HealthKannada NewsKarnataka NewsPolitics

*ಮಧ್ಯರಾತ್ರಿ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ: ಸಿಬ್ಬಂದಿಗೆ ಸಚಿವ ಯು.ಟಿ. ಖಾದರ್ ಶಾಕ್*

ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯಕೀಯ ಸೇವೆಯ ಗುಣಮಟ್ಟ ಪರಿಶೀಲಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಚನ್ನಪಟ್ಟಣ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಮಧ್ಯರಾತ್ರಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಂಗಳವಾರ ಬೆಳಗಿನ ಜಾವ ಸುಮಾರು 2.30ರ ವೇಳೆಗೆ ಯಾವುದೇ ಮುನ್ಸೂಚನೆ ನೀಡದೆ ಆಸ್ಪತ್ರೆಗೆ ಆಗಮಿಸಿದ ಸಚಿವರು, ತುರ್ತು ಚಿಕಿತ್ಸಾ ವಿಭಾಗ ಸೇರಿದಂತೆ ವಿವಿಧ ವಾರ್ಡ್‌ಗಳಿಗೆ ತೆರಳಿ ಅಲ್ಲಿನ ವ್ಯವಸ್ಥೆಗಳನ್ನು ಖುದ್ದಾಗಿ ಪರಿಶೀಲಿಸಿದರು.

ಈ ವೇಳೆ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು, ನರ್ಸ್‌ಗಳು ಹಾಗೂ ಭದ್ರತಾ ಸಿಬ್ಬಂದಿಯ ಹಾಜರಾತಿ ಮತ್ತು ಕರ್ತವ್ಯ ನಿರ್ವಹಣೆಯನ್ನು ಪರಿಶೀಲಿಸಿದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಹಾಗೂ ಅವರ ಕುಟುಂಬಸ್ಥರೊಂದಿಗೆ ಸಚಿವರು ನೇರವಾಗಿ ಮಾತುಕತೆ ನಡೆಸಿದರು.

ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯುತ್ತಿದೆಯೇ, ಅಗತ್ಯ ಔಷಧಗಳು ಉಚಿತವಾಗಿ ಲಭ್ಯವಾಗುತ್ತಿವೆಯೇ ಹಾಗೂ ರಾತ್ರಿ ವೇಳೆ ತುರ್ತು ಪರಿಸ್ಥಿತಿಯಲ್ಲಿ ವೈದ್ಯಕೀಯ ಸೇವೆ ತಕ್ಷಣ ಸಿಗುತ್ತಿದೆಯೇ ಎಂಬುದನ್ನು ರೋಗಿಗಳಿಂದಲೇ ಸಚಿವರು ಮಾಹಿತಿ ಪಡೆದುಕೊಂಡರು.

ಇದೇ ವೇಳೆ ಆಸ್ಪತ್ರೆಯ ಸ್ವಚ್ಛತೆ, ತುರ್ತು ಚಿಕಿತ್ಸಾ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳ ಸ್ಥಿತಿಗತಿಯನ್ನೂ ಪರಿಶೀಲಿಸಿದರು.

ಸರ್ಕಾರಿ ಆಸ್ಪತ್ರೆಗಳು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಪ್ರಮುಖ ಆಸರೆಯಾಗಿದ್ದು, ಹಗಲು-ರಾತ್ರಿ ಎನ್ನದೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು ಎಂದು ಸಚಿವ ಯು.ಟಿ. ಖಾದರ್ ಸೂಚಿಸಿದರು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ವೈದ್ಯರು ಹಾಗೂ ಸಿಬ್ಬಂದಿಯ ವಿರುದ್ಧ ಯಾವುದೇ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button