*ಶಿವಣ್ಣ ಎದುರೇ ಪಟಾಕಿ ಬಾಕ್ಸ್ ಸ್ಫೋಟ*: *ಕೂದಲೆಳೆ ಅಂತರದಲ್ಲಿ ಪಾರಾದ ಹ್ಯಾಟ್ರಿಕ್ ಹೀರೋ*

ಪ್ರಗತಿವಾಹಿನಿ ಸುದ್ದಿ: ಬಹುನಿರೀಕ್ಷಿತ ‘ಬೇಲ್’ ಚಿತ್ರದ ಪ್ರಚಾರಕ್ಕಾಗಿ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರಿಗೆ ಸ್ವಾಗತ ಕೋರುವ ವೇಳೆ ಆತಂಕಕಾರಿ ಘಟನೆ ನಡೆದಿದೆ. ಖಾಸಗಿ ಶೋರೂಂ ಬಳಿ ಅಭಿಮಾನಿಗಳು ಪಟಾಕಿ ಸಿಡಿಸುತ್ತಿದ್ದಾಗಲೇ, ಶಿವಣ್ಣ ಎದುರೇ ಪಟಾಕಿ ಬಾಕ್ಸ್ ಏಕಾಏಕಿ ಸ್ಫೋಟಗೊಂಡಿದೆ.
ಶೋರೂಂ ಪ್ರವೇಶಿಸುತ್ತಿದ್ದ ಸಮಯದಲ್ಲೇ ದಿಢೀರ್ ಸ್ಫೋಟ ಸಂಭವಿಸಿದ್ದು, ಪಟಾಕಿಯ ಕಿಡಿಗಳು ಶಿವರಾಜ್ಕುಮಾರ್ ಮೇಲೂ ಬಿದ್ದಿವೆ. ಕ್ಷಣಕಾಲ ಆಘಾತಕ್ಕೊಳಗಾದರೂ ಅದೃಷ್ಟವಶಾತ್ ಯಾವುದೇ ಗಾಯವಾಗದೆ ಅಪಾಯದಿಂದ ಪಾರಾಗಿದ್ದಾರೆ.
ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ನೂಕುನುಗ್ಗಲು ಉಂಟಾಯಿತು. ಘಟನೆಯಿಂದ ಅಭಿಮಾನಿಗಳಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಶಿವರಾಜ್ಕುಮಾರ್ ‘ಬೇಲ್’ ಚಿತ್ರದ ಬಗ್ಗೆ ಮಾತನಾಡಿ, ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದು ಸಂಪೂರ್ಣ ಫ್ಯಾಮಿಲಿ ಎಂಟರ್ಟೈನರ್ ಎಂದು ಹೇಳಿದರು. ಸಿನಿಮಾವನ್ನು ಬಿಗ್ ಬಜೆಟ್ ಅಥವಾ ಸ್ಮಾಲ್ ಬಜೆಟ್ ಎಂಬ ಮಾನದಂಡದಲ್ಲಿ ಅಳೆಯಬಾರದು ಎಂದು ಶಿವರಾಜ್ಕುಮಾರ್ ಅಭಿಪ್ರಾಯಪಟ್ಟರು. ಕೋಟಿ ಕೋಟಿ ಹಣ ಖರ್ಚು ಮಾಡಿದ ಮಾತ್ರಕ್ಕೆ ಸಿನಿಮಾ ಯಶಸ್ವಿಯಾಗುತ್ತದೆ ಎಂಬುದು ಸರಿಯಲ್ಲ ಎಂದರು.
ಸಿನಿಮಾದ ಕಥೆ ಪ್ರೇಕ್ಷಕರಿಗೆ ಇಷ್ಟವಾಗಬೇಕು. ಕುಟುಂಬ ಸಮೇತರಾಗಿ ಕುಳಿತು ನೋಡುವಂತಿರಬೇಕು. ಅದೇ ಸಿನಿಮಾದ ಯಶಸ್ಸಿಗೆ ಪ್ರಮುಖ ಕಾರಣವಾಗುತ್ತದೆ ಎಂದು ಹೇಳಿದರು. ಕೇವಲ ಹಣ ಸುರಿದರೆ ಸಿನಿಮಾ ಗೆಲ್ಲುತ್ತದೆ ಎಂಬುದು ದೊಡ್ಡ ಭ್ರಮೆ. ಆ ಭ್ರಮೆಯಿಂದ ಹೊರಬಂದು ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು ಎಂದು ಶಿವರಾಜ್ಕುಮಾರ್ ಹೇಳಿದರು. ಕೆಲವೊಮ್ಮೆ ಅತ್ಯುತ್ತಮ ಸಿನಿಮಾಗಳೂ ಸೋಲುತ್ತವೆ. ಅದಕ್ಕೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಆದರೆ ಸಿನಿಮಾ ಸರಳವಾಗಿ ಮತ್ತು ಪ್ರೇಕ್ಷಕರಿಗೆ ಸುಲಭವಾಗಿ ಅರ್ಥವಾಗುವಂತಿರಬೇಕು ಎಂಬುದು ಮುಖ್ಯ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



