*ರಷ್ಯಾ ಕರಾವಳಿಯಲ್ಲಿ ತೈಲ ಟ್ಯಾಂಕರ್‌ಗೆ ಡ್ರೋನ್ ದಾಳಿ*: *23 ಭಾರತೀಯ ಸಿಬ್ಬಂದಿ ಪಾರು*

ಪ್ರಗತಿವಾಹಿನಿ ಸುದ್ದಿ: ರಷ್ಯಾದ ಕಪ್ಪು ಸಮುದ್ರ ಕರಾವಳಿಯಲ್ಲಿ ಕಚ್ಚಾ ತೈಲ ಸಾಗಿಸುತ್ತಿದ್ದ ಲೈಬೀರಿಯಾ ಧ್ವಜದ ತೈಲ ಟ್ಯಾಂಕರ್ ಮೇಲೆ ನೌಕಾ ಡ್ರೋನ್ ದಾಳಿ ನಡೆದಿದ್ದು, ಹಡಗಿನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಹಡಗಿನಲ್ಲಿದ್ದ ಎಲ್ಲಾ 23 ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ರಷ್ಯಾದ ಸಾರಿಗೆ ಸಚಿವಾಲಯ ತಿಳಿಸಿದೆ.
ಅಫ್ರಾಮ್ಯಾಕ್ಸ್ ರಿಯೋ ಹೆಸರಿನ ಟ್ಯಾಂಕರ್ ರಷ್ಯಾದ ಜನಪ್ರಿಯ ಪ್ರವಾಸಿ ತಾಣ ಸೋಚಿ ಸಮೀಪ ಕಪ್ಪು ಸಮುದ್ರದಲ್ಲಿ ಸಾಗುತ್ತಿದ್ದ ವೇಳೆ ದಾಳಿ ನಡೆದಿದೆ. ರಷ್ಯಾದ ಅಧಿಕಾರಿಗಳ ಪ್ರಕಾರ, ನೌಕಾ ಡ್ರೋನ್‌ಗಳ ದಾಳಿಯ ಬಳಿಕ ಕಚ್ಚಾ ತೈಲಕ್ಕೆ ಬೆಂಕಿ ಹೊತ್ತಿಕೊಂಡಿದೆ.
ಘಟನೆಯ ಬಳಿಕ ಸಮುದ್ರದ ಮಧ್ಯೆ ಟ್ಯಾಂಕರ್ ಹೊತ್ತಿ ಉರಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ದಟ್ಟ ಕಪ್ಪು ಹೊಗೆ ಆಕಾಶಕ್ಕೆ ಚಿಮ್ಮುತ್ತಿರುವುದು ವಿಡಿಯೋಗಳಲ್ಲಿ ಕಂಡುಬಂದಿದೆ.
ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಆರಂಭದಲ್ಲಿ ಅಗ್ನಿಶಾಮಕ ಸಿಬ್ಬಂದಿಗೆ ಹಡಗಿನ ಸಮೀಪ ತೆರಳಿ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಬೆಂಕಿಯ ತೀವ್ರತೆ ಕಡಿಮೆಯಾದ ಬಳಿಕ ಅಗ್ನಿಶಾಮಕ ತಂಡಗಳು ಕಾರ್ಯಾಚರಣೆ ಮುಂದುವರಿಸಲು ಅಗತ್ಯ ವ್ಯವಸ್ಥೆ ಮಾಡಿಕೊಂಡಿವೆ ಎಂದು ರಷ್ಯಾ ತಿಳಿಸಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಸೋಚಿ ಸಮೀಪದ ಸಿರಿಯಸ್ ಪ್ರದೇಶದ ಕಡಲತೀರಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಗಾಳಿ ಮತ್ತು ನೀರಿನ ಗುಣಮಟ್ಟವನ್ನು ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ.
ಈ ಘಟನೆಗೂ ಮುನ್ನ ಕಪ್ಪು ಸಮುದ್ರದ ಮತ್ತೊಂದು ಭಾಗದಲ್ಲಿ ವಾಣಿಜ್ಯ ಹಡಗಿನ ಮೇಲೆ ರಷ್ಯಾದ ದಾಳಿ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಎಂವಿ ರೊಯಾಡ್ ಮಮ್ಮಡೋವ್ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಮೂವರು ಭಾರತೀಯರು ಗಾಯಗೊಂಡಿದ್ದರು. ಬಳಿಕ ಗಾಯಗೊಂಡ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿತ್ತು.
ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಕಪ್ಪು ಸಮುದ್ರದ ವಾಣಿಜ್ಯ ಹಡಗುಗಳ ಸುರಕ್ಷತೆ ಮತ್ತೆ ಪ್ರಶ್ನೆಯಾಗಿದೆ. ಇತ್ತೀಚಿನ ಬೆಳವಣಿಗೆಗಳಿಂದ ಸಂಘರ್ಷದ ಪ್ರದೇಶದಲ್ಲಿ ಸಾಗಾಟ ನಡೆಸುತ್ತಿರುವ ಭಾರತೀಯ ನಾವಿಕರ ಸುರಕ್ಷತೆ ಬಗ್ಗೆಯೂ ಆತಂಕ ಹೆಚ್ಚಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



