Kannada NewsKarnataka NewsLatest

*KPSC ನೇಮಕಾತಿ ಅಕ್ರಮ*: *ಶಾಂತ ಹೊಸಮನಿಗೆ ಮಧ್ಯಂತರ ಜಾಮೀನು ನಿರಾಕರಣೆ*

ಪ್ರಗತಿವಾಹಿನಿ ಸುದ್ದಿ: 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕೆಪಿಎಸ್‌ಸಿ ಸದಸ್ಯೆ ಶಾಂತ ಹೊಸಮನಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.

ಶಾಂತ ಹೊಸಮನಿ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದಾರೆ ಎಂದು ಸರ್ಕಾರದ ಪರ ವಕೀಲ ಬಿ.ಎನ್. ಜಗದೀಶ್ ವಾದಿಸಿದರು. ಅಭ್ಯರ್ಥಿಗಳಿಗೆ ಸಂದರ್ಶನದಲ್ಲಿ ಅಂಕ ನೀಡಿದ ವಿಚಾರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಕೆಪಿಎಸ್‌ಸಿ ಪರ ವಕೀಲೆ ಎಂ.ಆರ್. ಸಿಂಚನಾ ಸಹಾಯಕ ಕಾರ್ಯದರ್ಶಿ ನೀಡಿದ್ದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಈ ವರದಿಯನ್ನು ತನಿಖಾಧಿಕಾರಿಗೆ ನೀಡಲಾಗಿದೆಯೇ ಎಂದು ಹೈಕೋರ್ಟ್ ಪ್ರಶ್ನಿಸಿದಾಗ, ಇನ್ನೂ ನೀಡಿಲ್ಲ ಎಂದು ಕೆಪಿಎಸ್‌ಸಿ ಪರ ವಕೀಲೆ ತಿಳಿಸಿದರು.

ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪ್ರಕ್ರಿಯೆ ಕುರಿತು ವಾದ-ಪ್ರತಿವಾದ ನಡೆಯಿತು. 2025ರ ಜುಲೈನಲ್ಲಿ ನೇಮಕಾತಿಗೆ ತಡೆ ನೀಡಲಾಗಿತ್ತು ಎಂದು ಶಾಂತ ಹೊಸಮನಿ ಪರ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ನ್ಯಾಯಾಲಯದ ಗಮನಕ್ಕೆ ತಂದರು.

ಆಯ್ಕೆ ಪ್ರಕ್ರಿಯೆ ಮುಂದುವರಿಸಲು ಅವಕಾಶವಿದ್ದರೂ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಬಾರದು ಎಂಬ ಆದೇಶವಿದೆ ಎಂದು ಶಾಂತ ಪರ ವಕೀಲರು ವಾದಿಸಿದರು. ಈ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿನ ವಿವಿಧ ಹಂತಗಳ ಕುರಿತು ಪೀಠ ವಿಚಾರಣೆ ನಡೆಸಿತು.

ಸಂದರ್ಶನಕ್ಕೆ ಒಟ್ಟು 9 ಅಭ್ಯರ್ಥಿಗಳು ಹಾಜರಾಗಿದ್ದರು. ಬೆಳಗ್ಗೆ ಐವರು ಹಾಗೂ ಸಂಜೆ ನಾಲ್ವರು ಅಭ್ಯರ್ಥಿಗಳ ಸಂದರ್ಶನ ನಡೆದಿದ್ದು, ಕೆಪಿಎಸ್‌ಸಿಯ ಮೂವರು ಸದಸ್ಯರು ಸಂದರ್ಶನ ನಡೆಸಿದ್ದರು. ಈ 9 ಅಭ್ಯರ್ಥಿಗಳಿಗೆ ನೀಡಿರುವ ಅಂಕಗಳನ್ನು ಪರಿಶೀಲಿಸುವಂತೆ ಸರ್ಕಾರದ ಪರ ವಕೀಲರು ಮನವಿ ಮಾಡಿದರು. 2026ರ ಮೇ 8ರಂದು ನಡೆದ ಸಂದರ್ಶನದಲ್ಲಿ ಶಾಂತ ಹೊಸಮನಿಗೆ ನೀಡಲಾದ ಅಂಕಗಳ ಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಲಾಗಿದೆ.

ಎಲ್ಲ 9 ಅಭ್ಯರ್ಥಿಗಳಿಗೆ ನೀಡಲಾದ ಸಂದರ್ಶನದ ಅಂಕಗಳ ಪಟ್ಟಿಯನ್ನು ಸಲ್ಲಿಸುವಂತೆ ಕೆಪಿಎಸ್‌ಸಿ ನಿರ್ದೇಶಕರಿಗೆ ಹೈಕೋರ್ಟ್ ಸೂಚಿಸಿದೆ. ಈ ಹಂತದಲ್ಲಿ ಶಾಂತ ಹೊಸಮನಿಗೆ ಯಾವುದೇ ಮಧ್ಯಂತರ ರಕ್ಷಣೆ ನೀಡಲು ಪೀಠ ನಿರಾಕರಿಸಿದೆ.

ಈ ಪ್ರಕರಣದಲ್ಲಿ ಶಾಂತ ಹೊಸಮನಿ ಎಲ್ಲ ಆರೋಪಗಳಿಗೆ ಸಂಬಂಧ ಹೊಂದಿದ್ದಾರೆ ಎಂಬ ವಿಚಾರವನ್ನು ನ್ಯಾಯಾಲಯದ ಮುಂದೆ ಪ್ರಸ್ತಾಪಿಸಲಾಗಿದೆ. ಈ ಹಿಂದೆ ಕೂಡ ಶಾಂತ ಹೊಸಮನಿ ವಿರುದ್ಧದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತವಾಗಿತ್ತು. ತನಿಖೆಯಲ್ಲಿ ಸಂದರ್ಶನಕ್ಕೂ ಮುನ್ನ ಅಭ್ಯರ್ಥಿಯೊಂದಿಗೆ 13 ದೂರವಾಣಿ ಕರೆಗಳು ನಡೆದಿದ್ದವು ಎಂಬ ಅಂಶವನ್ನು ಪ್ರಾಸಿಕ್ಯೂಷನ್ ನ್ಯಾಯಾಲಯದ ಗಮನಕ್ಕೆ ತಂದಿತ್ತು.

384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸುವುದಕ್ಕೂ ಕರ್ನಾಟಕ ಹೈಕೋರ್ಟ್ ಈ ಹಿಂದೆ ತಡೆ ನೀಡಿತ್ತು. ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಮುಂದುವರಿದಿದ್ದು, ಶಾಂತ ಹೊಸಮನಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಾಳೆ ಮತ್ತೆ ನಡೆಯಲಿದೆ.

*‘ನಾನೇ ಹ್ಯಾಂಡಲ್ ಮಾಡ್ತೀನಿ ಎಂದ ಮೇಲೆ ನಾವೇಕೆ ಹೇಳಬೇಕು?’*: *ಎಸ್‌ಪಿಗೆ ನೋಟಿಸ್ ವಿಚಾರದಲ್ಲಿ ರೇವಣ್ಣ ಲೇವಡಿ* – Pragati Vahini

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button