Kannada NewsKarnataka NewsLatest

*ದಸರಾದಲ್ಲೂ ವಂದೇ ಮಾತರಂ ವಿವಾದ*: *ಅರ್ಧದಲ್ಲೇ ಹೊರನಡೆದ ಕಾಂಗ್ರೆಸ್ ನಾಯಕರು*

ಪ್ರಗತಿವಾಹಿನಿ ಸುದ್ದಿ: ಶಿವಮೊಗ್ಗ ದಸರಾ ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡಿನ ವಿಚಾರ ರಾಜಕೀಯ ಗೊಂದಲಕ್ಕೆ ಕಾರಣವಾಗಿದೆ. ಸರ್ಕಾರದ ನಿಯಮದಂತೆ ಎರಡು ಚರಣಗಳನ್ನು ಮಾತ್ರ ಹಾಡಬೇಕಿದ್ದರೂ, ನಾಲ್ಕು ಚರಣಗಳನ್ನು ಹಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಕಾರ್ಯಕ್ರಮದಿಂದ ಅರ್ಧದಲ್ಲೇ ಹೊರನಡೆದಿದ್ದಾರೆ. ವಿವಾದ ತೀವ್ರವಾಗುತ್ತಿದ್ದಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಸ್ಪಷ್ಟನೆ ನೀಡಿದ್ದು, ಸರ್ಕಾರದ ನಿಯಮಾವಳಿಯನ್ನೇ ಪಾಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರದ ಸುತ್ತೋಲೆಯ ಪ್ರಕಾರ ಕಾರ್ಯಕ್ರಮದಲ್ಲಿ ವಂದೇ ಮಾತರಂನ ಎರಡು ಚರಣಗಳನ್ನು ಮಾತ್ರ ಪ್ಲೇ ಮಾಡಲಾಗಿತ್ತು. ಬಳಿಕ ನಾಡಗೀತೆಯನ್ನು ಪ್ಲೇ ಮಾಡಲಾಗಿತ್ತು. ಆದರೆ, ಮ್ಯೂಸಿಕ್ ಮುಗಿದ ನಂತರವೂ ವೇದಿಕೆಯ ಮೇಲಿದ್ದವರು ಹಾಗೂ ಅಲ್ಲಿ ನೆರೆದಿದ್ದ ಗಣ್ಯರು ಸ್ವಯಂಪ್ರೇರಿತರಾಗಿ ಮೂರನೇ ಮತ್ತು ನಾಲ್ಕನೇ ಚರಣಗಳನ್ನು ಹಾಡಿದ್ದಾರೆ. ಇದರಿಂದಲೇ ಗೊಂದಲ ಉಂಟಾಗಿದೆ ಎಂದು ಆಯುಕ್ತರು ವಿವರಿಸಿದ್ದಾರೆ.

ಶಿವಮೊಗ್ಗದ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ದಸರಾ ಕಾರ್ಯಕ್ರಮದ ಆರಂಭದಲ್ಲಿ ಗಾಯಕರು ಸಂಗೀತದೊಂದಿಗೆ ವಂದೇ ಮಾತರಂನ ಎರಡು ಚರಣಗಳನ್ನು ಹಾಡಿದ್ದರು. ಎರಡು ಚರಣಗಳು ಮುಗಿದ ಬಳಿಕ ಸಂಗೀತ ನಿಂತಿದ್ದರೂ, ಗಾಯಕರು ಹಾಡುವುದನ್ನು ಮುಂದುವರಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು ಕಾರ್ಯಕ್ರಮದಿಂದ ಹೊರನಡೆದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಸಿ. ಯೋಗೀಶ್, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಜೆ. ಮಧುಸೂದನ್ ಮತ್ತು ಜವಳಿ ಹಾಗೂ ಕೈಮಗ್ಗ ನಿಗಮದ ಅಧ್ಯಕ್ಷ ಚೇತನ್ ನೇತೃತ್ವದ ತಂಡ ಕಾರ್ಯಕ್ರಮದಿಂದ ನಿರ್ಗಮಿಸಿತು. ಪಾಲಿಕೆಯ ಮಾಜಿ ಸದಸ್ಯರು ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರೂ ಕಾರ್ಯಕ್ರಮವನ್ನು ಬಹಿಷ್ಕರಿಸಿದರು.

ವಿವಾದದ ಕುರಿತು ಮಾತನಾಡಿದ ಆಯುಕ್ತ ಮಾಯಣ್ಣಗೌಡ, ಮುಂದಿನ ದಿನಗಳಲ್ಲಿ ಇಂತಹ ಗೊಂದಲಗಳು ಮರುಕಳಿಸದಂತೆ ಜನಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಾಗುವುದು. ಸರ್ಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ದಸರಾ ಸಮಿತಿಯ 14 ಕಾರ್ಯದರ್ಶಿಗಳು ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಸಹಕಾರ ಕೋರಲಿದ್ದಾರೆ. ಕಾರ್ಯಕ್ರಮಗಳನ್ನು ನಿಗದಿತ ನಿಯಮಗಳಂತೆ ಆಯೋಜಿಸಲಾಗಿದ್ದು, ಜನದಟ್ಟಣೆ ನಿಯಂತ್ರಣಕ್ಕೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಕೆಲವರ ನಿರ್ಲಕ್ಷ್ಯದಿಂದ ಗೊಂದಲ ಉಂಟಾಗುತ್ತಿದೆ ಎಂದು ಆಯುಕ್ತರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಹಿರಿಯ ನಟ ಶ್ರೀನಾಥ್, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಚೆನ್ನಬಸಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ವಂದೇ ಮಾತರಂ ಹಾಡಿನ ಚರಣಗಳ ವಿಚಾರವಾಗಿ ಆರಂಭವಾದ ವಿವಾದ ಇದೀಗ ಶಿವಮೊಗ್ಗ ದಸರಾ ಕಾರ್ಯಕ್ರಮದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button