
ಪ್ರಗತಿವಾಹಿನಿ ಸುದ್ದಿ: ಆಂಬ್ಯುಲೆನ್ಸ್ನಲ್ಲಿದ್ದ ಆಕ್ಸಿಜನ್ ಸಿಲಿಂಡರ್ ಏಕಾಅಏಕಿ ಸ್ಫೋಟಗೊಂಡು ರೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಆಸ್ಪತ್ರೆಯ ಆವರಣದಲ್ಲಿಯೇ ನಡೆದಿದೆ.
ಇಡಿಶಾದ ಮಯೂರ್ಭಂಜ್ ಜಿಲ್ಲೆಯ ಉಡಾಲಾ ಉಪವಿಭಾಗೀಯ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದೆ. ರೋಗಿ ಸಾವನ್ನಪ್ಪಿದ್ದು, ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಉಡಾಲಾ ಪೊಲೀಸ್ ವ್ಯಾಪ್ತಿಯ ಕುಂದಬಾಯಿ ಗ್ರಾಮದ 46 ವರ್ಷದ ಸುಜೋಗ್ ಬಾರಿಕ್ ಎಂದು ಗುರುತಿಸಲಾಗಿದೆ.
ಉಸಿರಾಟದ ತೊಂದರೆ ಮತ್ತು ಜ್ವರದಿಂದ ಬಳಲುತ್ತಿದ್ದ ಸುಜೋಗ್ ಅವರನ್ನು ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಭುವನೇಶ್ವರಕ್ಕೆ ಕರೆದೊಯ್ಯುವಂತೆ ವೈದ್ಯರು ಕುಟುಂಬದವರಿಗೆ ಸೂಚಿಸಿದ್ದರು.
ಖಾಸಗಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಸುಜೋಗ್ ಅವರನ್ನು ಭುವನೇಶ್ವರಕ್ಕೆ ಕರೆದೊಯ್ಯಲು ಸಿದ್ಧತೆ ನಡೆಸಿದ್ದರು. ಈ ವೇಳೆ ಆಂಬ್ಯುಲೆನ್ಸ್ನಲ್ಲಿದ್ದ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ.
ಸಿಲಿಂಡರ್ ಸ್ಫೋಟದ ತೀವ್ರತೆಗೆ ಆಂಬ್ಯುಲೆನ್ಸ್ನ ಮೇಲಿನ ಭಾಗ ಹಾರಿಹೋಗಿ, ಹತ್ತಿರದಲ್ಲಿದ್ದ ಜನರ ಮೇಲೆ ಬಿದ್ದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಉರಿಯುತ್ತಿದ್ದ ಆಂಬ್ಯುಲೆನ್ಸ್ನಿಂದ ಸುಜೋಗ್ ಅವರನ್ನು ಹೊರಗೆ ಕರೆತಂದಿದ್ದಾರೆ. ಆದರೆ, ತೀವ್ರ ಸುಟ್ಟ ಗಾಯಗಳಿಂದ ಅವರು ಮೃತಪಟ್ಟಿದ್ದಾರೆ. ಸುಜೋಗ್ ಅವರೊಂದಿಗೆ ಇದ್ದ ಇಬ್ಬರು ಸಹಾಯಕರು ಕೂಡ ಗಂಭೀರವಾಗಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಗಾಯಾಳುಗಳನ್ನು ಉಡಾಲಾ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




