*ಮೈಸೂರು ದಸರಾ ಕೇವಲ ಉತ್ಸವವಲ್ಲ, ಭೂತ ಭವಿಷ್ಯ ಬೆಸೆಯುವ ಸಾಂಸ್ಕೃತಿಕ ಸಂಗಮ*: ಗವಿಸಿದ್ಧೇಶ್ವರ ಶ್ರೀಗಳು

ಪ್ರಗತಿವಾಹಿನಿ ಸುದ್ದಿ: ಒಂದು ಕಾಲದಲ್ಲಿ ರಾಜಮನೆತನಕ್ಕೆ ಸೀಮಿತವಾಗಿದ್ದ ದಸರಾ ಇಂದು ಇಡೀ ಜಗತ್ತು ಸಂಭ್ರಮಿಸುವ ನಾಡಹಬ್ಬವಾಗಿ ಬೆಳೆದಿದೆ. ತುಂಗಭದ್ರೆಯ ತೀರದಿಂದ ಕಾವೇರಿಯ ತೀರಕ್ಕೆ ಹರಿದುಬಂದ ಈ ಉತ್ಸವ, ಕನ್ನಡ ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ ಎಂದು ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು.
ವಿಶ್ವವಿಖ್ಯಾತ ಮೈಸೂರು ದಸರಾವನ್ನು ಚಾಮುಂಡಿ ಬೆಟ್ಟದ ಸನ್ನಿಧಿಯಲ್ಲಿ ಸರ್ಕಾರದ ವತಿಯಿಂದ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಕರ್ನಾಟಕದ ಮತ್ತು ಭಾರತದ ಕಿರೀಟ. ಕನ್ನಡಿಗರೆಲ್ಲರ ಹೆಮ್ಮೆ, ಸಂಸ್ಕೃತಿ ಮತ್ತು ಸಂಸ್ಕಾರದ ಪ್ರತೀಕವಾಗಿರುವ ಈ ನಗರ ಜ್ಞಾನ ಮತ್ತು ಅರಿವಿನ ನೆಲವೂ ಹೌದು ಎಂದು ಬಣ್ಣಿಸಿದರು.
ದಸರಾ ಉದ್ಘಾಟಿಸುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದು ವಿನಯದಿಂದ ನುಡಿದ ಶ್ರೀಗಳು, ಈ ಹಿಂದೆ ಅನೇಕ ಮಹನೀಯರು ಈ ಉತ್ಸವವನ್ನು ಉದ್ಘಾಟಿಸಿದ್ದಾರೆ. ತಾಯಿ ಚಾಮುಂಡೇಶ್ವರಿಯ ಸನ್ನಿಧಿಗೆ ಬಂದು, ಹಿರಿಯರು ಹಚ್ಚಿದ ಕನ್ನಡದ ದೀಪ ಎಂದಿಗೂ ಆರದಿರಲಿ ಎಂದು ಪ್ರಾರ್ಥಿಸಲು ಬಂದಿದ್ದೇನೆ ಎಂದರು.
ತಾನು ಜೋಳಿಗೆಯ ಜಂಗಮ ಮಾತ್ರ. ಕನ್ನಡಿಗರ ಪರವಾಗಿ ಕೈಮುಗಿದು ಬೆಳಕಿನ ಪ್ರಾರ್ಥನೆ ಸಲ್ಲಿಸಿದ್ದೇನೆ. ತಾಯಿ ಚಾಮುಂಡೇಶ್ವರಿ ಈ ನಾಡಿಗೆ ಬೆಳಕು ನೀಡಲಿ. ಶಕ್ತಿಯ ಕೇಂದ್ರವಾಗಿರುವ ದೇವಿಯ ಸನ್ನಿಧಿಯಲ್ಲಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.
ಮೈಸೂರು ದಸರಾ ಗತವೈಭವ, ವರ್ತಮಾನದ ಉತ್ಸಾಹ ಮತ್ತು ಭವಿಷ್ಯದ ದಿಕ್ಸೂಚಿಯಾಗಿದೆ. ಭೂತಕಾಲ, ವರ್ತಮಾನ ಮತ್ತು ಭವಿಷ್ಯವನ್ನು ಬೆಸೆಯುವ ಮಹತ್ವದ ಸಾಂಸ್ಕೃತಿಕ ಸಂಗಮವೇ ದಸರಾ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಬಸವಣ್ಣನವರು ದುಡಿದು ತಿನ್ನುವುದನ್ನು ಕಲಿಸಿದರೇ ಹೊರತು, ಹೊಡೆದು ತಿನ್ನುವುದನ್ನು ಕಲಿಸಲಿಲ್ಲ ಎಂದು ಹೇಳಿದ ಶ್ರೀಗಳು, ಮೈಸೂರು ರಾಜಮನೆತನದ ಕೊಡುಗೆಗಳನ್ನು ಸ್ಮರಿಸಿದರು. ಕರ್ನಾಟಕದ ಇತಿಹಾಸವನ್ನು ಮೈಸೂರು ರಾಜಮನೆತನದ ಪರಂಪರೆಯನ್ನು ಹೊರಗಿಟ್ಟು ಊಹಿಸುವುದು ಕಷ್ಟ. ವಿದ್ಯಾಭ್ಯಾಸ, ವಿಜ್ಞಾನ ಮತ್ತು ಜನಕಲ್ಯಾಣದ ಕ್ಷೇತ್ರಗಳಲ್ಲಿ ಅವರು ಮಹತ್ವದ ಕೆಲಸಗಳನ್ನು ಮಾಡಿದ್ದಾರೆ ಎಂದರು.
ಶಿವನಸಮುದ್ರದಲ್ಲಿ ಜಲವಿದ್ಯುತ್ ಉತ್ಪಾದನೆಗೆ ಕೈಗೊಂಡ ಪ್ರಯತ್ನಗಳು, ಭಾರತೀಯ ವಿಜ್ಞಾನ ಸಂಸ್ಥೆಗೆ ಭೂಮಿ ನೀಡಿದ್ದು, ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆ ಹಾಗೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ್ದು ರಾಜಮನೆತನದ ದೂರದೃಷ್ಟಿಗೆ ಸಾಕ್ಷಿಗಳಾಗಿವೆ ಎಂದು ತಿಳಿಸಿದರು. ಮಹಾತ್ಮ ಗಾಂಧೀಜಿ ಮೈಸೂರು ಮಹಾರಾಜರನ್ನು ‘ರಾಜರ್ಷಿ’ ಎಂದು ಕರೆದಿದ್ದನ್ನೂ ಶ್ರೀಗಳು ಸ್ಮರಿಸಿದರು.
ಕನ್ನಂಬಾಡಿ ಅಣೆಕಟ್ಟಿನ ನಿರ್ಮಾಣದ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ರಾಜಮನೆತನ ವಹಿಸಿದ ಪಾತ್ರವನ್ನೂ ಅವರು ಪ್ರಸ್ತಾಪಿಸಿದರು. ನಾಡಿನ ಅಭಿವೃದ್ಧಿಗಾಗಿ ಆಭರಣಗಳನ್ನು ಒತ್ತೆಯಿಟ್ಟು ನೆರವಾದ ಪರಂಪರೆಯನ್ನು ಸ್ಮರಿಸಿದ ಶ್ರೀಗಳು, ಜನರ ನೋವು ಅರಿತು ಅವರ ಕಲ್ಯಾಣಕ್ಕಾಗಿ ದುಡಿಯುವವರೇ ನಿಜವಾದ ನಾಯಕರು ಎಂಬ ಸಂದೇಶ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




