಾಗಿದೆ. ವಿಮಾನದ ಹಾರಾಟದ ಮಾಹಿತಿ, ನಿರ್ವಹಣಾ ದಾಖಲೆಗಳು ಹಾಗೂ ಇತರ ಅಂಶಗಳನ್ನು ಪರಿಶೀಲಿಸಿ ಕಾರಣ ಪತ್ತೆಹಚ್ಚಬೇಕಿದೆ.

ದುರಂತದ ಸುದ್ದಿ ತಿಳಿದ ಅಧ್ಯಕ್ಷ ಬೋಲಾ ಟಿನುಬು ಸಂತಾಪ ಸೂಚಿಸಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ಆಳವಾದ ಸಂತಾಪ ವ್ಯಕ್ತಪಡಿಸಿರುವ ಟಿನುಬು, ಅಪಘಾತದ ಕಾರಣ ಪತ್ತೆಹಚ್ಚಲು ನೈಜೀರಿಯಾ ವಾಯುಪಡೆಗೆ ಸಮಗ್ರ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.

ಅಪಘಾತದ ಹಿನ್ನೆಲೆಯಲ್ಲಿ ನೈಜೀರಿಯಾದಲ್ಲಿ ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ. ದೇಶಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸುವಂತೆ ಸೂಚಿಸಲಾಗಿದೆ.

ನೈಜೀರಿಯಾ ವಾಯುಪಡೆಯ ATR-42 ವಿಮಾನವು ಸಾಮಾನ್ಯವಾಗಿ ಸಮುದ್ರ ಗಸ್ತು, ಗುಪ್ತಚರ, ಕಣ್ಗಾವಲು ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಬಳಸುವ ಸಾಮರ್ಥ್ಯ ಹೊಂದಿದೆ. ಅಪಘಾತಕ್ಕೀಡಾದ ವಿಮಾನವು NGR 931 ಎಂದು ಗುರುತಿಸಲಾಗಿದೆ.

ಈ ದುರಂತ ನೈಜೀರಿಯಾದ ಇತ್ತೀಚಿನ ವರ್ಷಗಳ ಪ್ರಮುಖ ಸೇನಾ ವಿಮಾನ ಅಪಘಾತಗಳಲ್ಲಿ ಒಂದಾಗಿದೆ. ತನಿಖೆಯ ಬಳಿಕವೇ ಅಪಘಾತಕ್ಕೆ ಕಾರಣವಾದ ನಿಖರ ಅಂಶಗಳು ಸ್ಪಷ್ಟವಾಗಲಿವೆ.

*82 ವಿದ್ಯಾರ್ಥಿಗಳ ಅರ್ಧ ತಲೆ ಬೋಳಿಸಿದ ಶಾಲಾ ಸಿಬ್ಬಂದಿ*: *ವಿಚಿತ್ರ ಶಿಕ್ಷೆಗೆ ಪೋಷಕರ ಆಕ್ರೋಶ!* – Pragati Vahini

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button