*ಸಿನಿಮಾ ನೋಡಲು ಹೋದ ಕುಟುಂಬಕ್ಕೆ ಶಾಕ್*: *ಚಿನ್ನ ಕದ್ದು ಮನೆಯಲ್ಲೇ ಸಿಕ್ಕಿ ಬಿದ್ದ ಕಳ್ಳ*

ಪ್ರಗತಿವಾಹಿನಿ ಸುದ್ದಿ: ನೆಚ್ಚಿನ ಸಿನಿಮಾ ನೋಡಿಕೊಂಡು ಖುಷಿಯಿಂದ ಮನೆಗೆ ಮರಳಬೇಕಿದ್ದ ಕುಟುಂಬಕ್ಕೆ ಎದುರಾಗಿದ್ದು ಶಾಕ್! ಮನೆಯಲ್ಲಿ ಕಳ್ಳತನ ನಡೆದಿರುವ ಅನುಮಾನ ಮೂಡುತ್ತಿದ್ದಂತೆ ಮನೆಯವರು ಸಿಸಿಟಿವಿ ಪರಿಶೀಲಿಸಿದ್ದಾರೆ. ಆಗ ಮನೆಯೊಳಗೆ ನುಗ್ಗಿದ್ದ ಕಳ್ಳ ಇನ್ನೂ ಹೊರಗೆ ಹೋಗಿಲ್ಲ ಎಂಬುದು ಗೊತ್ತಾಗಿದೆ. ತಕ್ಷಣ ಮನೆ ಸುತ್ತುವರಿದು ಹುಡುಕಾಟ ನಡೆಸಿದಾಗ, ಮಂಚದ ಕೆಳಗೆ ಅವಿತಿದ್ದ ಕಳ್ಳ ಸಿಕ್ಕಿಬಿದ್ದಿದ್ದಾನೆ.
ಇತ್ತೀಚೆಗೆ ತೆರೆಕಂಡು ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿರುವ ‘ಪ್ರೇಮದ ಊರಲಿ’ ಸಿನಿಮಾ ನೋಡಲು ದೇವನಹಳ್ಳಿ ತಾಲೂಕಿನ ಗೊಬ್ಬರಗುಂಟೆ ಗ್ರಾಮದ ಕೃಷ್ಣಪ್ಪ ಅವರ ಕುಟುಂಬ ತೆರಳಿತ್ತು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಆರೋಪಿ ಅಜಯ್, ಮಧ್ಯಾಹ್ನ ಸುಮಾರು 1.50ರ ವೇಳೆಗೆ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ್ದಾನೆ.
ಕುಟುಂಬಸ್ಥರು ಮನೆಗೆ ಮರಳಿದಾಗ ಹೊರಗಿನಿಂದ ಹಾಕಿದ್ದ ಬೀಗ ಒಳಗಿನಿಂದ ಲಾಕ್ ಆಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಕೂಡಲೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮನೆಗೆ ನುಗ್ಗಿದ್ದ ವ್ಯಕ್ತಿ ಹೊರಗೆ ಬಂದಿರಲಿಲ್ಲ ಎಂಬುದು ಗೊತ್ತಾಗಿದೆ. ಇದರಿಂದ ಎಚ್ಚೆತ್ತ ಮನೆಯವರು ಮನೆ ಸುತ್ತುವರಿದು ಒಳಗೆ ಹುಡುಕಾಟ ನಡೆಸಿದ್ದಾರೆ.
ಈ ವೇಳೆ ಆರೋಪಿ ಮಂಚದ ಕೆಳಗೆ ಅವಿತಿರುವುದು ಪತ್ತೆಯಾಗಿದೆ. ಕುಟುಂಬಸ್ಥರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮನೆಯಲ್ಲಿದ್ದ ಸುಮಾರು 120 ಗ್ರಾಂ ಚಿನ್ನಾಭರಣ ಕಳವಾಗಿರುವ ಬಗ್ಗೆ ವರದಿಯಾಗಿದೆ. ಆದರೆ, ಕಳವಾದ ಚಿನ್ನದ ಪ್ರಮಾಣದ ಕುರಿತು ಕೆಲವು ವರದಿಗಳಲ್ಲಿ ವ್ಯತ್ಯಾಸವಿದೆ.
ಬಂಧಿತ ಅಜಯ್ ಕೇರಳದ ಚಿತ್ತಿಲಪಲ್ಲಿ ಮೂಲದವನು ಎಂದು ಗುರುತಿಸಲಾಗಿದೆ. ಯಲಹಂಕ ಸಮೀಪದ ಅಪಾರ್ಟ್ಮೆಂಟ್ನಲ್ಲಿ ಸ್ನೇಹಿತರೊಂದಿಗೆ ವಾಸಿಸುತ್ತಿದ್ದ ಆತ ಓಲಾ ಮತ್ತು ಉಬರ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ವರದಿಯಾಗಿದೆ.
ಕಳ್ಳತನಕ್ಕೂ ಮುನ್ನ ಎರಡು ಮೂರು ದಿನಗಳಿಂದ ಮನೆಯವರ ಚಲನವಲನಗಳ ಮೇಲೆ ಆರೋಪಿ ನಿಗಾ ಇಟ್ಟಿದ್ದನೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸದ್ಯ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಕಳ್ಳತನದ ಹಿಂದಿನ ಉದ್ದೇಶ ಮತ್ತು ಇತರ ವಿವರಗಳನ್ನು ಪತ್ತೆಹಚ್ಚುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




