
ಪ್ರಗತಿವಾಹಿನಿ ಸುದ್ದಿ: ಫಾರ್ಮ್-7 ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಬಿಜೆಪಿ ಮುಖಂಡ ರಾಮಕೃಷ್ಣ ಸೇರಿದಂತೆ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಫಾರಂ-7 ದುರ್ಬಳಕೆ ಮಾಡಿ ಮತದಾರರ ಹೆಸರುಗಳನ್ನು ಡಿಲಿಟ್ ಮಾಡಲು ಯತ್ನಿಸಲಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಜಯನಗರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಜಯನಗರದಲ್ಲಿ ಒಟ್ಟು 5,698 ಮತದಾರರ ಹೆಸರುಗಳನ್ನ ಪಟ್ಟಿಯಿಂದ ಡಿಲೀಟ್ ಮಾಡಲು ಫಾರಂ-7 ಅರ್ಜಿಗಳನ್ನ ಸಲ್ಲಿಸಿರುವ ಬಗ್ಗೆ ಸೌಮ್ಯಾ ರೆಡ್ಡಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಅರ್ಜಿಗಳ ಹಿಂದೆ ಉದ್ದೇಶಪೂರ್ವಕವಾಗಿ ಮತದಾರರ ಹೆಸರುಗಳನ್ನ ಅಳಿಸುವ ಪ್ರಯತ್ನ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಅರ್ಜಿಗಳಲ್ಲಿ ಸಿ. ರಮೇಶ್ ಮತ್ತು ರೂಪಾ ಎಂಬುವವರ ಹೆಸರನ್ನ ಬಳಸಲಾಗಿದೆ. ಆದರೆ, ತಮ್ಮ ಯಾವುದೇ ಮಾಹಿತಿ ಅಥವಾ ಒಪ್ಪಿಗೆಯಿಲ್ಲದೆ ತಮ್ಮ ವೈಯಕ್ತಿಕ ಮಾಹಿತಿಯನ್ನ ನಕಲು ಮಾಡಿ ಫಾರಂ-7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸೌಮ್ಯಾ ರೆಡ್ಡಿ ದೂರಿನ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರಾದ ರಾಮಕೃಷ್ಣ, ಯೋಗೇಶ್ ಸೇರಿದಂತೆ ಒಟ್ಟು ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ದೂರಿನಲ್ಲಿ ಜಯನಗರ ಶಾಸಕ ಸಿ.ಕೆ ರಾಮಮೂರ್ತಿ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




