*ಪತ್ರಕರ್ತೆಗೆ ದೆಹಲಿ ಎಸಿಪಿ ಕಿರುಕುಳ: ನಕಲಿ ವಿಡಿಯೋ ಸೃಷ್ಟಿಸಿ ಹರಿಬಿಟ್ಟ ಯುವಕ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಮಹಿಳಾ ಪತ್ರಕರ್ತೆಗೆ ಕಿರುಕುಳ ನೀಡುತ್ತಿರುವಂತೆ ಬಿಂಬಿಸುವ ನಕಲಿ ಎಐ ವಿಡಿಯೋ ಹಂಚಿಕೊಂಡ ಆರೋಪದ ಮೇಲೆ ದೆಹಲಿ ಪೊಲೀಸರು 24 ವರ್ಷದ ಯುವಕನನ್ನು ಬಂಧಿಸಿದ್ದಾರೆ.
ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಪತ್ರಕರ್ತೆಯ ಮೇಲೆ ಹಲ್ಲೆ ನಡೆಸುತ್ತಿರುವಂತೆ ಬಿಂಬಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ವಿಡಿಯೋದಲ್ಲಿ ಪೊಲೀಸ್ ಅಧಿಕಾರಿ ಮಹಿಳಾ ಪತ್ರಕರ್ತೆಗೆ ಲೈಂಗಿಕ ಕಿರುಕುಳ ನೀಡುತ್ತಿರುವಂತೆ ತೋರಿಸಲಾಗಿತ್ತು. ಪೊಲೀಸರು ವಿಡಿಯೀದ ಮೂಲ ಪತ್ತೆ ಹಚ್ಚಿದ್ದು, ಈ ವಿಡಿಯೋ ಎಐ ಬಳಸಿ ಸಿದ್ಧಪಡಿಸಿದ ನಕಲಿ ವಿಡಿಯೋ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ವಿಡಿಯೋ ಸ್ಟೃಷ್ಟಿಸಿ ವೈರಲ್ ಮಾಡಿದ್ದ 24 ವರ್ಷದ ನದೀಮ್ ಅಹ್ಮದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ವೈರಲ್ ವಿಡಿಯೋವನ್ನು ‘News_Aina’ ಎಂಬ ಸಾಮಾಜಿಕ ಮಾಧ್ಯಮ ಖಾತೆಯಿಂದ ಹಂಚಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



