*ಮಹಿಳೆಯರ ಗೌರವಕ್ಕಾಗಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಿಳೆಯರ ಗೌರವ ಮತ್ತು ಸುರಕ್ಷತೆ ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬೆಳಗಾವಿಯ ಕಾಂಗ್ರೆಸ್ ಭವನದ ಎದುರು ತೀವ್ರ ಪ್ರತಿಭಟನೆ ನಡೆಸಲಾಯಿತು.
JNU ಮಾಜಿ ಪ್ರಾಧ್ಯಾಪಕ ಹಾಗೂ ಕಾಂಗ್ರೆಸ್ ಲೋಕಸಭಾ ಸದಸ್ಯ ಅಂಗೋಮ್ಚಾ ಬಿಮೋಲ್ ಅಕೊಯಿಜಮ್ ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ 11 ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ ಎನ್ನಲಾದ ವರದಿಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕತ್ವ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
‘ಲಡ್ಕಿ ಹೂಂ, ಲಡ್ ಸಕ್ತಿ ಹೂಂ’ ಎಂದು ಘೋಷಣೆ ನೀಡುವ ಕಾಂಗ್ರೆಸ್, ಮಹಿಳೆಯರ ಗೌರವ ಮತ್ತು ಸುರಕ್ಷತೆಯ ವಿಚಾರದಲ್ಲೂ ತನ್ನ ಬದ್ಧತೆಯನ್ನು ಕಾರ್ಯರೂಪದಲ್ಲಿ ತೋರಿಸಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ಮುಖಂಡರು ಒತ್ತಾಯಿಸಿದರು.
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕಾ ಗಾಂಧಿ ಅವರು ಈ ಪ್ರಕರಣದ ಕುರಿತು ಸ್ಪಷ್ಟನೆ ನೀಡಬೇಕು. ಆರೋಪಗಳ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಹಾಗೂ ಕಾನೂನು ಪ್ರಕ್ರಿಯೆಗೆ ಗೌರವ ನೀಡಿ ದೂರುದಾರರಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕರ್ನಾಟಕದ ಕಾರ್ಯದರ್ಶಿ ಡಾ. ಸೋನಾಲಿ ಸರ್ನೋಬತ್, ಬೆಳಗಾವಿ ಗ್ರಾಮೀಣ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ. ಭಸ್ಮೆ, ಬೆಳಗಾವಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿಲ್ಪಾ ಕೆಕರೆ, ಉಜ್ವಲಾ ಬಡವನ್ನಾಚೆ, ಸುನೀತಾ ಪಾಟೀಲ ಸೇರಿದಂತೆ ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಕಾರ್ಯಕರ್ತೆಯರು ಹಾಗೂ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಭಾಗವಹಿಸಿದ್ದರು.
ಮಹಿಳೆಯರ ಗೌರವ ರಾಜಕೀಯ ಘೋಷಣೆಯಾಗಬಾರದು; ಅದು ಪ್ರತಿಯೊಂದು ರಾಜಕೀಯ ಪಕ್ಷದ ನೈತಿಕ ಹೊಣೆಗಾರಿಕೆ. ಮಹಿಳೆಯರ ನ್ಯಾಯಕ್ಕಾಗಿ ಹೋರಾಟ ಮುಂದುವರಿಯಲಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಮುಖಂಡರು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



