Kannada NewsKarnataka NewsLatest

*ಸಫಾರಿಗೆ ಹೋದರೆ ಮೊಬೈಲ್ ಬಳಕೆಗೆ ಬ್ರೇಕ್*: *ಸುಪ್ರೀಂ ಕೋರ್ಟ್ ಆದೇಶದಂತೆ ಹೊಸ ರೂಲ್ಸ್!*

ಪ್ರಗತಿವಾಹಿನಿ ಸುದ್ದಿ: ವನ್ಯಜೀವಿಗಳನ್ನು ನೋಡಲು ಸಫಾರಿಗೆ ಹೋಗುವ ಪ್ರವಾಸಿಗರೇ ಗಮನಿಸಿ! ಇನ್ಮುಂದೆ ಸಫಾರಿ ವೇಳೆ ಮೊಬೈಲ್ ಫೋನ್ ಬಳಸುವಂತಿಲ್ಲ. ಪ್ರವಾಸಿಗರು ಮಾತ್ರವಲ್ಲ, ವಾಹನ ಚಾಲಕರು ಮತ್ತು ನೇಚರ್ ಗೈಡ್‌ಗಳಿಗೂ ಈ ನಿಯಮ ಅನ್ವಯವಾಗಲಿದೆ. ವನ್ಯಜೀವಿಗಳ ಸಂರಕ್ಷಣೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅರಣ್ಯ ಇಲಾಖೆ ಈ ಮಹತ್ವದ ಕ್ರಮ ಕೈಗೊಂಡಿದೆ.

ಚಾಮರಾಜನಗರ ಜಿಲ್ಲೆಯ ವನ್ಯಜೀವಿ ಧಾಮಗಳಲ್ಲಿ ಸಫಾರಿಗೆ ತೆರಳುವ ಪ್ರವಾಸಿಗರಿಗೆ ಅರಣ್ಯ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಸುಪ್ರೀಂ ಕೋರ್ಟ್‌ನ 2025ರ ನವೆಂಬರ್ 17ರ ಆದೇಶದ ಪ್ಯಾರಾ 48.5ರ ಅನ್ವಯ, ಹುಲಿ ಸಂರಕ್ಷಿತ ಪ್ರದೇಶಗಳ ಕೋರ್ ಭಾಗಗಳ ಪರಿಸರ ಪ್ರವಾಸೋದ್ಯಮ ವಲಯಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲಾಗಿದೆ.

ಸಫಾರಿಗೆ ತೆರಳುವ ಮುನ್ನ ಪ್ರವಾಸಿಗರು, ವಾಹನ ಚಾಲಕರು ಮತ್ತು ನೇಚರ್ ಗೈಡ್‌ಗಳು ತಮ್ಮ ಮೊಬೈಲ್ ಫೋನ್‌ಗಳನ್ನು ನಿಗದಿತ ಸ್ಥಳಗಳಲ್ಲಿ ಇಡುವಂತೆ ಅರಣ್ಯ ಇಲಾಖೆ ಸೂಚಿಸಿದೆ. ಸಫಾರಿ ವಾಹನಗಳಲ್ಲಿ ಮೊಬೈಲ್ ಬಳಕೆಗೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ.

ಪ್ರವಾಸಿಗರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಸಫಾರಿ ವಾಹನಗಳಲ್ಲಿ ಮೊಬೈಲ್ ವೈರ್‌ಲೆಸ್ ಸೆಟ್‌ಗಳನ್ನು ಕಡ್ಡಾಯವಾಗಿ ಅಳವಡಿಸಿ, ಅವು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಮೊಬೈಲ್ ಬಳಕೆ ನಿಷೇಧದ ಬಗ್ಗೆ ಸಫಾರಿ ವಾಹನಗಳು ಹಾಗೂ ಪ್ರವೇಶ ಸ್ಥಳಗಳಲ್ಲಿ ಸ್ಪಷ್ಟ ಸೂಚನಾ ಫಲಕಗಳನ್ನು ಅಳವಡಿಸಬೇಕು. ಪ್ರವಾಸಿಗರಿಗೂ ನಿಯಮಗಳ ಬಗ್ಗೆ ಮಾಹಿತಿ ನೀಡಬೇಕು.

ಸಫಾರಿ ವೇಳೆ ವನ್ಯಜೀವಿಗಳ ಛಾಯಾಚಿತ್ರ ತೆಗೆಯಲು ಮೊಬೈಲ್ ಬದಲಿಗೆ ನಿಯಮಾನುಸಾರ ಕ್ಯಾಮೆರಾಗಳನ್ನು ಬಳಸಬಹುದು ಎಂಬ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಲಿದೆ. ಟಿಕೆಟ್ ಬುಕಿಂಗ್ ತಂತ್ರಾಂಶದ ಮೂಲಕವೂ ಪ್ರವಾಸಿಗರಿಗೆ ಅಗತ್ಯ ಸೂಚನೆಗಳನ್ನು ನೀಡಲಾಗುತ್ತದೆ.

ಒಟ್ಟಿನಲ್ಲಿ, ವನ್ಯಜೀವಿಗಳ ಸಹಜ ಪರಿಸರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಮತ್ತು ಸಫಾರಿ ವೇಳೆ ಸುರಕ್ಷತೆಯನ್ನು ಖಚಿತಪಡಿಸುವುದು ಈ ನಿಯಮಗಳ ಉದ್ದೇಶವಾಗಿದೆ. ಹೀಗಾಗಿ, ಸಫಾರಿಗೆ ತೆರಳುವ ಪ್ರವಾಸಿಗರು ಹೊಸ ಮಾರ್ಗಸೂಚಿಗಳನ್ನು ತಿಳಿದುಕೊಂಡು ಇಲಾಖೆಯ ಸೂಚನೆಗಳನ್ನು ಪಾಲಿಸುವುದು ಮುಖ್ಯವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button