*ಇನ್ಫೋಸಿಸ್, ವಿಪ್ರೋ ಸೇರಿದಂತೆ ಭಾರತೀಯ ಹಲವು ಕಂಪನಿಗಳಿಗೆ ಶಾಕ್ ನೀಡಿದ ಡೊನಾಲ್ಡ್ ಟ್ರಂಪ್*

ಪ್ರಗತಿವಾಹಿನಿ ಸುದ್ದಿ: ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ವಿದೇಶಿ ನೌಕರರ ನೇಮಕಾತಿ ಹಾಗೂ ವಲಸೆ ವ್ಯವಸ್ಥೆಯ ಮೇಲಿನ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸಿದೆ.
ಇದರ ಭಾಗವಾಗಿ ಹಲವು ಪ್ರಮುಖ ಐಟಿ ಕಂಪನಿಗಳನ್ನು ಪರ್ಮನೆಂಟ್ ಲೇಬರ್ ಸರ್ಟಿಫಿಕೇಶನ್ (PERM) ಕಾರ್ಯಕ್ರಮದಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.
ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS), ವಿಪ್ರೋ, ಹೆಚ್‌ಸಿಎಲ್, ಕಾಗ್ನಿಜೆಂಟ್, ಕ್ಯಾಪ್‌ಜೆಮಿನಿ ಸೇರಿದಂತೆ ಮೈಕ್ರೋಸಾಫ್ಟ್ ಮತ್ತು ಅಡೋಬ್ ಸಂಸ್ಥೆಗಳ ಮೇಲೂ ಈ ಕ್ರಮ ಕೈಗೊಳ್ಳಲಾಗಿದೆ.
ಅಮೆರಿಕದಲ್ಲಿ ವಿದೇಶಿ ನೌಕರರಿಗೆ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಪ್ರಾಯೋಜಿಸಲು PERM ಪ್ರಕ್ರಿಯೆ ಪ್ರಮುಖ ಹಂತವಾಗಿದೆ. ಅಮೆರಿಕದ ಕಾರ್ಮಿಕ ಕಾರ್ಯದರ್ಶಿ ಕೀತ್ ಸೋಂಡರ್ಲಿಂಗ್ ಹಾಗೂ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಈ ಕ್ರಮವನ್ನು ಪ್ರಕಟಿಸಿದ್ದು, ಸಂಬಂಧಿತ ಕಂಪನಿಗಳಿಂದ ಹೊಸ PERM ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳ ಪ್ರಕ್ರಿಯೆಯನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
2009ರಿಂದ ಈ ಕಂಪನಿಗಳು ಸುಮಾರು 30 ಲಕ್ಷ ವಿದೇಶಿ ನೌಕರರ ವೀಸಾಗಳಿಗಾಗಿ ಅರ್ಜಿ ಸಲ್ಲಿಸಿದ್ದು, ಇದರಿಂದ ಅಮೆರಿಕದ ನಾಗರಿಕರಿಗೆ ಲಭ್ಯವಾಗಬೇಕಿದ್ದ ನೂರಾರು ಸಾವಿರ ಉದ್ಯೋಗಗಳು ವಿದೇಶಿ ನೌಕರರಿಗೆ ಹೋಗಿವೆ ಎಂಬುದು ಅಮೆರಿಕ ಸರ್ಕಾರದ ಆರೋಪವಾಗಿದೆ.
ಮೈಕ್ರೋಸಾಫ್ಟ್ ವಿರುದ್ಧವೂ ಜೆ.ಡಿ. ವ್ಯಾನ್ಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂಸ್ಥೆ ಸುಮಾರು 6,000 ಅಮೆರಿಕನ್ ಉದ್ಯೋಗಿಗಳನ್ನು ವಜಾಗೊಳಿಸಿದ ಸಂದರ್ಭದಲ್ಲೇ ಸಾವಿರಾರು ವಿದೇಶಿ ನೌಕರರಿಗೆ H-1B ವೀಸಾ ಹಾಗೂ ಗ್ರೀನ್ ಕಾರ್ಡ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇದರ ಬೆನ್ನಲ್ಲೇ, ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಉದ್ಯೋಗಾವಕಾಶ ಕಲ್ಪಿಸುವ ಆಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್ (OPT) ವ್ಯವಸ್ಥೆಯಲ್ಲೂ ಹೊಸ ಶುಲ್ಕ ಪ್ರಸ್ತಾವನೆ ಮುಂದಿಟ್ಟಿದೆ. ಇದರಡಿ ಶಿಕ್ಷಣ ಸಂಸ್ಥೆಗಳಿಗೆ ಪ್ರತಿ ವಿದ್ಯಾರ್ಥಿಗೆ ಗರಿಷ್ಠ 70 ಸಾವಿರ ಡಾಲರ್‌ವರೆಗೆ ಶುಲ್ಕ ವಿಧಿಸುವ ಪ್ರಸ್ತಾವನೆ ಚರ್ಚೆಯಲ್ಲಿದೆ.
ಅಮೆರಿಕದಲ್ಲಿ ಉದ್ಯೋಗ ಹಾಗೂ ಶಾಶ್ವತ ನೆಲೆಯ ಕನಸು ಕಾಣುತ್ತಿರುವ ಸಾವಿರಾರು ಭಾರತೀಯ ಐಟಿ ವೃತ್ತಿಪರರು ಮತ್ತು ವಿದ್ಯಾರ್ಥಿಗಳಲ್ಲಿ ಈ ಬೆಳವಣಿಗೆ ಆತಂಕ ಮೂಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


