CrimeKannada NewsLatestNational

*ಫೇಸ್ ಬುಕ್ ಲೈವ್ ನಲ್ಲಿದ್ದಾಗಲೇ ಡ್ರಗ್ಸ್ ವಿರೋಧಿ ಹೋರಾಟಗಾರನನ್ನು ಗುಂಡಿಕ್ಕಿ ಕೊಂದ ಮೆಡಿಕಲ್ ಶಾಪ್ ಮಾಲೀಕ*

ಪ್ರಗತಿವಾಹಿನಿ ಸುದ್ದಿ: ಮಾದಕ ದ್ರವ್ಯಗಳ ಅಕ್ರಮ ಮಾರಾಟದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿದ್ದ ಖ್ಯಾತ ಸಾಮಾಜಿಕ ಹೋರಾಟಗಾರನನ್ನು ಮೆಡಿಕಲ್‌ ಶಾಪ್‌ ಮಾಲೀಕನೊಬ್ಬ ಗುಂಡಿಟ್ಟು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮೆಡಿಕಲ್ ಶಾಪ್‌ನಲ್ಲಿ ನಶೆಯುಂಟು ಮಾಡುವ ಔಷಧಿಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಫೇಸ್‌ಬುಕ್ ಲೈವ್ ಮಾಡುತ್ತಿದ್ದಾಗಲೇ ಮಾಲೀಕ ಗುಂಡಿಟ್ಟು ಹತ್ಯೆ ಮಾಡಿದ್ದಾನೆ.

ಪಂಜಾಬ್‌ನ ಮಾನ್ಸಾದಲ್ಲಿ ಪರ್ವಿಂದರ್ ಸಿಂಗ್ ಝೋಟಾ ಹತ್ಯೆಯಾದ ವ್ಯಕ್ತಿ. ಸಾಮಾಜಿಕ ಜಾಲತಾಣಗಳಲ್ಲಿ ಮೆಡಿಕಲ್ ಶಾಪ್‌ಗಳ ಅಕ್ರಮ ಜಾಲವನ್ನು ಬಯಲಿಗೆಳೆಯುತ್ತಿದ್ದ ಪರ್ವಿಂದರ್ ಸಿಂಗ್ ಝೋಟಾ, ಮಂಗಳವಾರ ಮಾನ್ಸಾದ ಮೆಡಿಕಲ್ ಸ್ಟೋರ್ ಒಂದರ ಮುಂದೆ ನಿಂತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಲೈವ್ ಆರಂಭಿಸಿದ್ದರು. ಐದು ನಿಮಿಷಗಳ ಈ ವಿಡಿಯೋದಲ್ಲಿ, ಝೋಟಾ ಅವರೊಂದಿಗೆ ವೃದ್ಧರೊಬ್ಬರು ನಿಂತಿದ್ದು, ಅವರು ಈ ಅಂಗಡಿಯಿಂದಲೇ ಮಾದಕ ಔಷಧಿಗಳನ್ನು ಖರೀದಿಸಿದ್ದಾರೆ ಎಂದು ಆರೋಪಿಸಿದ್ದರು.

ಈ ವೇಳೆ ಝೋಟಾ ಹಾಗೂ ಅಂಗಡಿ ಮಾಲೀಕನ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಅಂಗಡಿಯವನು ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡಿರುವುದು ವಿಡಿಯೋದಲ್ಲಿ ಕಂಡುಬಂದಿದ್ದು, ಆತನನ್ನು ಪ್ರಶ್ನಿಸಿದ ಝೋಟಾ, “ಕೈಯಲ್ಲಿ ಪಿಸ್ತೂಲ್ ಏಕೆ ಇಟ್ಟುಕೊಂಡಿದ್ದೀಯಾ? ತಾಕತ್ತಿದ್ದರೆ ನನ್ನನ್ನು ಕೊಲ್ಲು” ಎಂದು ಸವಾಲು ಹಾಕಿದ್ದಾರೆ.

ಸಿಸಿಟಿವಿ ದೃಶ್ಯಾವಳಿ ತೋರಿಸುವಂತೆ ಆಗ್ರಹಿಸಿ, ಪೊಲೀಸರಿಗೆ ಕರೆ ಮಾಡುವಂತೆ ತಮ್ಮ ಬೆಂಬಲಿಗರಿಗೆ ಸೂಚಿಸಿದ್ದರು. ಸುಮಾರು ನಾಲ್ಕು ನಿಮಿಷಗಳ ವಾಗ್ವಾದದ ನಂತರ, ಮೆಡಿಕಲ್ ಶಾಪ್ ಮಾಲೀಕ ಏಕಾಏಕಿ ಝೋಟಾ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡೇಟು ತಗುಲಿದ ತಕ್ಷಣ ಮೊಬೈಲ್ ಫೋನ್ ಕೆಳಗೆ ಬಿದ್ದಿದ್ದು, ನೇರಪ್ರಸಾರ ಸ್ಥಗಿತಗೊಂಡಿದೆ. ಘಟನೆಯ ಬೆನ್ನಲ್ಲೇ ಆರೋಪಿ ಅಂಗಡಿ ಮಾಲೀಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಫೇಸ್‌ಬುಕ್‌ನಲ್ಲಿ 24,000ಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದ ಝೋಟಾ, ಕಳೆದ ಹಲವು ವರ್ಷಗಳಿಂದ ಮಾನ್ಸಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಶೆ ಹಾಗೂ ಮಾದಕ ಔಷಧಿಗಳ ಅಕ್ರಮ ಮಾರಾಟದ ವಿರುದ್ಧ ಸಕ್ರಿಯವಾಗಿ ಹೋರಾಡುತ್ತಿದ್ದರು. 2023ರ ಜುಲೈನಲ್ಲಿ ಮೆಡಿಕಲ್ ಸ್ಟೋರ್ ಒಂದರ ವಿವಾದಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಗಲಭೆ ಮತ್ತು ಹಲ್ಲೆ ಪ್ರಕರಣ ದಾಖಲಾಗಿ ಬಂಧನವಾಗಿತ್ತು. ಎರಡು ತಿಂಗಳ ಜೈಲುವಾಸದ ನಂತರ ಬಿಡುಗಡೆಯಾಗಿದ್ದ ಅವರು ತಮ್ಮ ಹೋರಾಟವನ್ನು ಮುಂದುವರಿಸಿದ್ದರು.

ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲಿಸರು ತನಿಖೆ ಕೈಗೊಂಡಿದ್ದಾರೆ. ಮೆಡಿಕಲ್ ಶಾಪ್ ಮಾಲೀಕನ ಪತ್ತೆಗೆ ಬಲೆ ಬೀಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button