Latest

*ಮುಟ್ಟಿನ ರಜೆಗೆ ಇನ್ಮುಂದೆ ಮೇಲಾಧಿಕಾರಿಗಳ ಅನುಮತಿ ಬೇಕಿಲ್ಲ*: *‘ಕರ್ತವ್ಯ’ ಆ್ಯಪ್‌ನಲ್ಲೇ ಸ್ವಯಂಚಾಲಿತ ಮಂಜೂರು*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಮುಟ್ಟಿನ ರಜೆ ಪಡೆಯುವ ಪ್ರಕ್ರಿಯೆಯನ್ನು ಸರ್ಕಾರ ಮತ್ತಷ್ಟು ಸರಳಗೊಳಿಸಿದೆ. ಇನ್ಮುಂದೆ ಮುಟ್ಟಿನ ರಜೆಗಾಗಿ ಮೇಲಾಧಿಕಾರಿಗಳ ಅನುಮತಿಗಾಗಿ ಕಾಯಬೇಕಾಗಿಲ್ಲ. ‘ಕರ್ತವ್ಯ’ ಮೊಬೈಲ್ ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸಿದ ತಕ್ಷಣ ರಜೆ ಸ್ವಯಂಚಾಲಿತವಾಗಿ ಮಂಜೂರಾಗುವ ವ್ಯವಸ್ಥೆ ಜಾರಿಗೆ ಬಂದಿದೆ.

ಈ ಹಿಂದೆ ಮಹಿಳಾ ಸರ್ಕಾರಿ ನೌಕರರು ತಿಂಗಳಿಗೆ ಒಂದು ದಿನದ ಮುಟ್ಟಿನ ರಜೆ ಪಡೆಯಲು ಮೇಲಾಧಿಕಾರಿಗಳ ಅನುಮೋದನೆ ಪಡೆಯಬೇಕಿತ್ತು. ಅನುಮೋದನೆ ವಿಳಂಬವಾಗುತ್ತಿದ್ದ ಸಂದರ್ಭಗಳಲ್ಲಿ ಸಕಾಲಕ್ಕೆ ರಜೆ ಪಡೆಯಲು ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು.

ಈ ಹಿನ್ನೆಲೆಯಲ್ಲಿ ‘ಕರ್ತವ್ಯ’ ಆ್ಯಪ್ ಮೂಲಕ ಅರ್ಜಿ ಸಲ್ಲಿಸಿದ ಕೂಡಲೇ ಸ್ವಯಂಚಾಲಿತವಾಗಿ ರಜೆ ಮಂಜೂರು ಮಾಡುವ ಹೊಸ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ. ಈ ಆದೇಶ ಅಕ್ಟೋಬರ್ 5ರಿಂದಲೇ ಅನ್ವಯವಾಗುವಂತೆ ಜಾರಿಗೆ ಬಂದಿದೆ ಎಂದು ಸರ್ಕಾರದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಜ್ಯ ಸರ್ಕಾರ 2025ರ ಡಿಸೆಂಬರ್‌ನಿಂದ 18ರಿಂದ 52 ವರ್ಷದೊಳಗಿನ ಮಹಿಳಾ ಸರ್ಕಾರಿ ನೌಕರರಿಗೆ ತಿಂಗಳಿಗೆ ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ಪಡೆಯಲು ಅವಕಾಶ ನೀಡಿದೆ. ಈ ರಜೆಗೆ ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿಲ್ಲ ಎಂಬ ನಿಯಮವೂ ಮುಂದುವರಿದಿದೆ.

ಹೊಸ ವ್ಯವಸ್ಥೆಯ ಪ್ರಕಾರ, ‘ಕರ್ತವ್ಯ’ ಆ್ಯಪ್‌ನಲ್ಲಿ ನಿಯಮಾನುಸಾರ ರಜೆ ಅರ್ಜಿ ಸಲ್ಲಿಸಿದ ತಕ್ಷಣವೇ ರಜೆ ಮಂಜೂರಾಗುತ್ತದೆ. ಅರ್ಜಿಯನ್ನು ಅಧಿಕಾರಿಗಳು ತಿರಸ್ಕರಿಸುವ ಅಥವಾ ತಡೆಹಿಡಿಯುವ ವಿವೇಚನಾಧಿಕಾರ ಹೊಂದಿರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಮುಟ್ಟಿನ ರಜೆಯನ್ನು ಒಂದು ತಿಂಗಳಿಂದ ಮತ್ತೊಂದು ತಿಂಗಳಿಗೆ ವರ್ಗಾಯಿಸಲು ಅವಕಾಶವಿಲ್ಲ. ಅಂದರೆ, ಒಂದು ತಿಂಗಳಲ್ಲಿ ಬಳಸದೆ ಉಳಿದ ರಜೆಯನ್ನು ಮುಂದಿನ ತಿಂಗಳು ಪಡೆಯಲು ಅಥವಾ ರಜೆಯನ್ನು ಸಂಗ್ರಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಅದೇ ರೀತಿ ಮುಟ್ಟಿನ ರಜೆಯನ್ನು ಇತರೆ ರಜೆಗಳೊಂದಿಗೆ ಸೇರಿಸಿ ಅಥವಾ ಹೊಂದಾಣಿಕೆ ಮಾಡಿಕೊಂಡು ಪಡೆಯಲು ಅವಕಾಶ ಇರುವುದಿಲ್ಲ. ಪ್ರತಿ ತಿಂಗಳು ನಿಗದಿಪಡಿಸಿರುವ ಒಂದು ದಿನದ ರಜೆಯನ್ನೇ ನಿಯಮಾನುಸಾರ ಬಳಸಿಕೊಳ್ಳಬೇಕು. ಮೇಲಾಧಿಕಾರಿಗಳ ಅನುಮೋದನೆಗಾಗಿ ಕಾಯುವ ಅಗತ್ಯವನ್ನು ತೆಗೆದುಹಾಕಿರುವುದರಿಂದ ಮಹಿಳಾ ಸರ್ಕಾರಿ ನೌಕರರಿಗೆ ರಜೆ ಪಡೆಯುವ ಪ್ರಕ್ರಿಯೆ ಸುಲಭವಾಗಲಿದೆ. ಸರ್ಕಾರದ ಹೊಸ ವ್ಯವಸ್ಥೆಯಿಂದ ಮುಟ್ಟಿನ ರಜೆ ಕುರಿತಾಗಿ ಎದುರಾಗುತ್ತಿದ್ದ ಆಡಳಿತಾತ್ಮಕ ವಿಳಂಬಕ್ಕೆ ಪರಿಹಾರ ಸಿಗುವ ನಿರೀಕ್ಷೆಯಿದೆ.

*ಅಧಿಕಾರಿಗೆ ಆಕೆಯ ಜೊತೆ ಲೈಂಗಿಕ ಸಂಬಂಧ*: *ಅನಾಮಧೇಯ ಪತ್ರದಿಂದ ಬಯಲಾಯ್ತು ಜೈಲು ಅಕ್ರಮ* – Pragati Vahini

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button