CrimeKannada NewsLatestNational

*ತನ್ನ ಮನೆ ಸ್ವಚ್ಛತಾ ಕಾರ್ಯಕ್ಕೆ ಮಹಿಳಾ ಕೈದಿಯನ್ನು ಕರೆದುಕೊಂಡು ಹೋಗಿದ್ದ ಜೈಲಾಧಿಕಾರಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಜೈಲಾಧಿಕಾರಿಯೊಬ್ಬರು ತಮ್ಮ ಮನೆಯನ್ನು ಸ್ವಚ್ಛತಾ ಕಾರ್ಯಕ್ಕೆ ಜೈಲಿನ ಇಬ್ಬರು ಮಹಿಳಾ ಕೈದಿಗಳನ್ನು ಅಕ್ರಮವಾಗಿ ಕರೆದುಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಆರೋಪದ ಮೇಲೆ ಜೈಲಾಧಿಕಾರಿಯನ್ನು ಬಂಧಿಸಿರುವ ಘಟನೆ ನಡೆದಿದೆ.

ಅಜ್ಮೀರ್ ಮಹಿಳಾ ಜೈಲಿನ ಉಸ್ತುವಾರಿ ಜೈಲರ್ ದಿವ್ಯಾ ಚೌಧರಿ ಬಂಧಿತ ಅಧಿಕಾರಿ. ರಾಜಸ್ಥಾನ ಪೊಲೀಸರು ಘಟನೆ ಬಳಿಕ ಕಳೆದ ಎರಡು ತಿಂಗಳಿಂದ ತಲೆಮರೆಸಿಕೊಂಡಿದ್ದ ಜೈಲಾಧಿಕಾರಿಯನ್ನು ಅಜ್ಮೀರ್ ಪೊಲೀಸರ ವಿಶೇಷ ತಂಡದ ಸಹಾಯದಿಂದ ಕೋಟಾ ನಗರದ ಫ್ಲಾಟ್ ಒಂದರಲ್ಲಿ ಪತ್ತೆಹಚ್ಚಿ ಬಂಧಿಸಿದೆ.

ಅಜ್ಮೀರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರ್ಷವರ್ಧನ್ ಅಗರ್ವಾಲ್ ಅವರ ಪ್ರಕಾರ, ಜುಲೈ 12 ರಂದು ಈ ಘಟನೆ ನಡೆದಿತ್ತು. ಉಸ್ತುವಾರಿ ಜೈಲರ್ ಆಗಿದ್ದ ದಿವ್ಯಾ ಚೌಧರಿ ಮತ್ತು ಮಹಿಳಾ ಕಾವಲುಗಾರ್ತಿ ಸೋನಿಯಾ ಚೌಧರಿ ಜೈಲಿನ ಮುಖ್ಯ ದ್ವಾರದಲ್ಲಿದ್ದ ಭದ್ರತಾ ಸಿಬ್ಬಂದಿಗೆ ಬೆದರಿಕೆ ಹಾಕಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದರು.

ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕಿರಣ್ ಮತ್ತು ವಿಚಾರಣಾಧೀನ ಕೈದಿ ಸನಾ ಎಂಬ ಇಬ್ಬರು ಮಹಿಳೆಯರನ್ನು ಜೈಲಿನಿಂದ ಅಕ್ರಮವಾಗಿ ಹೊರಗೆ ಕರೆದೊಯ್ದಿದ್ದರು. ಇಬ್ಬರೂ ಕೈದಿಗಳನ್ನು ಅಜ್ಮೀರ್‌ನ ಎಆರ್‌ಜಿ ಸಿಟಿಯಲ್ಲಿದ್ದ ಜೈಲರ್‌ನ ತಮ್ಮ ಮನೆಗೆ ಕರೆದೊಯ್ದು ಮನೆಯ ಸ್ವಚ್ಛತಾ ಕಾರ್ಯಕ್ಕೆ ಬಳಸಿಕೊಂಡಿದ್ದಾರೆ.

ಜೈಲಿನ ಕಾವಲುಗಾರ ಮಹಿಪಾಲ್ ಮಂಗ್ಲೋಡಾ ನೀಡಿದ ಅಧಿಕೃತ ದೂರಿನ ಮೇರೆಗೆ ಆಗಸ್ಟ್ 5 ರಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೈಲು ಇಲಾಖೆಯ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ದಿವ್ಯಾ ಚೌಧರಿ ಮತ್ತು ಸೋನಿಯಾ ಚೌಧರಿ ಇಬ್ಬರನ್ನೂ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಬಂಧನ ಭೀತಿಯಿಂದ ಇಬ್ಬರೂ ತಲೆಮರೆಸಿಕೊಂಡಿದ್ದರು.

ಪೊಲೀಸರು ಜೈಲಿನ ಸಿಸಿಟಿವಿ ದೃಶ್ಯಾವಳಿಗಳು, ಗೇಟ್ ರಿಜಿಸ್ಟರ್ ದಾಖಲೆಗಳು ಮತ್ತು ಮೊಬೈಲ್ ಕರೆ ವಿವರಗಳನ್ನು (CDR) ತಾಂತ್ರಿಕವಾಗಿ ಪರಿಶೀಲಿಸಿದಾಗ ಜೈಲರ್‌ನ ಕೃತ್ಯ ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಮೇರೆಗೆ ಕೋಟಾ ನಗರದ ವಸತಿ ಸಂಕೀರ್ಣದ ಮೇಲೆ ದಾಳಿ ನಡೆಸಿದ ವಿಶೇಷ ಪೊಲೀಸ್ ತಂಡ ದಿವ್ಯಾ ಚೌಧರಿಯನ್ನು ಬಂಧಿಸಿದೆ.

ಕಾರಾಗೃಹ ನಿಯಮಾವಳಿಗಳ ಪ್ರಕಾರ, ನ್ಯಾಯಾಲಯದ ಆದೇಶ ಅಥವಾ ತುರ್ತು ವೈದ್ಯಕೀಯ ಚಿಕಿತ್ಸೆಯಂತಹ ಅಧಿಕೃತ ಕಾರಣಗಳಿಲ್ಲದೆ ಯಾವುದೇ ಕೈದಿಯನ್ನು ಹೊರಗೆ ಕರೆದೊಯ್ಯುವುದು ಕಾನೂನುಬಾಹಿರ ಹಾಗೂ ಅಪರಾಧ.

ಪ್ರಕರಣದಲ್ಲಿ ಸಹಕರಿಸಿದ್ದ ಮಹಿಳಾ ಕಾನ್‌ಸ್ಟೆಬಲ್ ಸೋನಿಯಾ ಚೌಧರಿ ಇನ್ನೂ ತಲೆಮರೆಸಿಕೊಂಡಿದ್ದು, ಆಕೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button