Kannada NewsKarnataka NewsLatest

*ವಿದ್ಯಾರ್ಥಿನಿಯರ ಪ್ರತಿಭಟನೆಗೆ ಮಣಿದ ಸೈಂಟ್ ಆಗ್ನೆಸ್ ಕಾಲೇಜು*: *ಅ.19 ಮತ್ತು 22ರ ಪರೀಕ್ಷೆ ಮುಂದೂಡಿಕೆ!*

ಪ್ರಗತಿವಾಹಿನಿ ಸುದ್ದಿ: ಮಂಗಳೂರು ದಸರಾ ಹಬ್ಬದ ಸಂದರ್ಭದಲ್ಲಿ ಸೆಮಿಸ್ಟರ್ ಪರೀಕ್ಷೆ ನಡೆಸುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ವಿದ್ಯಾರ್ಥಿನಿಯರು ನಡೆಸಿದ ಪ್ರತಿಭಟನೆಗೆ ಕೊನೆಗೂ ಸ್ಪಂದನೆ ಸಿಕ್ಕಿದೆ. ಮಂಗಳೂರಿನ ಬೆಂದೂರ್‌ವೆಲ್‌ನಲ್ಲಿರುವ ಸೈಂಟ್ ಆಗ್ನೆಸ್ ಕಾಲೇಜು ಅಕ್ಟೋಬರ್ 19 ಮತ್ತು 22ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಲು ತೀರ್ಮಾನಿಸಿದೆ. ದಸರಾ ಆಚರಣೆಗೆ ಅವಕಾಶ ನೀಡದೆ ಪರೀಕ್ಷೆ ನಡೆಸಲು ಮುಂದಾಗಿದ್ದ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿನಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಅಕ್ಟೋಬರ್ 28ರವರೆಗೆ ಸೆಮಿಸ್ಟರ್ ಪರೀಕ್ಷೆಗಳನ್ನು ಆಯೋಜಿಸಲಾಗಿತ್ತು. ಕರಾವಳಿಯ ಪ್ರಮುಖ ಹಬ್ಬವಾದ ಮಂಗಳೂರು ದಸರಾ ಸಂದರ್ಭದಲ್ಲಿ ರಜೆ ನೀಡದೆ ಪರೀಕ್ಷೆ ನಡೆಸಲು ಮುಂದಾಗಿರುವುದು ವಿದ್ಯಾರ್ಥಿನಿಯರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದನ್ನು ಖಂಡಿಸಿ ವಿದ್ಯಾರ್ಥಿನಿಯರು ಕಾಲೇಜಿನ ಗೇಟ್ ಎದುರು ಪ್ರತಿಭಟನೆ ನಡೆಸಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕೂಡ ಪ್ರತಿಭಟನೆಗೆ ಬೆಂಬಲ ನೀಡಿತ್ತು.

ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ಕಾಲೇಜಿನ ಪರೀಕ್ಷಾ ಅಧಿಕಾರಿ ಶುಭಾರೇಖಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. “ಈ ಕಾಲೇಜಿಗೆ ನೂರು ವರ್ಷಗಳ ಇತಿಹಾಸವಿದೆ. ಪ್ರತಿವರ್ಷ ಅಕ್ಟೋಬರ್‌ನಲ್ಲೇ ಪರೀಕ್ಷೆ ನಡೆಯುತ್ತದೆ. ಈ ಬಾರಿಯೂ ಒಂದು ತಿಂಗಳ ಮುಂಚಿತವಾಗಿಯೇ ಪರೀಕ್ಷೆಯ ವೇಳಾಪಟ್ಟಿಯ ಬಗ್ಗೆ ಮಾಹಿತಿ ನೀಡಿದ್ದೆವು. ಆದರೆ, ಇಂದು ಏಕಾಏಕಿ ಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ” ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿನಿಯರು ಅಕ್ಟೋಬರ್ 19 ಮತ್ತು 22ರಂದು ಪರೀಕ್ಷೆ ನಡೆಸಬಾರದು ಎಂದು ಒತ್ತಾಯಿಸಿದ್ದಾರೆ. ಹೀಗಾಗಿ ಆ ಎರಡು ದಿನಗಳ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಶುಭಾರೇಖಾ ಸ್ಪಷ್ಟಪಡಿಸಿದ್ದಾರೆ.

ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಮುಂದಿನ ಉದ್ಯೋಗಗಳಿಗೆ ಸೇರಲು ಸಿದ್ಧತೆ ನಡೆಸುತ್ತಿರುವುದರಿಂದ ಪರೀಕ್ಷೆಗಳ ವೇಳಾಪಟ್ಟಿಯೂ ಮಹತ್ವದ್ದಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ. ವಿದ್ಯಾರ್ಥಿಗಳ ಬೇಡಿಕೆ ಹಿನ್ನೆಲೆಯಲ್ಲಿ ಎರಡು ದಿನಗಳ ಪರೀಕ್ಷೆ ಮುಂದೂಡಲು ನಿರ್ಧರಿಸಿರುವುದರಿಂದ ಪ್ರತಿಭಟನೆಯ ಬಳಿಕ ಮಹತ್ವದ ಬೆಳವಣಿಗೆ ನಡೆದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button