CrimeHealthKannada NewsKarnataka NewsLatest

*ಚಿನ್ನಾಭರಣಕ್ಕಾಗಿ ವೃದ್ಧೆ ಕೊಲೆ ಶಂಕೆ*: *ಪ್ಲಾಸ್ಟಿಕ್ ಚೀಲದಲ್ಲಿ ಶವ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಮನೆಯಿಂದ ಹೊರಟ ಬಳಿಕ ನಾಪತ್ತೆಯಾಗಿದ್ದ 67 ವರ್ಷದ ವೃದ್ಧೆಯೊಬ್ಬರ ಶವ ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಕೊಲೆ ಶಂಕೆ ವ್ಯಕ್ತವಾಗಿದೆ. ಚಿನ್ನಾಭರಣಕ್ಕಾಗಿ ದುಷ್ಕರ್ಮಿಗಳು ಹತ್ಯೆ ಮಾಡಿ ಶವವನ್ನು ನಾಲೆಗೆ ಎಸೆದಿರುವ ಸಾಧ್ಯತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬೆಟ್ಟದಹಳ್ಳಿ ಗ್ರಾಮದ ಬಳಿಯ ನಾಲೆಯಲ್ಲಿ ಶವ ಪತ್ತೆಯಾಗಿದೆ. ಹಿರೀಹಳ್ಳಿಕೊಪ್ಪಲು ಗ್ರಾಮದ ಲಕ್ಷ್ಮಮ್ಮ ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ಅ.3ರಂದು ವಿಜಿ ಕೊಪ್ಪಲಿಗೆ ಹೋಗುವುದಾಗಿ ಪತಿ ಅಣ್ಣೇಗೌಡರಿಗೆ ತಿಳಿಸಿ ಮನೆಯಿಂದ ಹೊರಟಿದ್ದ ಲಕ್ಷ್ಮಮ್ಮ ಬಳಿಕ ಮನೆಗೆ ಮರಳಿರಲಿಲ್ಲ. ಹಲವು ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅಣ್ಣೇಗೌಡ ಅ.6ರಂದು ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದರು.

ದೂರು ನೀಡುವ ಸಂದರ್ಭದಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದು, ಬೆಟ್ಟದಹಳ್ಳಿ ಗ್ರಾಮದ ಬಳಿಯ ನಾಲೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ ಲಕ್ಷ್ಮಮ್ಮ ಅವರ ಶವ ಪತ್ತೆಯಾಗಿದೆ. ಮೃತದೇಹದ ಸ್ಥಿತಿ ಹಾಗೂ ಘಟನೆ ನಡೆದಿರುವ ರೀತಿಯ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಚಿನ್ನಾಭರಣಕ್ಕಾಗಿ ಕೊಲೆ ನಡೆದಿರಬಹುದೇ ಎಂಬ ಅನುಮಾನವೂ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ. ಆರೋಪಿಗಳ ಬಗ್ಗೆ ಸದ್ಯ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಘಟನಾ ಸ್ಥಳಕ್ಕೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button