EducationKarnataka NewsLatest

*ಅನುದಾನಿತ ಶಾಲೆ–ಕಾಲೇಜುಗಳ ಖಾಲಿ ಹುದ್ದೆ ಭರ್ತಿ ವಿಚಾರ*: *ಮಹತ್ವದ ತೀರ್ಪು ನೀಡಿದ ಹೈಕೋರ್ಟ್*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ಖಾಸಗಿ ಅನುದಾನಿತ ಪ್ರಾಥಮಿಕ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ನಿಧನ ಮತ್ತು ರಾಜೀನಾಮೆಯಿಂದ ತೆರವಾಗಿರುವ ಬೋಧಕ ಹಾಗೂ ಇತರ ಹುದ್ದೆಗಳನ್ನು ಭರ್ತಿ ಮಾಡುವ ವಿಚಾರದಲ್ಲಿ ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಖಾಲಿ ಹುದ್ದೆಗಳ ಭರ್ತಿಗೆ 2015ರ ಡಿಸೆಂಬರ್ 31ರವರೆಗೆ ಗಡುವು ವಿಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ರದ್ದುಪಡಿಸಿದೆ.

ನ್ಯಾಯಮೂರ್ತಿ ಡಿ.ಕೆ.ಸಿಂಗ್ ನೇತೃತ್ವದ ವಿಭಾಗೀಯ ಪೀಠವು ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಸರ್ಕಾರವು ಸೂಕ್ತ ನೀತಿ ಅಥವಾ ತಾರ್ಕಿಕ ಕಾರಣಗಳನ್ನು ನೀಡದೆ, 2015ರ ಡಿಸೆಂಬರ್ 31ರ ನಂತರ ಖಾಲಿಯಾದ ಹುದ್ದೆಗಳ ನೇಮಕಾತಿಗೆ ಅನುಮತಿ ಕೋರಿ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಿರುವುದು ಸರಿಯಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ರಾಜ್ಯದ ಖಾಸಗಿ ಅನುದಾನಿತ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ನಿಧನ ಹಾಗೂ ರಾಜೀನಾಮೆಯಿಂದ ಹಲವು ಹುದ್ದೆಗಳು ಖಾಲಿಯಾಗಿದ್ದವು. ಈ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಅನುಮತಿ ಅಗತ್ಯವಾಗಿತ್ತು. ಆದರೆ, 2015ರ ಡಿಸೆಂಬರ್ 31ರವರೆಗೆ ತೆರವಾದ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲು ಅನುಮತಿ ನೀಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿತ್ತು.

ಇದರಿಂದಾಗಿ ನಿಗದಿತ ದಿನಾಂಕದ ನಂತರ ಖಾಲಿಯಾದ ಹುದ್ದೆಗಳನ್ನು ಭರ್ತಿ ಮಾಡಲು ಶಿಕ್ಷಣ ಸಂಸ್ಥೆಗಳಿಗೆ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟವು ಹೈಕೋರ್ಟ್ ಮೆಟ್ಟಿಲೇರಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು ಶಿಕ್ಷಣ ಸಂಸ್ಥೆಗಳ ಪರವಾಗಿ 2023ರ ಡಿಸೆಂಬರ್ 8ರಂದು ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾದ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ನೇಮಕಾತಿ ನಿರ್ಬಂಧ ವಿಧಿಸಲಾಗಿತ್ತು ಎಂದು ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ವಾದಿಸಿತ್ತು.

ಆದರೆ, ಈ ವಾದವನ್ನು ವಿಭಾಗೀಯ ಪೀಠ ಒಪ್ಪಿಲ್ಲ. ಕೋವಿಡ್ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ 2020ರ ಜೂನ್ 10ರಂದು ಹೊರಡಿಸಿದ್ದ ನೇಮಕಾತಿ ನಿರ್ಬಂಧವು 2020-21ನೇ ಹಣಕಾಸು ವರ್ಷಕ್ಕೆ ಮಾತ್ರ ಸೀಮಿತವಾಗಿತ್ತು. ಅದನ್ನು ಶಾಶ್ವತ ನೇಮಕಾತಿ ನಿಷೇಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಈ ತೀರ್ಪಿನಿಂದ ಖಾಸಗಿ ಅನುದಾನಿತ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ದೀರ್ಘಕಾಲದಿಂದ ಖಾಲಿ ಉಳಿದಿರುವ ಹುದ್ದೆಗಳ ಭರ್ತಿಗೆ ಅನುಮತಿ ಪಡೆಯುವ ವಿಚಾರದಲ್ಲಿ ಮಹತ್ವದ ಕಾನೂನು ಪರಿಹಾರ ದೊರೆತಂತಾಗಿದೆ.

ಅಲ್ಲದೆ, ಕೇವಲ 2015ರ ಡಿಸೆಂಬರ್ 31ರ ನಂತರ ಹುದ್ದೆ ಖಾಲಿಯಾಗಿದೆ ಎಂಬ ಒಂದೇ ಕಾರಣಕ್ಕೆ ನೇಮಕಾತಿ ಅನುಮತಿ ನಿರಾಕರಿಸುವ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತಡೆ ನೀಡಿದೆ. ಇದರಿಂದ ಅನುದಾನಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಮತ್ತು ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ನಿರೀಕ್ಷೆ ಮೂಡಿದೆ.

Related Articles

Back to top button