CrimeLatestNational

*ರೈಲಿನಲ್ಲಿ ಭಯವಾಗ್ತಿದೆ, ವಾತಾವರಣ ಸರಿ ಇಲ್ಲ ಎಂದು ಪೋಷಕರಿಗೆ ಕರೆ ಮಾಡಿದ್ದ ವಿದ್ಯಾರ್ಥಿನಿ ರೈಲ್ವೆ ಹಳಿ ಬಳಿ ಶವವಾಗಿ ಪತ್ತೆ*

ಪ್ರಗತಿವಾಹಿನಿ ಸುದ್ದಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ರೈಲಿನಲ್ಲಿ ಕುಡುಕರ ಹಾವಳಿ, ಕೆಲ ಹುಡುಗರಿಂದ ತೊಂದರೆಯಾಗುತ್ತಿದೆ. ತುಂಬಾ ಭಯವಾಗುತ್ತಿದೆ ಎಂದು ಪೋಷಕರಿಗೆ ಕರೆ ಮಾಡಿ ಹೇಳಿದ್ದವಳು ರೈಲ್ವೆ ಹಳಿಗಳ ಮೇಲೆ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

ಅಸ್ಸಾಂನ 20 ವರ್ಷದ ಕಾಲೇಜು ವಿದ್ಯಾರ್ಥಿನಿ ಹಿಮಶ್ರೀ ಮೃತದೇಹ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ರೈಲ್ವೆ ಹಳಿಗಳ ಬಳಿ ಪತ್ತೆಯಾಗಿದೆ. ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವಿದ್ಯಾರ್ಥಿನಿಯ ಕುಟುಂಬವು ರೈಲ್ವೆ ಭದ್ರತಾ ಪಡೆ (RPF) ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಸ್ಸಾಂನ ಕಾಮರೂಪ ಮಹಾನಗರ ಜಿಲ್ಲೆಯ ಬೋಂಡಾ ಪ್ರದೇಶದ ನಿವಾಸಿಯಾಗಿದ್ದ ವಿದ್ಯಾರ್ಥಿನಿ, ಗುವಾಹಟಿಯ ಬಿ. ಬರೂವಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು. ನೃತ್ಯ ತಂಡದೊಂದಿಗೆ ವಿಶಾಖಪಟ್ಟಣಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಿದ್ದರು. ಪರೀಕ್ಷೆ ಇದ್ದ ಕಾರಣ ತಂಡದ ಇತರ ಸದಸ್ಯರಿಗಿಂತ ಮೊದಲೇ ಒಬ್ಬರೇ ಮನೆಗೆ ಮರಳುತ್ತಿದ್ದರು. ಅಕ್ಟೋಬರ್ 6ರ ಮಧ್ಯರಾತ್ರಿ ಸುಮಾರಿಗೆ ಅವರು ವಿಶಾಖಪಟ್ಟಣ ರೈಲು ನಿಲ್ದಾಣದಿಂದ ಕನ್ಯಾಕುಮಾರಿ–ದಿಬ್ರುಗಢ್ ವಿವೇಕ್ ಎಕ್ಸ್‌ಪ್ರೆಸ್ ರೈಲನ್ನು ಹತ್ತಿದ್ದರು.

ಕುಟುಂಬದ ಪ್ರಕಾರ, ರೈಲು ಹತ್ತಿದ ಬಳಿಕ ವಿದ್ಯಾರ್ಥಿನಿ ತಮ್ಮ ಅತ್ತಿಗೆ ಮತ್ತು ಸ್ನೇಹಿತೆಗೆ ಕರೆ ಮಾಡಿ, ಬೋಗಿಯಲ್ಲಿದ್ದ ಕೆಲವು ಪುರುಷರು ಕುಡಿದ ಮತ್ತಿನಲ್ಲಿದ್ದು, ಅಲ್ಲಿನ ವಾತಾವರಣದಿಂದ ತಮಗೆ ಅಸುರಕ್ಷಿತವೆನಿಸುತ್ತಿದೆ ಎಂದು ತಿಳಿಸಿದ್ದರು. ಅವರು ರೈಲಿನ ಬೋಗಿಯ ವಿಡಿಯೊವೊಂದನ್ನೂ ಸ್ನೇಹಿತೆಗೆ ಕಳುಹಿಸಿದ್ದರು. ಅಕ್ಟೋಬರ್ 6ರ ಮುಂಜಾನೆ ಸುಮಾರು 2.30ರಿಂದ 3 ಗಂಟೆಯ ನಡುವೆ ಕುಟುಂಬದವರೊಂದಿಗೆ ಸಂಪರ್ಕ ಕಡಿತಗೊಂಡಿತು. ಬಳಿಕ ಅವರ ಮೊಬೈಲ್ ಫೋನ್ ಸಂಪರ್ಕಕ್ಕೆ ಸಿಗಲಿಲ್ಲ.

ಹಿಮಶ್ರೀ ಸಂಪರ್ಕಕ್ಕೆ ಸಿಗದಿದ್ದರಿಂದ ಕುಟುಂಬದವರು ರೈಲ್ವೆ ಸಹಾಯವಾಣಿಯನ್ನು ಸಂಪರ್ಕಿಸಿ ಮಾಹಿತಿ ನೀಡಿದರು. ರೈಲ್ವೆ ಮದದ್ ಪೋರ್ಟಲ್‌ನಲ್ಲಿಯೂ ಮಹಿಳಾ ಪ್ರಯಾಣಿಕೆಯೊಂದಿಗೆ ಅನುಚಿತವಾಗಿ ವರ್ತಿಸಿದ ಕುರಿತು ದೂರು ದಾಖಲಾಗಿತ್ತು ಎಂದು ಈಶಾನ್ಯ ಗಡಿನಾಡು ರೈಲ್ವೆ ತಿಳಿಸಿದೆ. ದೂರಿನ ಹಿನ್ನೆಲೆಯಲ್ಲಿ ಶ್ರೀಕಾಕುಳಂ ರಸ್ತೆ ನಿಲ್ದಾಣದಲ್ಲಿ ಆರ್‌ಪಿಎಫ್ ಸಿಬ್ಬಂದಿ ರೈಲಿನ ಸಾಮಾನ್ಯ ಮತ್ತು ಸ್ಲೀಪರ್ ಬೋಗಿಗಳನ್ನು ಪರಿಶೀಲಿಸಿದರು. ಆದರೆ, ಆಕೆ ಪತ್ತೆಯಾಗಿರಲಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಕುಟುಂಬದವರು ಕಂಗಾಲಾಗಿದ್ದರು.ಮಗಳ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಆದರೆ ಹೇಮಶ್ರೀ ಮೃತದೇಹ ರೈಲ್ವೆ ಹಳಿಗಳ ಬಳಿ ಪತ್ತೆಯಾಗಿದೆ. ಅವರ ಎರಡು ಬ್ಯಾಗ್ ಗಳು ರೈಲಿನ ಬೋಗಿಯಲ್ಲೇ ಇದ್ದವು.

ವಿದ್ಯಾರ್ಥಿನಿಯ ಕುಟುಂಬ ಮಗಳ ಸಾವಿನ ಹಿಂದೆ ಅನುಮಾನಾಸ್ಪದ ಸಂಗತಿಗಳಿವೆ ಎಂದು ಆರೋಪಿಸಿ, ಸಮಗ್ರ ತನಿಖೆಗೆ ಒತ್ತಾಯಿಸಿದೆ. ರೈಲ್ವೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಂಡಿದ್ದಾರೆಯೇ ಎಂಬುದರ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದೆ. ಇನ್ನೊಂದೆಡೆ, ಪಲಾಸಾ ಸರ್ಕಾರಿ ರೈಲ್ವೆ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಆಕೆ ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಬಿದ್ದಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಅವರು ಹೇಗೆ ರೈಲಿನಿಂದ ಹೊರಬಂದರು ಮತ್ತು ಸಾವಿಗೆ ನಿಖರವಾಗಿ ಏನು ಕಾರಣ ಎಂಬುದು ಇನ್ನೂ ದೃಢಪಟ್ಟಿಲ್ಲ.

ಶ್ರೀಕಾಕುಳಂ ಜಿಲ್ಲೆಯ ಪೊಂಡೂರು ಮತ್ತು ದುಸಿ ರೈಲ್ವೆ ವಿಭಾಗಗಳ ನಡುವಿನ ಹಳಿಗಳ ಬಳಿ ಮೃತದೇಹ ಪತ್ತೆಯಾಗಿದೆ. ಪೊಲೀಸರು ಮೃತದೇಹವನ್ನು ಶ್ರೀಕಾಕುಳಂನ ಸರ್ಕಾರಿ ರಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಿ, ಕಾನೂನು ಪ್ರಕ್ರಿಯೆ ಹಾಗೂ ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮಾಡಿದ್ದಾರೆ. ವಿಶಾಖಪಟ್ಟಣ, ವಿಜಯನಗರಂ ಮತ್ತು ಶ್ರೀಕಾಕುಳಂ ರೈಲು ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ವಿದ್ಯಾರ್ಥಿ ಸಾವಿಗೆ ಇನ್ನಷ್ಟೇ ಕಾರಣ ತಿಳಿಯಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button