EducationKarnataka NewsLatest

*ದಸರಾ ಸಂದರ್ಭದಲ್ಲೇ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ*

ಪ್ರಗತಿವಾಹಿನಿ ಸುದ್ದಿ: ದಸರಾ ಹಬ್ಬದ ಶುಭ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗುಡ್ ನ್ಯೂಸ್ ನೀಡಿದ್ದಾರೆ. ರಾಜ್ಯ ಸರ್ಕಾರ ಈ ಹಿಂದೆ ಪ್ರಕಟಿಸಿದಂತೆ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ1 ರಿಂದ 10ನೇ ತರಗತಿಯವರೆಗೆ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಲ್ಲಿ ಅಂದರೆ ವೈದ್ಯಕೀಯ ಮತ್ತು ಇಂಜಿನಿಯರಿಂಗ್‌ ಸೀಟುಗಳ ಹಂಚಿಕೆಯಲ್ಲಿ ಶೇ.7.5 ವಿಶೇಷ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಮೀಸಲಾತಿಯು ಈಗ ಜಾರಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆ ಮತ್ತು ಪಿಯು ಕಾಲೇಜುಗಳನ್ನು ಬಲಪಡಿಸುವ ನಿಟ್ಟಿನಲ್ಲಿ ನಾವು ತೆಗೆದುಕೊಂಡಿದ್ದ ಈ ಮಹತ್ವದ ತೀರ್ಮಾನಕ್ಕೆ ಸಂಬಂಧಿಸಿದಂತೆ ಕಳೆದ ಸೆಪ್ಟೆಂಬರ್‌ 17 ರಂದು ʻಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳ ಆಯ್ಕೆ(ತಿದ್ದುಪಡಿ) ನಿಯಮಗಳು, 2026” ಎಂಬ ನಿಯಮಗಳನ್ನು ರೂಪಿಸಿ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಇದಕ್ಕೆ ಸಲ್ಲಿಕೆಯಾದ ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಶೀಲಿಸಿ, ಈಗ ಅಂತಿಮ ಅಧಿಸೂಚನೆ ಪ್ರಕಟಿಸಿದ್ದೇವೆ ಎಂದು ಹೇಳಿದ್ದಾರೆ.

ಉನ್ನತ ಶಿಕ್ಷಣ ಇಲಾಖೆಯು ಈ ಅಧಿಸೂಚನೆ ಹೊರಡಿಸಿದ್ದು, ಪ್ರಸ್ತುತ ಚಾಲ್ತಿಯಲ್ಲಿರುವ ಶೇ. 15 ರಷ್ಟು ಗ್ರಾಮೀಣ ಮೀಸಲಾತಿಯಲ್ಲಿಯೇ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಈ ಶೇ. 7.5 ರಷ್ಟು ಒಳಮೀಸಲಾತಿಯನ್ನು ನೀಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಇದರಿಂದ ಅನುಕೂಲವಾಗಲಿದೆ. ಈ ಮೀಸಲಾತಿಯ ಕಾರಣಕ್ಕೇ ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಮತ್ತು ಪಿಯು ಕಾಲೇಜುಗಳಲ್ಲಿ ಪ್ರವೇಶಾತಿಯು ಹೆಚ್ಚಲಿದೆ ಎಂಬುದು ನಮ್ಮ ನಿರೀಕ್ಷೆಯಾಗಿದೆ.

ಈ ರೀತಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವುದು ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಕನಸಾಗಿತ್ತು. ಅವರು ತಾವು ಅಧಿಕಾರದಲ್ಲಿದ್ದಾಗ ಗ್ರಾಮೀಣ ಭಾಗದ ಯುವಜನರು ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿ, ಆಡಳಿತ ಯಂತ್ರದ ಭಾಗವಾಗಬೇಕೆಂಬ ಉದ್ದೇಶದಿಂದ ಗ್ರಾಮೀಣ ಕೃಪಾಂಕ ನೀಡುವ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದರು. ನಂತರ ನ್ಯಾಯಾಲಯದ ಆದೇಶದಂತೆ ಗ್ರಾಮೀಣ ಅಭ್ಯರ್ಥಿಗಳಿಗೆ ಕೃಪಾಂಕ ನೀಡುವ ಬದಲಾಗಿ, ಮೀಸಲಾತಿಯನ್ನು ಜಾರಿಗೆ ತರಲಾಗಿತ್ತು. ಶಿಕ್ಷಣಕ್ಕೂ ಈ ಮೀಸಲಾತಿಯನ್ನು ಅನ್ವಯಿಸಲಾಗುತ್ತಿದೆ.

ಈಗ ನಮ್ಮ ಸರ್ಕಾರವು ಗ್ರಾಮೀಣ ವಿದ್ಯಾರ್ಥಿಗಳಿಗೆ ನಿಗದಿಯಾಗಿದ್ದ ಶೇ.15 ರ ಮೀಸಲಾತಿಯಲ್ಲಿ ಸರ್ಕಾರಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಒಳ ಮೀಸಲಾತಿ ನೀಡಿದೆ. ಶಿಕ್ಷಣ ಸಚಿವನಾಗಿ ಬಂಗಾರಪ್ಪಾಜಿಯವರ ಆಶಯವನ್ನು ತಳಮಟ್ಟಕ್ಕೆ ತಲುಪುವಂತೆ ಮಾಡಿದ ತೃಪ್ತಿ ಈಗ ನನ್ನದಾಗಿದೆ. ನಾವು ನುಡಿದಂತೆಯೇ ನಡೆದಿದ್ದೇವೆ ಎಂದು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಓದುವ ಅನೇಕ ವಿದ್ಯಾರ್ಥಿಗಳು ಆರ್ಥಿಕ ಹಾಗೂ ಶೈಕ್ಷಣಿಕ ಸವಾಲುಗಳ ನಡುವೆಯೇ ವಿದ್ಯಾಭ್ಯಾಸ ಮುಂದುವರಿಸುತ್ತಾರೆ. ವೃತ್ತಿಪರ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ತೀವ್ರ ಸ್ಪರ್ಧೆ ಎದುರಿಸಬೇಕಾಗುತ್ತದೆ. ಇಂತಹ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಒದಗಿಸುವ ಉದ್ದೇಶದಿಂದ ಸರ್ಕಾರ ಈ ವಿಶೇಷ ಮೀಸಲಾತಿ ಕ್ರಮವನ್ನು ಕೈಗೊಂಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button