Kannada NewsKarnataka NewsLatest

*ಅಕ್ಕಿ ಖರೀದಿಸುವವರಿಗೆ ಗುಡ್‌ನ್ಯೂಸ್‌*: *ಸೋನಾ ಮಸೂರಿ ದರದಲ್ಲಿ ಭಾರೀ ಇಳಿಕೆ; ಕಾರಣವೇನು?*

ಪ್ರಗತಿವಾಹಿನಿ ಸುದ್ದಿ: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದ ಅಕ್ಕಿ ಬೆಲೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಇದೀಗ ಕೊಂಚ ನಿರಾಳತೆ ಸಿಕ್ಕಿದೆ. ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಅಕ್ಕಿಯ ದರ ದಿಢೀರ್ ಇಳಿಕೆಯಾಗಿದೆ. ಕೆಲವೇ ದಿನಗಳ ಹಿಂದೆ ಕೆಜಿಗೆ ₹80ರಿಂದ ₹90ರವರೆಗೆ ಮಾರಾಟವಾಗುತ್ತಿದ್ದ ಅಕ್ಕಿ ಈಗ ₹65ರಿಂದ ₹70ಕ್ಕೆ ಲಭ್ಯವಾಗುತ್ತಿದೆ. ಅಂದರೆ, ಪ್ರತಿ ಕೆಜಿಗೆ ಸುಮಾರು ₹10ರಿಂದ ₹20ರವರೆಗೆ ಬೆಲೆ ಕಡಿಮೆಯಾಗಿದೆ.

ಅಕ್ಕಿ ಬೆಲೆ ಇಳಿಕೆಗೆ ಕಾರಣವೇನು?

ಭತ್ತದ ಪೂರೈಕೆ ಕಡಿಮೆಯಾಗಿದ್ದರಿಂದ ಇತ್ತೀಚಿನ ದಿನಗಳಲ್ಲಿ ಅಕ್ಕಿ ಬೆಲೆ ಏರಿಕೆಯಾಗಿತ್ತು. ಆದರೆ ಇದೀಗ ಮಹಾರಾಷ್ಟ್ರ ಮತ್ತು ತೆಲಂಗಾಣದಿಂದ ಭತ್ತದ ಪೂರೈಕೆ ಹೆಚ್ಚಾಗಿದೆ. ಭತ್ತದ ಕಟಾವು ಪೂರ್ಣಗೊಂಡು ಮಿಲ್‌ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬರುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಅಕ್ಕಿ ದರ ಇಳಿಕೆಯಾಗಿದೆ.

ಒಂದು ಕ್ವಿಂಟಲ್ ಅಕ್ಕಿಯ ಬೆಲೆ ಈ ಹಿಂದೆ ಸುಮಾರು ₹8,500ರಷ್ಟಿತ್ತು. ಇದೀಗ ಅದು ₹6,500ಕ್ಕೆ ಇಳಿದಿದೆ. ಈ ಮೂಲಕ ಕ್ವಿಂಟಲ್‌ಗೆ ಬರೋಬ್ಬರಿ ₹2,000 ಕಡಿಮೆಯಾಗಿದೆ.

ಗ್ರಾಹಕರಿಗೆ ನಿರಾಳತೆ, ರೈತರಿಗೂ ಉತ್ತಮ ಬೆಲೆ

ಈ ಬಗ್ಗೆ ಮಾತನಾಡಿದ ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷೆ ಸಾವಿತ್ರಿ ಪುರುಷೋತ್ತಮ, ಅಕ್ಕಿ ಬೆಲೆ ಇಳಿಕೆಯಾಗಿರುವುದು ಗ್ರಾಹಕರಿಗೆ ಅನುಕೂಲಕರವಾಗಿದೆ. ಜೊತೆಗೆ ಭತ್ತ ಬೆಳೆದ ರೈತರಿಗೂ ಉತ್ತಮ ಬೆಲೆ ಸಿಗುತ್ತಿದೆ ಎಂದು ಹೇಳಿದ್ದಾರೆ.

ತುಂಗಭದ್ರಾ ನದಿ ಪಾತ್ರದಲ್ಲಿ ಭತ್ತದ ಪ್ರಮಾಣ ಕಡಿಮೆಯಿದ್ದರೂ, ಕೃಷ್ಣಾ ನದಿ ಪಾತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯಲಾಗಿದೆ. ಇದೀಗ ಕಟಾವು ಮುಗಿದಿರುವುದರಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಪೂರೈಕೆಯಾಗುತ್ತಿದೆ. ಇದರಿಂದ ಅಕ್ಕಿ ದರ ಇಳಿಕೆಯಾಗಿದೆ ಎಂದು ವಿವರಿಸಿದ್ದಾರೆ.

ಇದೇ ವೇಳೆ, ಸರ್ಕಾರ ಅಕ್ಕಿ ದಾಸ್ತಾನು ಮಿತಿಯನ್ನು ಕಡಿಮೆ ಮಾಡಿದರೆ ಅಕ್ಕಿ ಗಿರಣಿಗಳಿಗೆ ಸಮಸ್ಯೆಯಾಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಮತ್ತೆ ಅಕ್ಕಿ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಸಾವಿತ್ರಿ ಪುರುಷೋತ್ತಮ ಎಚ್ಚರಿಸಿದ್ದಾರೆ. ಹೀಗಾಗಿ ಸರ್ಕಾರ ದಾಸ್ತಾನು ಮಿತಿಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ.

ಬೇಸಿಗೆಯಲ್ಲಿ ಭತ್ತದ ಬೆಳೆ ಬರುವ ಸಾಧ್ಯತೆ ಕಡಿಮೆ ಇರುವುದರಿಂದ ಸದ್ಯ ಮಾರುಕಟ್ಟೆಗೆ ಬರುತ್ತಿರುವ ಭತ್ತವನ್ನೇ ಅವಲಂಬಿಸಬೇಕಾಗಿದೆ. ಇದೇ ದಾಸ್ತಾನಿನ ಆಧಾರದಲ್ಲಿ ಮುಂದಿನ ಒಂದು ವರ್ಷದವರೆಗೆ ಅಕ್ಕಿ ಗಿರಣಿಗಳು ಕಾರ್ಯನಿರ್ವಹಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.

Related Articles

Back to top button