*11 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ*: *ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ನಿಶಾ ವಿರುದ್ಧ ಪೋಕ್ಸೋ ಕೇಸ್*

ಪ್ರಗತಿವಾಹಿನಿ ಸುದ್ದಿ: ಕೇರಳದ ಪ್ರಸಿದ್ಧ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ನಿಶಾ ರಾಫೆಲ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. 11 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಕೇರಳದ ತ್ರಿಶೂರ್ ಪಶ್ಚಿಮ ಠಾಣೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ದೂರಿನ ಹಿನ್ನೆಲೆಯಲ್ಲಿ ಬಾಲಕನನ್ನು ತ್ರಿಶೂರ್ ಜನರಲ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಮತ್ತು ಕಾನೂನು ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರಾಥಮಿಕ ಪರೀಕ್ಷೆಯಲ್ಲಿ ದೌರ್ಜನ್ಯದ ಲಕ್ಷಣಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ತನಿಖೆಯಿಂದ ತಿಳಿಯಬೇಕಿದೆ.
ಈ ಪ್ರಕರಣದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇನ್ನೊಂದೆಡೆ, ನಿಶಾ ರಾಫೆಲ್ ಅವರ ಆಪ್ತ ಮೂಲಗಳು ಆರೋಪಗಳನ್ನು ತಳ್ಳಿಹಾಕಿವೆ. ಘಟನೆ ನಡೆದಿಲ್ಲ ಎಂದು ವಾದಿಸಿರುವ ಮೂಲಗಳು, ಪ್ರಕರಣದ ಹಿಂದೆ ವೈಯಕ್ತಿಕ ದ್ವೇಷವಿದೆ ಎಂದು ಹೇಳಿಕೊಂಡಿವೆ.
ಎರಡು ಫ್ಲಾಟ್ಗಳ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಿಶಾ ಮತ್ತು ದೂರುದಾರರ ಕುಟುಂಬದ ನಡುವೆ ದೀರ್ಘಕಾಲದಿಂದ ಕಾನೂನು ಸಂಘರ್ಷ ನಡೆಯುತ್ತಿದೆ ಎನ್ನಲಾಗಿದೆ. ಈ ಹಳೆಯ ವಿವಾದದ ಹಿನ್ನೆಲೆಯಲ್ಲಿ ಸುಳ್ಳು ದೂರು ನೀಡಲಾಗಿದೆ ಎಂಬುದು ನಿಶಾ ಪರದವರ ವಾದವಾಗಿದೆ. ಪೊಲೀಸರು ಪ್ರಕರಣದ ವಿವಿಧ ಆಯಾಮಗಳನ್ನು ಪರಿಶೀಲಿಸುತ್ತಿದ್ದಾರೆ. ವೈದ್ಯಕೀಯ ದಾಖಲೆಗಳು, ದೂರು ಹಾಗೂ ಸಂಬಂಧಿತ ಸಾಕ್ಷ್ಯಗಳನ್ನು ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



