EducationKarnataka NewsLatest

*ಪ್ರೌಢಶಾಲಾ ಶಿಕ್ಷಕರಿಗೆ ಉಪನ್ಯಾಸಕರ ಹುದ್ದೆಗೆ ಬಡ್ತಿ*: *ದಾಖಲೆ ಸಲ್ಲಿಸಲು ಕೊನೆ ದಿನಾಂಕ ಪ್ರಕಟ*: *ದಾಖಲೆ ಇಲ್ಲದ ಹೆಸರು ಕೈಬಿಡುವ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ಪ್ರೌಢಶಾಲಾ ಸಹ ಶಿಕ್ಷಕರ ವೃಂದದಿಂದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವೃಂದಕ್ಕೆ ಬಡ್ತಿ ನೀಡುವ ಪ್ರಕ್ರಿಯೆಯನ್ನು ಶಾಲಾ ಶಿಕ್ಷಣ ಇಲಾಖೆ ಚುರುಕುಗೊಳಿಸಿದೆ. ಈ ಸಂಬಂಧ ಬಡ್ತಿಗೆ ಅರ್ಹತೆ ಪಡೆದಿರುವ ಶಿಕ್ಷಕರು ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸೂಚಿಸಲಾಗಿದೆ.

ನವೆಂಬರ್ 20, 2026 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಬಡ್ತಿಗೆ ಅರ್ಹತೆ ಪಡೆದಿರುವ ಶಿಕ್ಷಕರು ಅಗತ್ಯ ದಾಖಲೆಗಳನ್ನು ನವೆಂಬರ್ 20ರೊಳಗೆ ಸಲ್ಲಿಸಲು ತಿಳಿಸಲಾಗಿದೆ.

ಈಗಾಗಲೇ ಉಪನ್ಯಾಸಕರ ಹುದ್ದೆಗೆ ಬಡ್ತಿ ಪಡೆಯಲು ಅರ್ಹರಾಗಿರುವ ಶಿಕ್ಷಕರ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಸಲ್ಲಿಸಲಾಗಿದೆ. ಅಲ್ಲದೆ, ಬಡ್ತಿಗಾಗಿ ನಡೆಸಿದ ಅರ್ಹತಾ ಪರೀಕ್ಷೆಯಲ್ಲಿಯೂ ಕೆಲವು ಶಿಕ್ಷಕರು ಅರ್ಹತೆ ಪಡೆದಿದ್ದಾರೆ.

ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು (ಪ್ರೌಢ ಶಿಕ್ಷಣ) ಹೊರಡಿಸಿರುವ ಸೂಚನೆಯ ಪ್ರಕಾರ, ರಾಜ್ಯದ 123 ಶಿಕ್ಷಕರಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಸ್ವೀಕೃತವಾಗಿಲ್ಲ. ಈ ಹಿಂದೆ ಅಕ್ಟೋಬರ್ 9, 2026ರೊಳಗೆ ದಾಖಲೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ನವೆಂಬರ್ 7ರಂದು ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿಯೂ ಎಲ್ಲಾ ಶೈಕ್ಷಣಿಕ ಜಿಲ್ಲೆಗಳ ಉಪನಿರ್ದೇಶಕರಿಗೆ ಅಗತ್ಯ ದಾಖಲೆಗಳನ್ನು ತುರ್ತಾಗಿ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿತ್ತು.

ಆದರೂ ದಾಖಲೆಗಳು ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಬಡ್ತಿ ಪ್ರಕ್ರಿಯೆಯಲ್ಲಿ ಅನಗತ್ಯ ವಿಳಂಬವಾಗುತ್ತಿದೆ ಎಂದು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಅನುಬಂಧ-01ರಲ್ಲಿ ಪಟ್ಟಿ ಮಾಡಿರುವ 123 ಶಿಕ್ಷಕರನ್ನು ವೈಯಕ್ತಿಕವಾಗಿ ಸಂಪರ್ಕಿಸಿ, ಅಗತ್ಯ ದಾಖಲೆಗಳನ್ನು ನವೆಂಬರ್ 20ರೊಳಗೆ ಸಂಗ್ರಹಿಸಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಬಡ್ತಿಗೆ ಅಗತ್ಯವಿರುವ ದಾಖಲೆ:

ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿರುವಂತೆ ಅರ್ಹ ಶಿಕ್ಷಕರು ಈ ಕೆಳಗಿನ 13 ಅಂಶಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಬೇಕು.
ಕಳೆದ ಐದು ವರ್ಷಗಳ (2021-22ರಿಂದ 2025-26ರವರೆಗೆ) ವಾರ್ಷಿಕ ಕಾರ್ಯನಿರ್ವಹಣಾ ವರದಿ ಹಾಗೂ ಆಯಾ ವರ್ಷದ ಚರಾಸ್ತಿ ಮತ್ತು ಸ್ಥಿರಾಸ್ತಿ ವಿವರಗಳು.
ಸಹ ಶಿಕ್ಷಕರ ನೇಮಕಾತಿ ಆದೇಶದ ಪ್ರತಿ.
ಖಾಯಂ ಪೂರ್ವ ಸೇವಾ ದೃಢೀಕರಣದ ಪ್ರತಿ.
ತೃಪ್ತಿಕರ ಸೇವಾ ದೃಢೀಕರಣ ಪತ್ರ.
ಯಾವುದೇ ಇಲಾಖಾ ವಿಚಾರಣೆ ಬಾಕಿ ಇಲ್ಲದಿರುವ ಬಗ್ಗೆ ಪ್ರಮಾಣಪತ್ರ.
ಯಾವುದೇ ನ್ಯಾಯಾಂಗ ತನಿಖೆ ಅಥವಾ ಕ್ರಿಮಿನಲ್ ಪ್ರಕರಣಗಳು ಇಲ್ಲದಿರುವ ಬಗ್ಗೆ ಪ್ರಮಾಣಪತ್ರ.
ಸಾಧಾರಣ ರಜೆ, ಅಸಾಧಾರಣ ರಜೆ ಅಥವಾ ವೇತನರಹಿತ ರಜೆ ಪಡೆದಿರುವ ವಿವರಗಳು ಹಾಗೂ ಅನಧಿಕೃತ ಗೈರುಹಾಜರಿ ಇಲ್ಲದಿರುವ ಬಗ್ಗೆ ಪ್ರಮಾಣಪತ್ರ.
ಸ್ನಾತಕೋತ್ತರ ಪದವಿ ಮತ್ತು ಬಿ.ಇಡಿ ಪದವಿಗಳ ನೈಜತೆ ಪ್ರಮಾಣಪತ್ರಗಳು.
ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಪ್ರಮಾಣಪತ್ರಗಳು.
ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕರಿಗೆ 371ಜೆ ಪ್ರಮಾಣಪತ್ರ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶಿಕ್ಷಕರಿಗೆ ಜಾತಿ ಪ್ರಮಾಣಪತ್ರದ ಸಿಂಧುತ್ವ ಪ್ರಮಾಣಪತ್ರ.
ಜನ್ಮ ದಿನಾಂಕ, ಸೇವೆಗೆ ಸೇರಿದ ದಿನಾಂಕ, ಪ್ರಸ್ತುತ ವೃಂದದಲ್ಲಿ ಸಲ್ಲಿಸಿರುವ ಅರ್ಹತಾದಾಯಕ ಸೇವೆ ಹಾಗೂ ಇತರೆ ಸೇವಾ ವಿವರಗಳು.
ವಿಕಲಚೇತನ ಶಿಕ್ಷಕರಾಗಿದ್ದಲ್ಲಿ UDID ಪ್ರಮಾಣಪತ್ರ ಅಥವಾ ದೃಢೀಕರಿಸಿದ ಇತರೆ ಪ್ರಮಾಣಪತ್ರ.

ದಾಖಲೆ ಸಲ್ಲಿಸದಿದ್ದರೆ ಬಡ್ತಿ ಆಯ್ಕೆ ಪಟ್ಟಿಯಿಂದ ಹೆಸರು ಕೈಬಿಡುವ ಎಚ್ಚರಿಕೆ:
ಇಲಾಖೆಯ ಸೂಚನೆಯಂತೆ, ನವೆಂಬರ್ 20, 2026ರೊಳಗೆ ಸ್ವೀಕೃತವಾಗುವ ದಾಖಲೆಗಳನ್ನು ಮಾತ್ರ ಬಡ್ತಿ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ. ಬಡ್ತಿ ಪಡೆಯಲು ಇಚ್ಛಿಸದ ಶಿಕ್ಷಕರಿಂದ ಅವರ ಸಹಿಯುಳ್ಳ FORGO ಪತ್ರವನ್ನು ಪಡೆಯಬೇಕು.

ನಿಗದಿತ ಅವಧಿಯೊಳಗೆ ದಾಖಲೆಗಳನ್ನು ಸಲ್ಲಿಸದ ಸಹ ಶಿಕ್ಷಕರ ಹೆಸರನ್ನು ಉಪನ್ಯಾಸಕರ ಹುದ್ದೆಯ ಆಯ್ಕೆ ಪಟ್ಟಿಯಿಂದ ಕೈಬಿಡಲಾಗುವುದು ಎಂದು ಇಲಾಖೆ ಸ್ಪಷ್ಟ ಎಚ್ಚರಿಕೆ ನೀಡಿದೆ.

ಅಲ್ಲದೆ, ದಾಖಲೆಗಳನ್ನು ಸಕಾಲದಲ್ಲಿ ಸಲ್ಲಿಸದಿದ್ದರೆ ಮುಂದಿನ ಆಗುಹೋಗುಗಳಿಗೆ ಸಂಬಂಧಪಟ್ಟ ಶಿಕ್ಷಕರೇ ನೇರ ಹೊಣೆಗಾರರಾಗಿರುತ್ತಾರೆ ಎಂಬುದನ್ನು ಅವರಿಗೆ ತಿಳಿಸುವಂತೆ ಎಲ್ಲಾ ಶೈಕ್ಷಣಿಕ ಜಿಲ್ಲೆಗಳ ಉಪನಿರ್ದೇಶಕರಿಗೆ ಸೂಚಿಸಲಾಗಿದೆ.

Related Articles

Back to top button