CrimeKannada NewsKarnataka NewsLatest

*ನೈಟಿ ಧರಿಸಿ ಆಂಬ್ಯುಲೆನ್ಸ್‌ನಲ್ಲಿ ಬಂದು ಎಟಿಎಂ ಲೂಟಿ*: *ಲಕ್ಷಾಂತರ ರೂ. ದೋಚಿದ ಖದೀಮರು!*

ಪ್ರಗತಿವಾಹಿನಿ ಸುದ್ದಿ: ಮಹಿಳೆಯರ ನೈಟಿ ಧರಿಸಿ, ಆಂಬ್ಯುಲೆನ್ಸ್‌ನಲ್ಲಿ ಬಂದ ಖದೀಮರು ಎಸ್‌ಬಿಐ ಎಟಿಎಂಗೆ ಕನ್ನ ಹಾಕಿರುವ ಘಟನೆ ನಡೆದಿದೆ. ಮುಖಕ್ಕೆ ಮಾಸ್ಕ್ ಧರಿಸಿದ್ದ ಆರೋಪಿಗಳು ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ಯಂತ್ರವನ್ನು ಕತ್ತರಿಸಿ, ಅದರಲ್ಲಿದ್ದ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಕೃತ್ಯದ ಹಿಂದೆ ಅಂತರರಾಜ್ಯ ದರೋಡೆಕೋರರ ಗ್ಯಾಂಗ್ ಕೈವಾಡವಿದೆಯೇ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ.

ಅಕ್ಟೋಬರ್ 11ರ ಬೆಳಗಿನ ಜಾವ ಸುಮಾರು 1ರಿಂದ 1.30ರ ನಡುವೆ ತೆಲಂಗಾಣದ ಕಾಮರೆಡ್ಡಿಯಲ್ಲಿ ಘಟನೆ ನಡೆದಿದೆ. ಎಟಿಎಂ ಕೇಂದ್ರದ ಮುಂದೆ ಆಂಬ್ಯುಲೆನ್ಸ್ ಬಂದು ನಿಂತಿದ್ದು, ಅದರಿಂದ ಇಳಿದ ವ್ಯಕ್ತಿಗಳು ಮಹಿಳೆಯರ ನೈಟಿ ಮತ್ತು ಮುಖ ಮುಚ್ಚುವ ಮಾಸ್ಕ್ ಧರಿಸಿದ್ದರು. ಬಳಿಕ ಎಟಿಎಂ ಒಳಗೆ ನುಗ್ಗಿದ ಆರೋಪಿಗಳು ಗ್ಯಾಸ್ ಕಟ್ಟರ್‌ಗಳ ಸಹಾಯದಿಂದ ಯಂತ್ರವನ್ನು ಕತ್ತರಿಸಿ, ನಗದು ಪೆಟ್ಟಿಗೆಯನ್ನು ತೆಗೆದುಕೊಂಡು ಅದೇ ವಾಹನದಲ್ಲಿ ಪರಾರಿಯಾಗಿದ್ದಾರೆ.

ಬೆಳಗ್ಗೆ ಹಣ ತೆಗೆಯಲು ಎಟಿಎಂಗೆ ಬಂದ ಗ್ರಾಹಕರು ಯಂತ್ರ ಛಿದ್ರಗೊಂಡಿರುವುದನ್ನು ಗಮನಿಸಿ ಬ್ಯಾಂಕ್ ಅಧಿಕಾರಿಗಳು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಟಿಎಂನಲ್ಲಿದ್ದ ನಗದಿನ ನಿಖರ ಮೊತ್ತ ಇನ್ನೂ ಖಚಿತವಾಗಿಲ್ಲ. ಬ್ಯಾಂಕ್ ಅಧಿಕಾರಿಗಳ ನೆರವಿನಿಂದ ಪೊಲೀಸರು ಹಣದ ಲೆಕ್ಕ ಪರಿಶೀಲಿಸುತ್ತಿದ್ದು, ಲಕ್ಷಾಂತರ ರೂಪಾಯಿ ದೋಚಿರುವ ಶಂಕೆ ವ್ಯಕ್ತವಾಗಿದೆ.

ದರೋಡೆಗೆ ಬಳಸಲಾದ ಆಂಬ್ಯುಲೆನ್ಸ್ ನಿಜವಾದ ಆಸ್ಪತ್ರೆಯ ವಾಹನವೇ ಅಥವಾ ಪೊಲೀಸರ ಗಮನ ಬೇರೆಡೆ ಸೆಳೆಯಲು ಬಳಸಿದ ನಕಲಿ ವಾಹನವೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಹಾಗೂ ಕ್ಲೂಸ್ ತಂಡ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿವೆ. ಹೆದ್ದಾರಿಯ ಟೋಲ್‌ಗೇಟ್‌ಗಳ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಇದೇ ರೀತಿಯ ದರೋಡೆಗಳು ಈ ಹಿಂದೆ ಕರೀಂನಗರದ ಹೊರವಲಯದ ಡರ್ಶೆಡ್ ಮತ್ತು ತಿಮ್ಮಾಪುರ ಪ್ರದೇಶಗಳಲ್ಲಿಯೂ ನಡೆದಿದ್ದವು. ಅಲ್ಲಿ ಎರಡು ಎಸ್‌ಬಿಐ ಎಟಿಎಂಗಳನ್ನು ಗುರಿಯಾಗಿಸಿಕೊಂಡಿದ್ದ ಕಳ್ಳರು, ಮಹಿಳೆಯರ ಉಡುಪು ಧರಿಸಿ ಬಂದು ಗ್ಯಾಸ್ ಕಟ್ಟರ್ ಬಳಸಿ ಹಣ ದೋಚಿದ್ದರು. ಸಿಸಿಟಿವಿ ಕ್ಯಾಮೆರಾಗಳಿಗೆ ಬಣ್ಣ ಸಿಂಪಡಿಸಿರುವುದೂ ವರದಿಯಾಗಿತ್ತು.

ಹೀಗಾಗಿ ಕಾಮರೆಡ್ಡಿ ಪ್ರಕರಣದಲ್ಲೂ ಅದೇ ಗ್ಯಾಂಗ್ ಭಾಗಿಯಾಗಿರುವ ಸಾಧ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡಗಳನ್ನು ರಚಿಸಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ಸದ್ಯ ದರೋಡೆಗೆ ಬಳಸಿದ ವಾಹನ ಹಾಗೂ ಆರೋಪಿಗಳ ಗುರುತು ಪತ್ತೆಹಚ್ಚುವುದು ಪೊಲೀಸರಿಗೆ ಪ್ರಮುಖ ಸವಾಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button