Kannada NewsKarnataka NewsLatest

*ಇಂದಿನಿಂದ ಮೈಸೂರಿನಲ್ಲಿ ಯುವದಸರಾ ಸಂಭ್ರಮ*: *ಪ್ರಭುದೇವರಿಂದ ಚಾಲನೆ, ಸಂಗೀತ ದಿಗ್ಗಜರ ರಸದೌತಣ!*

ಪ್ರಗತಿವಾಹಿನಿ ಸುದ್ದಿ: ನಾಡಹಬ್ಬ ಮೈಸೂರು ದಸರಾ ಸಂಭ್ರಮ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದ್ದು, ಸಾಂಸ್ಕೃತಿಕ ನಗರಿ ಮತ್ತೊಂದು ಮನರಂಜನೆಯ ಹಬ್ಬಕ್ಕೆ ಸಜ್ಜಾಗಿದೆ. ಇಂದಿನಿಂದ ಐದು ದಿನಗಳ ಕಾಲ ನಡೆಯಲಿರುವ ಯುವದಸರಾ ಕಾರ್ಯಕ್ರಮಕ್ಕೆ ಖ್ಯಾತ ನಟ ಹಾಗೂ ನೃತ್ಯ ನಿರ್ದೇಶಕ ಪ್ರಭುದೇವ ಚಾಲನೆ ನೀಡಲಿದ್ದಾರೆ. ಅಜನೀಶ್ ಲೋಕನಾಥ್, ಶಂಕರ್ ಮಹದೇವನ್, ಸಿದ್ ಶ್ರೀರಾಮ್ ಸೇರಿದಂತೆ ಸಂಗೀತ ಲೋಕದ ಹಲವು ಗಣ್ಯರು ವೇದಿಕೆಯಲ್ಲಿ ರಂಜಿಸಲಿದ್ದು, ಪ್ರತಿದಿನ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆಯಿದೆ.

ಮೈಸೂರು ನಗರದ ಹೊರವಲಯದ ಉತ್ತನಹಳ್ಳಿ ಸಮೀಪ ಯುವದಸರಾ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೊದಲ ದಿನ ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ರಸಸಂಜೆ ನಡೆಯಲಿದೆ. ಯುವಜನತೆಯನ್ನು ರಂಜಿಸಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಪ್ರತಿ ದಿನವೂ ಸಂಗೀತ ಮತ್ತು ಮನರಂಜನೆಯ ಹಬ್ಬ ಕಳೆಗಟ್ಟಲಿದೆ.

ಯುವದಸರಾದ ಎರಡನೇ ದಿನ ಸಂಗೀತ ನಿರ್ದೇಶಕರಾದ ಶಂಕರ್ ಮಹದೇವನ್, ಎಹ್ಸಾನ್ ಮತ್ತು ಲಾಯ್ ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮೂರನೇ ದಿನ ಖ್ಯಾತ ಗಾಯಕ ಸಿದ್ ಶ್ರೀರಾಮ್ ತಮ್ಮ ಗಾಯನದ ಮೂಲಕ ಸಂಗೀತ ಪ್ರಿಯರನ್ನು ರಂಜಿಸಲಿದ್ದಾರೆ. ನಾಲ್ಕನೇ ದಿನ ಸ್ಯಾಂಡಲ್‌ವುಡ್ ನೈಟ್ಸ್ ಕಾರ್ಯಕ್ರಮದ ಜೊತೆಗೆ ಗಾಯಕ ವಿಜಯ್ ಪ್ರಕಾಶ್, ನಟ ಶಿವರಾಜ್ ಕುಮಾರ್ ಹಾಗೂ ಗಾಯಕ ರಾಜೇಶ್ ಕೃಷ್ಣನ್ ಪಾಲ್ಗೊಳ್ಳಲಿದ್ದಾರೆ. ಕೊನೆಯ ದಿನ ಗಾಯಕಿ ಜಾಸ್ಮಿನ್ ಸೇರಿದಂತೆ ಹಲವು ಕಲಾವಿದರು ಮನರಂಜನೆ ನೀಡಲಿದ್ದಾರೆ.

ಇತ್ತ ಮೈಸೂರಿನ ಕುಪ್ಪಣ್ಣ ಪಾರ್ಕ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನವೂ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಪ್ರಜಾಪ್ರಭುತ್ವದ ಹಬ್ಬದ ಪರಿಕಲ್ಪನೆಯಲ್ಲಿ ಹೂವುಗಳಿಂದಲೇ ವಿಧಾನಸೌಧದ ಮಾದರಿಯನ್ನು ನಿರ್ಮಿಸಲಾಗಿದೆ. ವಿವಿಧ ಹೂವಿನ ಅಲಂಕಾರಗಳು ಮತ್ತು ಕಲಾತ್ಮಕ ವಿನ್ಯಾಸಗಳು ಪ್ರದರ್ಶನದ ಆಕರ್ಷಣೆಯನ್ನು ಹೆಚ್ಚಿಸಿವೆ.

ಶ್ರೀರಂಗಪಟ್ಟಣದಲ್ಲಿಯೂ ದಸರಾ ಸಂಭ್ರಮ ಕಳೆಗಟ್ಟಿದೆ. ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಟಿ ಅದಿತಿ ಪ್ರಭುದೇವ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇನ್ನು, ಕನ್ನಡ ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ವೈಭವ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಅನಾವರಣಗೊಂಡಿದೆ. ನಾದಬ್ರಹ್ಮ ಹಂಸಲೇಖ ಅವರು ದಸರಾ ಸಂಭ್ರಮಕ್ಕೆ ಚಾಲನೆ ನೀಡಿದ್ದು, ಪಟ್ಟದ ಗೊಂಬೆಗಳ ಪೂಜೆ, ಮೈಸೂರು ಅರಮನೆಯ ವೈಭವ ಸಾರುವ ಗೊಂಬೆಗಳ ಪ್ರದರ್ಶನ ಹಾಗೂ ಡೊಳ್ಳು ಕುಣಿತ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಯಾಣಿಕರ ಗಮನ ಸೆಳೆಯುತ್ತಿವೆ.

ದೇಶ-ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕರ್ನಾಟಕದ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ವಿಮಾನ ನಿಲ್ದಾಣದಲ್ಲಿ ವಿಶೇಷ ದಸರಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮುಂದಿನ ಆರು ದಿನಗಳ ಕಾಲ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಒಟ್ಟಿನಲ್ಲಿ, ಮೈಸೂರಿನ ಅರಮನೆಯಿಂದ ಯುವದಸರಾ ವೇದಿಕೆವರೆಗೆ ಹಾಗೂ ವಿಮಾನ ನಿಲ್ದಾಣದವರೆಗೂ ನಾಡಹಬ್ಬದ ಸಂಭ್ರಮ ಎಲ್ಲೆಡೆ ಹರಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button