Kannada NewsKarnataka NewsLatest

*ಪಶ್ಚಿಮ ಘಟ್ಟ ರಕ್ಷಿಸಿ, ಉತ್ತರ ಕನ್ನಡ ಉಳಿಸಿ: ಅ.10ರಂದು ಬೆಂಗಳೂರಿನಲ್ಲಿ ಬೃಹತ್ ಜನಾಂದೋಲನ*

ಬೇಡ್ತಿ–ಅಘನಾಶಿನಿ ನದಿ ನೀರು ಜೋಡಣೆ ಯೋಜನೆ ವಿರೋಧಿಸಿ ಫ್ರೀಡಂ ಪಾರ್ಕ್‌ನಲ್ಲಿ ಧರಣಿ; ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಟಿಎಸ್‌ಎಸ್‌ ಮನವಿ


ಪ್ರಗತಿವಾಹಿನಿ ಸುದ್ದಿ: ಶಿರಸಿ: ಬೇಡ್ತಿ ಹಾಗೂ ಅಘನಾಶಿನಿ ನದಿ ನೀರು ಜೋಡಣೆ ಯೋಜನೆಯನ್ನು ವಿರೋಧಿಸಿ ಹಾಗೂ ಪಶ್ಚಿಮ ಘಟ್ಟ ಮತ್ತು ಉತ್ತರ ಕನ್ನಡ ಜಿಲ್ಲೆಯ ಪರಿಸರ ಸಂರಕ್ಷಣೆಗೆ ಆಗ್ರಹಿಸಿ ಅ.10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಜನಾಂದೋಲನ ಧರಣಿ ನಡೆಯಲಿದೆ.


‘ಪಶ್ಚಿಮ ಘಟ್ಟ ರಕ್ಷಿಸಿ, ಉತ್ತರ ಕನ್ನಡ ಉಳಿಸಿ’ ಎಂಬ ಧ್ಯೇಯವಾಕ್ಯದೊಂದಿಗೆ ಅ.10ರಂದು ಶನಿವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಧರಣಿ ಆಯೋಜಿಸಲಾಗಿದೆ. ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟದ ಯಶಸ್ಸಿಗೆ ಸಹಕರಿಸುವಂತೆ ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ (ಟಿಎಸ್‌ಎಸ್), ಶಿರಸಿ ತನ್ನ ಸದಸ್ಯರು, ಗ್ರಾಹಕರು ಹಾಗೂ ಹಿತೈಷಿಗಳಿಗೆ ಮನವಿ ಮಾಡಿದೆ.


ಉತ್ತರ ಕನ್ನಡ ಜಿಲ್ಲೆಯ ಬಹುಭಾಗ ಅರಣ್ಯ ಪ್ರದೇಶವಾಗಿದ್ದು, ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ವಲಯವನ್ನು ಹೊಂದಿದೆ. ಈಗಾಗಲೇ ಜಿಲ್ಲೆಯಲ್ಲಿ ಕೈಗಾ ಅಣುವಿದ್ಯುತ್ ಸ್ಥಾವರ, ಕದಂಬ ನೌಕಾನೆಲೆ ಸೇರಿದಂತೆ ಹಲವು ಬೃಹತ್ ಯೋಜನೆಗಳು ಜಾರಿಯಾಗಿವೆ. ಇಂತಹ ಯೋಜನೆಗಳ ಪರಿಣಾಮವಾಗಿ ಹವಾಮಾನ ವೈಪರೀತ್ಯ, ಅತಿವೃಷ್ಟಿ–ಅನಾವೃಷ್ಟಿ, ಬೆಳೆಗಳಿಗೆ ತಗುಲುತ್ತಿರುವ ರೋಗಬಾಧೆ ಹಾಗೂ ಭೂಕುಸಿತದಂತಹ ಸಮಸ್ಯೆಗಳು ಹೆಚ್ಚುತ್ತಿರುವ ಬಗ್ಗೆ ಜಿಲ್ಲೆಯ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಟಿಎಸ್‌ಎಸ್ ತಿಳಿಸಿದೆ.


ಅಡಿಕೆ, ಭತ್ತ, ತೆಂಗು, ಮೀನುಗಾರಿಕೆ ಸೇರಿದಂತೆ ಕೃಷಿ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಬಿತವಾಗಿರುವ ಜಿಲ್ಲೆಯ ಜನಜೀವನದ ಮೇಲೆ ಹೊಸ ಯೋಜನೆಗಳು ಪರಿಣಾಮ ಬೀರುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಬೇಡ್ತಿ–ಅಘನಾಶಿನಿ ನದಿ ನೀರು ಜೋಡಣೆ ಯೋಜನೆಗಳ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಅಗತ್ಯವಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.


ಈ ಹಿಂದೆ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಯತಿಶ್ರೇಷ್ಠರ ಮಾರ್ಗದರ್ಶನದಲ್ಲಿ ಪಕ್ಷಾತೀತವಾಗಿ ಮನವಿ ಸಲ್ಲಿಕೆ, ಪಾದಯಾತ್ರೆ ಹಾಗೂ ಬೃಹತ್ ಸಮಾವೇಶ ಸೇರಿದಂತೆ ಹಲವು ಹೋರಾಟಗಳನ್ನು ನಡೆಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಬೆಂಗಳೂರಿನಲ್ಲಿ ಧರಣಿ ಆಯೋಜಿಸಲಾಗಿದೆ ಎಂದು ಟಿಎಸ್‌ಎಸ್ ತಿಳಿಸಿದೆ.


ಬೆಂಗಳೂರಿನಲ್ಲಿ ವಾಸಿಸುವ ಸಂಘದ ಸದಸ್ಯರು, ಗ್ರಾಹಕರು, ಅವರ ಕುಟುಂಬಸ್ಥರು, ಮಕ್ಕಳು, ಸಂಬಂಧಿಕರು ಹಾಗೂ ಸ್ನೇಹಿತರು ಧರಣಿಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು. ನೆಲ–ಜಲ ಮತ್ತು ಪರಿಸರ ಸಂರಕ್ಷಣೆಯ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕು ಎಂದು ಆಡಳಿತ ಮಂಡಳಿ ಮನವಿ ಮಾಡಿದೆ.
“ಪರಿಸರ ಉಳಿದಲ್ಲಿ ಮಾತ್ರ ನಾವು, ನೀವು ಹಾಗೂ ಈ ವ್ಯವಸ್ಥೆಗಳು ಉಳಿಯಲು ಸಾಧ್ಯ. ಸುಂದರ ನಾಳೆಗಳಿಗಾಗಿ ಇಂದಿನ ಹೋರಾಟ ಮಹತ್ವದ್ದಾಗಿದೆ” ಎಂದು ಸಂಘ ತಿಳಿಸಿದೆ.


ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೆಂ. ವೈದ್ಯ (ಮತ್ತಿಘಟ್ಟಾ) ಹಾಗೂ ಉಪಾಧ್ಯಕ್ಷ ಮಹಾಬಲೇಶ್ವರ ನ. ಭಟ್ಟ (ತೋಟಿಮನೆ) ಅವರು ಆಡಳಿತ ಮಂಡಳಿ ಪರವಾಗಿ ಈ ಮನವಿ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button