ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ‘ಆಲ್ಕೋಹಾಲ್ ಇನ್ ಬೆವರೇಜ್’ (AIB) ನೀತಿಯ ಬೆನ್ನಲ್ಲೇ ಕರ್ನಾಟಕದಲ್ಲಿ ಬಿಯರ್ ಮಾರಾಟ ಭರ್ಜರಿ ಏರಿಕೆ ಕಂಡಿದೆ. ಬೆಲೆ ಇಳಿಕೆಯ ಪರಿಣಾಮ ಬಿಯರ್ಗೆ ಬೇಡಿಕೆ ಹೆಚ್ಚಾಗಿದ್ದು, ಅಬಕಾರಿ ಇಲಾಖೆಯ ಆದಾಯದಲ್ಲೂ ಗಣನೀಯ ಜಿಗಿತ ದಾಖಲಾಗಿದೆ.
2026-27ನೇ ಸಾಲಿನ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗಿನ ಮೊದಲ ಆರು ತಿಂಗಳಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಬಿಯರ್ ಮಾರಾಟದಲ್ಲಿ ಬರೋಬ್ಬರಿ 41.32% ಬೆಳವಣಿಗೆ ದಾಖಲಾಗಿದೆ. ಏಪ್ರಿಲ್-ಜೂನ್ ಅವಧಿಯಲ್ಲಿ 34.92% ಇದ್ದ ಮಾರಾಟದ ಬೆಳವಣಿಗೆ, ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ 49.69%ಕ್ಕೆ ಏರಿಕೆಯಾಗಿದೆ.
ಮೇ 11ರಿಂದ ಜಾರಿಗೆ ಬಂದ ಹೊಸ AIB ನೀತಿಯಡಿ ಶೇ.5ಕ್ಕಿಂತ ಕಡಿಮೆ ಆಲ್ಕೋಹಾಲ್ ಹೊಂದಿರುವ ಲಾಗರ್ ಬಿಯರ್ ಸೇರಿದಂತೆ ಕೆಲವು ಮದ್ಯಗಳ ಗರಿಷ್ಠ ಚಿಲ್ಲರೆ ದರವನ್ನು ಕಡಿತಗೊಳಿಸಲಾಗಿತ್ತು. ಬೆಲೆ ಇಳಿಕೆಯ ಬಳಿಕ ಬಿಯರ್ ಖರೀದಿಗೆ ಗ್ರಾಹಕರ ಒಲವು ಹೆಚ್ಚಾಗಿರುವುದು ಮಾರಾಟದ ಅಂಕಿಅಂಶಗಳಿಂದ ಸ್ಪಷ್ಟವಾಗಿದೆ.
ಬಿಯರ್ನಿಂದಲೇ ₹3,377 ಕೋಟಿ ಆದಾಯ ಮೊದಲ ಆರು ತಿಂಗಳಲ್ಲಿ ಬಿಯರ್ ಮಾರಾಟದಿಂದ ಅಬಕಾರಿ ಇಲಾಖೆಗೆ ₹3,377.88 ಕೋಟಿ ಆದಾಯ ಬಂದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ₹2,836.64 ಕೋಟಿ ಸಂಗ್ರಹವಾಗಿತ್ತು. ಅಂದರೆ ಈ ಬಾರಿ ₹541.24 ಕೋಟಿ ಹೆಚ್ಚುವರಿ ಆದಾಯ ಸರ್ಕಾರದ ಬೊಕ್ಕಸಕ್ಕೆ ಹರಿದುಬಂದಿದೆ.
ಇನ್ನು ಅಬಕಾರಿ ಇಲಾಖೆಯ ಒಟ್ಟಾರೆ ಆದಾಯದಲ್ಲೂ ಶೇ.13.39ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹19,570.23 ಕೋಟಿ ಸಂಗ್ರಹವಾಗಿದ್ದರೆ, ಈ ಬಾರಿ ₹22,191.63 ಕೋಟಿ ರಾಜಸ್ವ ಸಂಗ್ರಹವಾಗಿದೆ.
IML ಮಾರಾಟದಲ್ಲಿ ಮಾತ್ರ ಶೇ.1.14ರಷ್ಟು ಏರಿಕೆ ಬಿಯರ್ಗೆ ಹೋಲಿಸಿದರೆ ಭಾರತೀಯ ನಿರ್ಮಿತ ಮದ್ಯ (IML) ಮಾರಾಟದಲ್ಲಿ ಕೇವಲ 1.14% ಏರಿಕೆ ದಾಖಲಾಗಿದೆ. ಆದರೂ IML ವಿಭಾಗದಿಂದ ₹17,424.57 ಕೋಟಿ ರಾಜಸ್ವ ಸರ್ಕಾರಕ್ಕೆ ಬಂದಿದೆ. ₹90ರಿಂದ ₹165ರವರೆಗಿನ ಆರಂಭಿಕ ನಾಲ್ಕು ಬೆಲೆ ಸ್ಲಾಬ್ಗಳ ಮದ್ಯವೇ ಒಟ್ಟು ಅಬಕಾರಿ ಆದಾಯದ ಶೇ.70ಕ್ಕೂ ಹೆಚ್ಚು ಪಾಲು ನೀಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
₹45 ಸಾವಿರ ಕೋಟಿ ಆದಾಯದ ಗುರಿ
2026-27ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ ಸರ್ಕಾರ ₹45,000 ಕೋಟಿ ಆದಾಯದ ಗುರಿ ನಿಗದಿಪಡಿಸಿದೆ. ವರ್ಷದ ಮೊದಲಾರ್ಧದಲ್ಲೇ ಗುರಿಯ ಅರ್ಧದಷ್ಟು ಪ್ರಗತಿ ಸಾಧಿಸಿರುವ ಇಲಾಖೆ, ದಸರಾ, ದೀಪಾವಳಿ ಸೇರಿದಂತೆ ಮುಂದಿನ ಸಾಲು ಸಾಲು ರಜಾದಿನಗಳಲ್ಲಿ ಮದ್ಯ ಮಾರಾಟ ಮತ್ತಷ್ಟು ಹೆಚ್ಚುವ ನಿರೀಕ್ಷೆಯಲ್ಲಿದೆ.
ಹೀಗಾಗಿ ಬಿಯರ್ ಮಾರಾಟದ ಭರ್ಜರಿ ಏರಿಕೆ ಅಬಕಾರಿ ಇಲಾಖೆಯ ಆದಾಯದ ಗುರಿ ತಲುಪಿಸಲು ಪ್ರಮುಖ ಕೊಡುಗೆ ನೀಡುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



