ಶಿಕ್ಷಣ, ಆರೋಗ್ಯ ಸೇರಿದಂತೆ ಕ್ಷೇತ್ರದ ಸರ್ವಾಂಗೀಣ ವಿಕಾಸ: ಲಕ್ಷ್ಮೀ ಹೆಬ್ಬಾಳಕರ್

36 ದೇವಸ್ಥಾನಗಳಿಗೆ ಮೂರನೇ ಕಂತಿನ ಅನುದಾನ; 156ಕ್ಕೂ ಅಧಿಕ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ: ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಿಕ್ಷಣ, ಆರೋಗ್ಯ, ಧಾರ್ಮಿಕ ಹಾಗೂ ಮೂಲಸೌಕರ್ಯ ಕ್ಷೇತ್ರಗಳಿಗೆ ಆದ್ಯತೆ ನೀಡಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿಯ ಕುವೆಂಪುನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಮಂಗಳವಾರ ಕ್ಷೇತ್ರದ 36 ದೇವಸ್ಥಾನಗಳಿಗೆ ಕೊನೆಯ ಕಂತಿನ ಅನುದಾನ ಬಿಡುಗಡೆಾದ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಹಾಗೂ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ 36 ದೇವಸ್ಥಾನಗಳಿಗೆ ಬಾಕಿ ಇರುವ ಮೂರನೇ ಹಾಗೂ ಅಂತಿಮ ಕಂತಿನ ಅನುದಾನ ಬಿಡುಗಡೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ದೇವಸ್ಥಾನ ಸಮಿತಿಗಳ ಪ್ರತಿನಿಧಿಗಳಿಗೆ ಅಭಿನಂದನಾ ಪತ್ರಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಕಳೆದ 7 ವರ್ಷಗಳಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ 156ಕ್ಕೂ ಅಧಿಕ ದೇವಸ್ಥಾನಗಳ ಅಭಿವೃದ್ಧಿಗೆ ಸುಮಾರು ₹150 ಕೋಟಿಗೂ ಹೆಚ್ಚು ಅನುದಾನ ದೊರಕಿಸಲಾಗಿದೆ. ₹10 ಲಕ್ಷದಿಂದ ₹5 ಕೋಟಿವರೆಗೆ ವಿವಿಧ ದೇವಸ್ಥಾನಗಳಿಗೆ ಅನುದಾನ ನೀಡಲಾಗಿದೆ ಎಂದು ಅವರು ಹೇಳಿದರು.
“ಒಂದು ಊರಿನಲ್ಲಿ ಎರಡು–ಮೂರು ದೇವಸ್ಥಾನಗಳಿರುವುದು ಸಾಮಾನ್ಯ. ಅವು ವಿವಿಧ ಸಮುದಾಯಗಳ ಆರಾಧನಾ ಕೇಂದ್ರಗಳಾಗಿವೆ. ದೇವಸ್ಥಾನ ಎಂದರೆ ಕೇವಲ ಕಟ್ಟಡವಲ್ಲ; ಅದು ನಮ್ಮ ನಂಬಿಕೆ, ಸಂಸ್ಕೃತಿ ಮತ್ತು ಪರಂಪರೆಯ ಕೇಂದ್ರ. ಎಲ್ಲ ಸಮುದಾಯಗಳ ಆರಾಧನಾ ಕೇಂದ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ” ಎಂದು ಹೆಬ್ಬಾಳಕರ್ ಹೇಳಿದರು.
ಮುಜರಾಯಿ ಇಲಾಖೆಯೊಂದರ ಅನುದಾನಕ್ಕೆ ಸೀಮಿತವಾಗದೆ ನೀರಾವರಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಮೂಲಕವೂ ಅನುದಾನ ತಂದು ದೇವಸ್ಥಾನಗಳ ಅಭಿವೃದ್ಧಿಗೆ ಬಳಸಲಾಗಿದೆ ಎಂದು ಅವರು ತಿಳಿಸಿದರು.
253 ಶಾಲಾ ಕೊಠಡಿಗಳ ನಿರ್ಮಾಣ
ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದುವರೆಗೆ 253 ಸರ್ಕಾರಿ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಐದು ಕಡೆ ಹೊಸ ಶಾಲಾ ಕಟ್ಟಡಗಳ ನಿರ್ಮಾಣ, ನಾಲ್ಕು ಕೆಪಿಎಸ್ ಶಾಲೆಗಳ ಮಂಜೂರು ಸೇರಿದಂತೆ ಹಲವು ಕಾಮಗಾರಿಗಳು ನಡೆದಿವೆ ಎಂದು ಹೆಬ್ಬಾಳಕರ್ ಹೇಳಿದರು.
ತುಮ್ಮರಗುದ್ದಿ ಹಾಗೂ ಹಿರೇಬಾಗೇವಾಡಿಯಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ, ಕ್ಷೇತ್ರದಲ್ಲಿ ಕಾರ್ಮಿಕರ ಮಕ್ಕಳಿಗಾಗಿ ಶಾಲೆ, ಸಿಬಿಎಸ್‌ಇ ಮಾದರಿಯ ಶಾಲೆ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳನ್ನು ಕ್ಷೇತ್ರಕ್ಕೆ ತರಲಾಗಿದೆ. ಪದವಿ ಕಾಲೇಜು ಇಲ್ಲದ ಕ್ಷೇತ್ರಕ್ಕೆ ಇದೀಗ ಪದವಿ ಕಾಲೇಜು ಮಂಜೂರಾಗಿದ್ದು, ಮಣ್ಣೂರಿನಲ್ಲಿ ಬಿ.ಎಸ್ಸಿ. ನರ್ಸಿಂಗ್ ಕಾಲೇಜು ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗಿದೆ ಎಂದರು.
“ಮುಂದಿನ ದಿನಗಳಲ್ಲಿ ಶಾಲೆ ಮತ್ತು ಆರೋಗ್ಯ ಕ್ಷೇತ್ರದ ಕಡೆ ಇನ್ನಷ್ಟು ಗಮನ ಹರಿಸಲಾಗುವುದು. ಕ್ಷೇತ್ರದ ಜನರಿಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ದೊರಕಬೇಕು ಎಂಬುದು ನನ್ನ ಆಶಯ” ಎಂದು ಅವರು ಹೇಳಿದರು.
ನೂರಕ್ಕೂ ಅಧಿಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆ
ಬರ ಪರಿಸ್ಥಿತಿಯಲ್ಲಿ ರೈತರಿಗೆ ನೆರವಾಗುವ ಉದ್ದೇಶದಿಂದ ಕ್ಷೇತ್ರದ ನೂರಕ್ಕೂ ಅಧಿಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಸರ್ಕಾರದಿಂದ ದೊಡ್ಡ ಪ್ರಮಾಣದ ಅನುದಾನ ತರಲಾಗಿದೆ. ವಿವಿಧ ಮೂಲಗಳಿಂದ ಸುಮಾರು ₹1,000 ಕೋಟಿ ಅನುದಾನವನ್ನು ಈ ಸಂಬಂಧ ಒದಗಿಸಲಾಗಿದೆ ಎಂದು ಹೆಬ್ಬಾಳಕರ್ ತಿಳಿಸಿದರು.
ರಾಜಹಂಸಗಡ ಕೋಟೆ ಅಭಿವೃದ್ಧಿಗೂ ಮತ್ತೆ ಅನುದಾನ ತರಲಾಗುತ್ತಿದೆ. ಹಲವು ಗ್ರಾಮಗಳಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್‌ಗಳು ಸೇರಿದಂತೆ ನೀರಾವರಿ ಮತ್ತು ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.
“ರಸ್ತೆ, ಚರಂಡಿ, ಕುಡಿಯುವ ನೀರು, ಶಾಲೆ, ಆಟದ ಮೈದಾನ, ಕೆರೆ, ದೇವಸ್ಥಾನ—ಜನರ ಬದುಕಿಗೆ ಅಗತ್ಯವಿರುವ ಪ್ರತಿಯೊಂದು ಕ್ಷೇತ್ರವೂ ಅಭಿವೃದ್ಧಿಯ ಭಾಗ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಬದ್ಧಳಾಗಿದ್ದೇನೆ” ಎಂದು ಅವರು ಹೇಳಿದರು.
‘ಮಾತುಕೊಟ್ಟ ಮೇಲೆ ಈಡೇರಿಸುವವರೆಗೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ’
“ಸರ್ಕಾರದ ಹಣ ಜನರ ತೆರಿಗೆ ಹಣ. ಆದರೆ ಸರ್ಕಾರದಿಂದ ಅನುದಾನ ತರುವುದು ಅಷ್ಟು ಸರಳವಲ್ಲ. ಜನಪ್ರತಿನಿಧಿಯಾಗಿ ನನ್ನ ಜವಾಬ್ದಾರಿಯನ್ನು ನಿರ್ವಹಿಸಿ ಸಾಧ್ಯವಾದಷ್ಟು ಅನುದಾನ ತರುವ ಕೆಲಸ ಮಾಡುತ್ತಿದ್ದೇನೆ. ಮಾತುಕೊಟ್ಟ ಮೇಲೆ ಅದು ಈಡೇರುವವರೆಗೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ” ಎಂದು ಹೆಬ್ಬಾಳಕರ್ ಹೇಳಿದರು.
ಮುಂದಿನ ದಿನಗಳಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪಿಕೆಪಿಎಸ್) ಕಟ್ಟಡ ನಿರ್ಮಾಣಕ್ಕೂ ₹25 ಲಕ್ಷದಿಂದ ₹50 ಲಕ್ಷದವರೆಗೆ ಅನುದಾನ ತರಲು ಪ್ರಯತ್ನಿಸಲಾಗುವುದು. ಪ್ರತಿ ಗ್ರಾಮದಲ್ಲಿಯೂ ವಿವಿಧ ಇಲಾಖೆಗಳ ಮೂಲಕ ಕೋಟಿ ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದರು.
‘ಧರ್ಮದ ಬಗ್ಗೆ ಶ್ರದ್ಧೆ ಇರಲಿ; ಅನ್ಯ ಧರ್ಮದ ಬಗ್ಗೆ ಗೌರವವೂ ಇರಲಿ’
“ನಮ್ಮ ಧರ್ಮದ ಬಗ್ಗೆ ನಮಗೆ ಶ್ರದ್ಧೆ ಇರಬೇಕು. ಅದೇ ಸಂದರ್ಭದಲ್ಲಿ ಅನ್ಯ ಧರ್ಮಗಳ ಬಗ್ಗೆಯೂ ಗೌರವ ಇರಬೇಕು. ದೇವರು ಬೇರೆ ಇರಬಹುದು, ಆದರೆ ನಮ್ಮ ಊರು ಒಂದೇ. ದೇವಸ್ಥಾನಗಳು ಬೇರೆ ಇರಬಹುದು, ಆದರೆ ನಮ್ಮ ಮಣ್ಣು ಒಂದೇ. ನಂಬಿಕೆಗಳು ಬೇರೆ ಇರಬಹುದು, ಆದರೆ ಅಭಿವೃದ್ಧಿಯ ಕನಸು ಒಂದೇ” ಎಂದು ಹೆಬ್ಬಾಳಕರ್ ಹೇಳಿದರು.
ಯಾರನ್ನೂ ದ್ವೇಷಿಸದೆ ಎಲ್ಲರನ್ನು ಒಗ್ಗಟ್ಟಿನಿಂದ ಕರೆದುಕೊಂಡು ಹೋಗಬೇಕು. ಸಮಾಜವನ್ನು ಒಡೆಯುವ ಬದಲು ಪರಸ್ಪರ ಪ್ರೀತಿ ಮತ್ತು ಸಹಬಾಳ್ವೆಗೆ ಆದ್ಯತೆ ನೀಡಬೇಕು ಎಂದು ಅವರು ಕರೆ ನೀಡಿದರು.
ಅತಿವಾಡ ಜಮೀನು ಸಮಸ್ಯೆ
ಅತಿವಾಡದಲ್ಲಿ ಸುಮಾರು 11 ವರ್ಷಗಳ ಹಿಂದೆ ರೈತರಿಂದ 72 ಎಕರೆ ಜಮೀನು ಪಡೆದುಕೊಳ್ಳಲಾಗಿದ್ದು, ಇನ್ನೂ ಪರಿಹಾರ ದೊರಕಿಲ್ಲ. ಅಂದಿನ ಶಾಸಕರಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ ಎಂಬ ವಿಚಾರವನ್ನೂ ಅವರು ಪ್ರಸ್ತಾಪಿಸಿದರು. ನಾನು ಯಾರಿಗೂ ತೊಂದರೆ ಕೊಡುವುದಿಲ್ಲ. ರೈತರಿಗೆ ತೊಂದರೆಯಾಗುವುದಾದರೆ ಯೋಜನೆಯನ್ನೇ ಬದಲಾಯಿಸುತ್ತೇನೆ. ಎಲ್ಲರನ್ನೂ ಪ್ರೀತಿಯಿಂದ, ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದು ಹೆಬ್ಬಾಳಕರ್ ಹೇಳಿದರು.
ಹೆಸ್ಕಾಂ ಸಿಬ್ಬಂದಿಗೆ ಬೆಂಬಲ
ಹೆಸ್ಕಾಂ ಸಿಬ್ಬಂದಿ ಮತ್ತು ಲೈನ್‌ಮನ್‌ಗಳ ವಿಚಾರದಲ್ಲೂ ಮಾತನಾಡಿದ ಹೆಬ್ಬಾಳಕರ್, “ಲೈನ್‌ಮನ್‌ಗಳು ಹಾಗೂ ಪೌರ ಕಾರ್ಮಿಕರ ಸೇವೆಗೆ ನನಗೆ ಅಪಾರ ಗೌರವವಿದೆ. ಅವರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ” ಎಂದರು.
ತಮ್ಮ ಸಹೋದರನ ವಿರುದ್ಧ ಮಾಡಲಾಗುತ್ತಿರುವ ಕೆಲವು ಆರೋಪಗಳನ್ನು ನಿರಾಕರಿಸಿದ ಅವರು, ಲೈನ್‌ಮನ್‌ವೊಬ್ಬರನ್ನು ಕಡ್ಡಾಯ ರಜೆಗೆ ಕಳುಹಿಸಲಾಗಿದೆ ಅಥವಾ ಹಲ್ಲೆ ಮಾಡಲಾಗಿದೆ ಎಂಬ ಆರೋಪಗಳು ಸತ್ಯವಲ್ಲ ಎಂದು ಸ್ಪಷ್ಟಪಡಿಸಿದರು. ಲೈನ್ ಮನ್ ಗಳಿಗೆ ನಾವು ಗರಿಷ್ಠ ಸಹಾಯ ಮಾಡಿದ್ದೇವೆ. ಅವರ ಬಗ್ಗೆ ಕಾಳಜಿ, ಕನಿಕರವಿದೆ. ಅವರಿಗೆ ಮಳೆಗಾಲದ ವೇಳೆ ಅಗತ್ಯ ಪರಿಕರಗಳನ್ನು ವಿತರಿಸಿದ್ದೇವೆ. ಕಂಬದಿಂದ ಬಿದ್ದು 9 ವರ್ಷಗಳಿಂದ ಹಾಸಿಗೆ ಹಿಡಿದಿರುವ ಲೈನ್ ಮನ್ ಗೆ 18 ಲಕ್ಷ ರೂ ಪರಿಹಾರ ಕೊಡಿಸಿದ್ದೇನೆ. ಅವರ ಪತ್ನಿಗೆ ಕೆಲಸ ಕೊಡಿಸಿದ್ದೇನೆ. ರೈತರಿಗಾಗಿ ಕೆಲಸ ಮಾಡಿಸುವಾಗ ಕೆಲವೊಮ್ಮೆ ಜೋರಾಗಿ ಮಾತನಾಡಿರಬಹುದು. ಆದರೆ ಯಾರಿಗೂ ಹಲ್ಲೆ ಮಾಡುವಂತಹ ಕೆಲಸವನ್ನು ನಾವು ಮಾಡುವುದಿಲ್ಲ ಎಂದು ಅವರು ಹೇಳಿದರು.
‘ಅತ್ಯಂತ ಶೀಘ್ರದಲ್ಲೇ ರಾಜ್ಯ ಸಂಪುಟದಲ್ಲಿ ಮಹಿಳಾ ಸಚಿವರನ್ನು ನೋಡುತ್ತೀರಿ’
ರಾಜ್ಯ ಸಚಿವ ಸಂಪುಟದಲ್ಲಿ ಮಹಿಳಾ ಸಚಿವರ ಸೇರ್ಪಡೆ ವಿಳಂಬವಾಗುತ್ತಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳಕರ್, “ಅತ್ಯಂತ ಶೀಘ್ರದಲ್ಲೇ ಕರ್ನಾಟಕ ಸರ್ಕಾರದ ಸಂಪುಟದಲ್ಲಿ ಮಹಿಳಾ ಸಚಿವರನ್ನು ನೋಡುತ್ತೀರಿ” ಎಂದು ಹೇಳಿದರು.
ತಾವು ಸಚಿವರಾಗಲಿದ್ದಾರೆಯೇ ಎಂಬ ಪ್ರಶ್ನೆಗೆ ಮಾತ್ರ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, “ನಾನು ಒಂದು ಪ್ರಶ್ನೆಗೆ ಉತ್ತರ ಕೊಡುತ್ತೇನೆ, ಇನ್ನೊಂದಕ್ಕೆ ಉತ್ತರ ಕೊಡುವುದಿಲ್ಲ. ರಾಜಕಾರಣದಲ್ಲಿ ಕಾಲ ಒಂದೇ ರೀತಿ ಇರುವುದಿಲ್ಲ. ಅಧಿಕಾರ ಶಾಶ್ವತವಲ್ಲ. ಅಧಿಕಾರ ಇದ್ದಾಗ ಜನರು ನೆನಪಿಸಿಕೊಳ್ಳುವಂತಹ ಕೆಲಸ ಮಾಡಿದ್ದೇನೆ” ಎಂದರು. ತಮ್ಮ ಕ್ಷೇತ್ರ, ಜಿಲ್ಲೆ ಹಾಗೂ ರಾಜ್ಯದಲ್ಲಿ ಸಚಿವೆಯಾಗಿ ಉತ್ತಮ ಕೆಲಸ ಮಾಡಿದ್ದೇನೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.
ಕೇವಲ ಮಾತನಾಡುವುದರಿಂದ ಕೆಲಸ ಆಗುವುದಿಲ್ಲ
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಕ್ಷೇತ್ರದ ಜನರು ಕೇಳಿದ ಕೆಲಸಗಳನ್ನು ಹಂತ ಹಂತವಾಗಿ ಮಾಡಲಾಗುತ್ತಿದೆ. ಶಿಕ್ಷಣ, ಆರೋಗ್ಯ ಹಾಗೂ ಸಂಸ್ಕೃತಿಯ ಸಂರಕ್ಷಣೆಗೆ ಲಕ್ಷ್ಮೀ ಹೆಬ್ಬಾಳಕರ್ ಆದ್ಯತೆ ನೀಡಿದ್ದಾರೆ ಎಂದರು.
“ಕೇವಲ ಮಾತನಾಡುವುದರಿಂದ ಕೆಲಸ ಆಗುವುದಿಲ್ಲ. ಕೆಲಸ ಮಾಡುವ ಜನಪ್ರತಿನಿಧಿಗಳಿದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಈ ಹಿಂದೆ ಇದ್ದ ಶಾಸಕರು ಯಾವ ರೀತಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನುವುದನ್ನು ನೀವೆಲ್ಲ ನೋಡಿದ್ದೀರಿ. ಈಗನ ಶಾಸಕರು ಮಾಡುತ್ತಿರುವುದನ್ನೂ ನೋಡಿದ್ದೀರಿ. ಗ್ರಾಮೀಣ ಕ್ಷೇತ್ರದಲ್ಲಿ ಈಗಿನ ಅಭಿವೃದ್ಧಿ ಕಾಮಗಾರಿಗಳಿಂದಾಗಿ ಹಲವು ಗ್ರಾಮಗಳಲ್ಲಿ ಜಮೀನಿನ ಮೌಲ್ಯವೂ ಹೆಚ್ಚಾಗಿದೆ” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಯುವರಾಜ ಕದಂ, ಶಂಕರಗೌಡ ಪಾಟೀಲ, ಅಡಿವೇಶ ಇಟಗಿ, ನಾಗೇಶ ದೇಸಾಯಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದು, ಮಾತನಾಡಿದರು. ವಿವಿಧ ದೇವಸ್ಥಾನ ಸಮಿತಿಗಳ ಪದಾಧಿಕಾರಿಗಳು ಸಹ ಉಪಸ್ಥಿತರಿದ್ದರು. ಬಿ.ಜಿ. ಭಾಗೋಜಿಕೊಪ್ಪ ಕಾರ್ಯಕ್ರಮ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




