Kannada NewsNationalPolitics

*ಎಕೆ-47 ಹಿಡಿದು ನಿಂತವ್ರೆ, ಇಲ್ಲೇನು ಟೆರರಿಸ್ಟ್‌ಗಳು ಇದ್ದಾರಾ?’*: *ದೆಹಲಿಯಲ್ಲಿ ಕೇಂದ್ರದ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿ*

ಪ್ರಗತಿವಾಹಿನಿ ಸುದ್ದಿ:​ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಶಾಸಕಿ ಹಾಗೂ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್, “ಪ್ರತಿಭಟನಾಕಾರರನ್ನು ತಡೆಯಲು ಎಕೆ-47 ಬಂದೂಕು ಹಿಡಿದು ನಿಲ್ಲಿಸಲಾಗಿದೆ, ಇಲ್ಲೇನು ನಕ್ಸಲೈಟ್‌ಗಳು, ದೇಶದ್ರೋಹಿಗಳು ಅಥವಾ ಟೆರರಿಸ್ಟ್‌ಗಳು ಇದ್ದಾರಾ?” ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

​ದೆಹಲಿಯಲ್ಲಿ ನಡೆಯುತ್ತಿರುವ ಸರಣಿ ಪ್ರತಿಭಟನೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪ್ರಸ್ತುತ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.

​ಇದು ಅಘೋಷಿತ ತುರ್ತು ಪರಿಸ್ಥಿತಿ
​”ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಬಂದವರನ್ನು ಪ್ರತಿದಿನ ತಡೆಯುವ ಕೆಲಸವಾಗುತ್ತಿದೆ. ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗಿದೆ, ಇಂಟರ್ನೆಟ್ ನೆಟ್‌ವರ್ಕ್ ಕಡಿತಗೊಳಿಸಲಾಗುತ್ತಿದೆ. ಎಲ್ಲೆಂದರಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ದೆಹಲಿ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಪಡೆಗಳನ್ನು ನಿಯೋಜಿಸಲಾಗಿದೆ. ಪ್ರತಿಭಟನಾಕಾರರ ಎದುರು ಎಕೆ-47 ಹಿಡಿದು ನಿಲ್ಲಿಸಲು ಇಲ್ಲಿ ನಾವೇನು ಉಗ್ರಗಾಮಿಗಳೇ? ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶವನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ತಕ್ಷಣವೇ ಮಧ್ಯಪ್ರವೇಶಿಸಬೇಕು” ಎಂದು ಅವರು ಒತ್ತಾಯಿಸಿದರು.

​ಮತದಾರರ ಪಟ್ಟಿ ಅಕ್ರಮದ ಗಂಭೀರ ಆರೋಪ
​ಚುನಾವಣಾ ವ್ಯವಸ್ಥೆ ಹಾಗೂ ಮತದಾರರ ಪಟ್ಟಿಯಲ್ಲಿ ಬಿಜೆಪಿ ತಂತ್ರಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿದ ಹೆಬ್ಬಾಳ್ಕರ್, “ಬ್ರಿಟಿಷರ ಕಾಲದಲ್ಲೇ ಹುತಾತ್ಮರಾದ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಹೆಸರಲ್ಲೂ ನಕಲಿ ವೋಟಿಂಗ್ ಕಾರ್ಡ್ ಸೃಷ್ಟಿಯಾಗುತ್ತಿದೆ ಎಂದರೆ ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ? ಆಧಾರ್ ಲಿಂಕ್, ದಾಖಲೆಗಳು ಇಲ್ಲದ ಕಾಲದ ವ್ಯಕ್ತಿಗಳ ಭಾವಚಿತ್ರ ಬಳಸಿ ವೋಟರ್ ಐಡಿ ಹೇಗೆ ಬರುತ್ತದೆ? ಬಿಜೆಪಿಯವರು ತಮ್ಮ ಮತದಾರರ ಹೆಸರುಗಳನ್ನು ಅಕ್ರಮವಾಗಿ ಸೇರಿಸಿ, ಉಳಿದವರ ಹೆಸರುಗಳನ್ನು ಡಿಲೀಟ್ ಮಾಡಲು ಫಾರಂ-7 ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ” ಎಂದು ನೇರವಾಗಿ ಆರೋಪಿಸಿದರು.

​ತಮ್ಮ ಕ್ಷೇತ್ರದಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಪಕ್ಷದ ಬಿಎಲ್‌ಒ (BLO) ಮತ್ತು ಕಾರ್ಯಕರ್ತರನ್ನು ಮೊದಲೇ ಎಚ್ಚರಗೊಳಿಸಿ ತಡೆಗಟ್ಟಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

​ಸಂವಿಧಾನ ಹಾಗೂ ಮತದಾನದ ಹಕ್ಕು ಉಳಿಸಲು ಹೋರಾಟ


​”ಮತದಾನದ ಹಕ್ಕು ಸಂವಿಧಾನ ನೀಡಿರುವ ಅತ್ಯಂತ ಪವಿತ್ರವಾದ ಮೂಲಭೂತ ಹಕ್ಕು. ಅದನ್ನು ವ್ಯವಸ್ಥಿತವಾಗಿ ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ. ದೇಶದ ಜನತೆ ಹಾಗೂ ಕರ್ನಾಟಕದ ನಾಗರಿಕರು ಈಗಲೇ ಎಚ್ಚೆತ್ತುಕೊಂಡು ಈ ಅನ್ಯಾಯದ ವಿರುದ್ಧ ಒಗ್ಗೂಡಬೇಕು” ಎಂದು ಕರೆ ನೀಡಿದರು.

ಈ ಹೋರಾಟ ಕೇವಲ ರಾಜಕೀಯ ಪಕ್ಷಕ್ಕಷ್ಟೇ ಸೀಮಿತವಲ್ಲ, ಬದಲಿಗೆ ಇಡೀ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕಿನ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದ ರಾಹುಲ್ ಗಾಂಧಿ ಅವರ ಕರೆಯ ಮೇರೆಗೆ ದೇಶದ ಎಲ್ಲ ರಾಜ್ಯಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಮುಖಂಡರು ದೆಹಲಿಗೆ ಆಗಮಿಸಿದ್ದಾರೆ. ಮಹಿಳೆ-ಪುರುಷರೆಂಬ ಭೇದವಿಲ್ಲದೆ, ಪಕ್ಷಾತೀತವಾಗಿ ಎಲ್ಲಾ ಸಂಘಟನೆಗಳು ಹಾಗೂ ಸಮಸ್ತ ನಾಗರಿಕರು ಸಂವಿಧಾನ ರಕ್ಷಣೆಯ ಈ ಪೀಸ್ ಮಾರ್ಚ್‌ನಲ್ಲಿ ಕೈಜೋಡಿಸುವಂತೆ ಕರೆ ನೀಡಲಾಗಿದೆ. ಈ ಶಾಂತಿಯುತ ಪ್ರತಿಭಟನಾ ಮೆರವಣಿಗೆಯ ಮೂಲಕ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುವ ಕಾರ್ಯಕ್ರಮವೂ ಇದೆ ಎಂದು ಅವರು ವಿವರಿಸಿದರು.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಇಂಡಿಯಾ ಮೈತ್ರಿಕೂಟದ ನಾಯಕರ ಮಾರ್ಗದರ್ಶನದಂತೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಹೆಬ್ಬಾಳ್ಕರ್ ಎಚ್ಚರಿಕೆ ನೀಡಿದರು.

​

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button