
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಹಿಂಗಾರು ಹಂಗಾಮು ಆರಂಭವಾಗಿದ್ದು, ಮಳೆಯ ವಿಳಂಬದಿಂದ ಬಿತ್ತನೆ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವುದು, ಪರ್ಯಾಯ ಬೆಳೆಗಳ ಆಯ್ಕೆ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಗಳ ಮೂಲಕ ಉತ್ತಮ ಇಳುವರಿ ಪಡೆಯುವ ಕುರಿತು ಕೃಷಿ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಜಂಟಿಯಾಗಿ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ.
ಅಕ್ಟೋಬರ್ 13ರಂದು ಕೆವಿಕೆ ಮತ್ತಿಕೊಪ್ಪದ ಸಭಾಂಗಣದಲ್ಲಿ ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ವಿಜ್ಞಾನಿಗಳ ಸಹಯೋಗದಲ್ಲಿ ಜಿಲ್ಲೆಯ ಕೃಷಿ ಅಧಿಕಾರಿಗಳಿಗಾಗಿ ತಾಂತ್ರಿಕ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರು ತಮ್ಮ ವ್ಯಾಪ್ತಿಯ ಮಳೆ ಪ್ರಮಾಣ, ಬೆಳೆಗಳ ಸ್ಥಿತಿಗತಿ ಹಾಗೂ ರೈತರು ಎದುರಿಸುತ್ತಿರುವ ಕ್ಷೇತ್ರಮಟ್ಟದ ಸಮಸ್ಯೆಗಳನ್ನು ವಿಜ್ಞಾನಿಗಳ ಗಮನಕ್ಕೆ ತಂದರು. ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವ ಕುರಿತು ಚರ್ಚೆ ನಡೆಸಲಾಯಿತು.
ಕಾರ್ಯಾಗಾರದ ಆರಂಭದಲ್ಲಿ ಕೃಷಿ ಅಧಿಕಾರಿಗಳಿಗೆ ಕೆವಿಕೆ ಕೇಂದ್ರದ ಪ್ರಾತ್ಯಕ್ಷಿಕೆ ಕ್ಷೇತ್ರಗಳನ್ನು ಪರಿಚಯಿಸಲಾಯಿತು. ವಿಷಯ ತಜ್ಞ ಡಾ. ಪ್ರವೀಣ ಯಡಹಳ್ಳಿ ಅವರು ಬದನೆ, ಬೆಂಡೆ, ಹೂವಿನ ಬೆಳೆಗಳು, ಬೀನ್ಸ್ ಹಾಗೂ ಹಾಗಲಕಾಯಿ ಸೇರಿದಂತೆ ವಿವಿಧ ತರಕಾರಿ ಬೆಳೆಗಳ ಪ್ರಾತ್ಯಕ್ಷಿಕೆಗಳ ಕುರಿತು ಮಾಹಿತಿ ನೀಡಿದರು. ಕೆವಿಕೆ ಮುಖ್ಯಸ್ಥ ಡಾ. ಚೌರಡ್ಡಿ ಅವರು ಕಬ್ಬಿನಲ್ಲಿ ಸೋಯಾಬೀನ್, ಚಿಯಾ ಬೀಜ ಸೇರಿದಂತೆ ವಿವಿಧ ಅಂತರ ಬೆಳೆಗಳ ಪ್ರಾತ್ಯಕ್ಷಿಕೆಗಳ ಜೊತೆಗೆ ಶೇಂಗಾ ಹಾಗೂ ಮುಂಗಾರು ಜೋಳದ ಬೆಳೆಗಳ ಬಗ್ಗೆ ವಿವರಿಸಿದರು. ಜಂಟಿ ಕೃಷಿ ನಿರ್ದೇಶಕ ಎಚ್.ಡಿ. ಕೋಳೆಕರ ಹಾಗೂ ವಿಜ್ಞಾನಿಗಳು ಕಾರ್ಯಾಗಾರ ಉದ್ಘಾಟಿಸಿದರು.
ಡಾ. ಎಸ್.ಎಸ್. ನೂಲಿ ಅವರು ಬರ ಪರಿಸ್ಥಿತಿಯಲ್ಲಿ ಬಿತ್ತನೆ ಹಾಗೂ ಪರ್ಯಾಯ ಬೆಳೆಗಳ ಆಯ್ಕೆ ಕುರಿತು ಮಾಹಿತಿ ನೀಡಿದರು. ಅಥಣಿ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ತೊಗರಿ ಬೆಳೆಗೆ 140 ದಿನಗಳಲ್ಲಿ ಮಾಗುವ ‘ನಾಮ್-88’ ತಳಿಯನ್ನು ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಜೋಳ ಬೆಳೆಗೆ ಡಿಎಸ್ಬಿ-11ಆರ್ ತಳಿಯನ್ನು ಬಳಸುವಂತೆ ಸೂಚಿಸಿದರು. ಕಬ್ಬಿನಲ್ಲಿ ಅಲ್ಯೂಮಿನಿಯಂ ಸಿಲಿಕೇಟ್ ಅನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂ ಬೆರೆಸಿ ಬಳಸುವುದು ಹಾಗೂ ಕುಳೆ ಕಬ್ಬಿನಲ್ಲಿ ಹುಸಿ ಗುಣಿಗಳನ್ನು ತುಂಬುವ ಕುರಿತು ಮಾರ್ಗದರ್ಶನ ನೀಡಿದರು.
ಡಾ. ಬಸವರಾಜ ಏಣಗಿ ಅವರು ಹಿಂಗಾರು ಹಂಗಾಮಿನಲ್ಲಿ ಕನಿಷ್ಠ 50 ಮಿ.ಮೀ. ಮಳೆಯಾದ ಬಳಿಕ ಬಿತ್ತನೆ ಕೈಗೊಳ್ಳುವುದು ಸೂಕ್ತ ಎಂದು ತಿಳಿಸಿದರು. ಅಗತ್ಯವಿದ್ದಲ್ಲಿ 50 ಮಿ.ಮೀ. ನೀರಾವರಿ ಒದಗಿಸಿ ಬಿತ್ತನೆ ಮಾಡುವಂತೆ ಸಲಹೆ ನೀಡಿದರು. ಮಳೆಯ ವಿಳಂಬಕ್ಕೆ ರೈತರು ಆತಂಕಪಡುವ ಬದಲು ಪರಿಸ್ಥಿತಿಯನ್ನು ಅವಲೋಕಿಸಿ ತಾಳ್ಮೆಯಿಂದ ಬಿತ್ತನೆ ಕೈಗೊಳ್ಳಬೇಕು ಎಂದು ಹೇಳಿದರು.
ಜೋಳ ಮತ್ತು ಕಡಲೆ ಬೀಜಗಳಿಗೆ ಸೂಕ್ತ ಬೀಜೋಪಚಾರ ಮಾಡುವುದರಿಂದ ಬರ ನಿರೋಧಕತೆ ಹಾಗೂ ಮೊಳಕೆಯ ಪ್ರಮಾಣ ಹೆಚ್ಚಿಸಿ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ವಿವರಿಸಿದರು.
ಕ್ಯಾಲ್ಸಿಯಂ ಕ್ಲೋರೈಡ್ ಬಳಕೆಯ ಪರ್ಯಾಯವಾಗಿ ಸುಣ್ಣದ ತಿಳಿನೀರಿನಿಂದ ಬೀಜೋಪಚಾರ ಮಾಡುವ ವಿಧಾನವನ್ನೂ ತಿಳಿಸಿದರು. ಬೆಳೆಗಳಿಗೆ ಅನುಗುಣವಾಗಿ ಬೀಜಗಳನ್ನು ನೆನೆಸುವ ಅವಧಿ ಬದಲಾಗುವುದರಿಂದ ಜೋಳದ ಬೀಜವನ್ನು ಏಳು ಗಂಟೆ ಹಾಗೂ ಕಡಲೆ ಬೀಜವನ್ನು 30 ನಿಮಿಷ ನೆನೆಸುವಂತೆ ಸಲಹೆ ನೀಡಿದರು.
ಡಾ. ಸಂತೋಷ ಒಂಟಿ ಅವರು ಹತ್ತಿ ಬೆಳೆಯಲ್ಲಿ ಹೆಚ್ಚು ಸಾಂದ್ರತೆಯ ಕೃಷಿ ಪದ್ಧತಿಗೆ ಸೂಕ್ತವಾದ ತಳಿಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ರಾಸಿ ಕಂಪನಿಯ ಮ್ಯಾಕ್ಸ್ ತಳಿಯನ್ನು ಉದಾಹರಣೆಯಾಗಿ ಉಲ್ಲೇಖಿಸಿದರು.
ಡಾ. ಹಿರೇಮಠ ಅವರು ಕಡಿಮೆ ನೀರಿನಲ್ಲಿಯೂ ಬೆಳೆಯಬಹುದಾದ ಚಿಯಾ ಬೀಜದ ಕೃಷಿಗೆ ಆದ್ಯತೆ ನೀಡುವಂತೆ ಸೂಚಿಸಿದರು. ಈ ಬೆಳೆಗೆ ಖರೀದಿ ವ್ಯವಸ್ಥೆ ಹಾಗೂ ಮಾರುಕಟ್ಟೆ ಅವಕಾಶಗಳಿರುವುದರಿಂದ ರೈತರು ಪರ್ಯಾಯ ಬೆಳೆಗಳಾಗಿ ಪರಿಗಣಿಸಬಹುದು ಎಂದು ತಿಳಿಸಿದರು.
ಡಾ. ಧನಂಜಯ ಚೌಗಲಾ ಅವರು ಕಬ್ಬಿನಲ್ಲಿ ಗೊಣ್ಣೆ ಹುಳದ ಬಾಧೆ ನಿಯಂತ್ರಣಕ್ಕೆ ವರ್ಷಪೂರ್ತಿ ಸಮಗ್ರ ನಿರ್ವಹಣಾ ಕ್ರಮಗಳನ್ನು ಅನುಸರಿಸುವ ಅಗತ್ಯವನ್ನು ವಿವರಿಸಿದರು. ಬಿತ್ತನೆಯಿಂದ ಕಟಾವಿನವರೆಗೆ ವಿವಿಧ ಹಂತಗಳಲ್ಲಿ ನಿಯಮಿತವಾಗಿ ನಿರ್ವಹಣೆ ಕೈಗೊಂಡರೆ ಕೀಟದ ಬಾಧೆಯನ್ನು ನಿಯಂತ್ರಿಸಬಹುದು ಎಂದರು.
ಡಾ. ನಾಗರಾಜ ಅವರು ಗೋಧಿ ಬೆಳೆಯಲ್ಲಿ ಫ್ಯುಸೇರಿಯಂ ಹೆಡ್ ಬ್ಲೈಟ್ ರೋಗ ನಿರ್ವಹಣೆಗೆ ಬೀಜ ಬಿತ್ತುವ ಮೊದಲು ಪ್ರತಿ ಕೆ.ಜಿ. ಬೀಜಕ್ಕೆ 2 ಗ್ರಾಂ ವೈಟಾವ್ಯಾಕ್ಸ್ ಶಿಲೀಂಧ್ರನಾಶಕದಿಂದ ಬೀಜೋಪಚಾರ ಮಾಡುವಂತೆ ಸಲಹೆ ನೀಡಿದರು. ಕೆವಿಕೆ ತುಕ್ಕಾನಟ್ಟಿಯ ಡಾ. ಪರಶುರಾಮ ಪಾಟೀಲ ಅವರು ಡಿಸೆಂಬರ್ ತಿಂಗಳಲ್ಲಿ ಅರಿಶಿಣ ಬೆಳೆ ಬೆಳೆಯುವ ಕುರಿತು ಮಾಹಿತಿ ನೀಡಿದರು. ಅರಿಶಿಣ ಬೆಳೆಗಾರರು ಹಾಗೂ ಖರೀದಿದಾರರ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕಾನ್ಕ್ಲೇವ್ ಆಯೋಜಿಸುವುದಾಗಿಯೂ ತಿಳಿಸಿದರು.
ಅರಿಶಿಣದಲ್ಲಿನ ಕೊಳೆ ರೋಗ ನಿರ್ವಹಣೆಗೆ ಟ್ರೈಬೇಸಿಕ್ ಕಾಪರ್ ಸಲ್ಫೇಟ್ ಹಾಗೂ ಹಸಿ ಮೆಣಸಿನಕಾಯಿಯಲ್ಲಿ ಕಾಯಿ ಕೊಳೆ ರೋಗ ನಿಯಂತ್ರಣಕ್ಕೆ ಸೂಕ್ತ ಶಿಲೀಂಧ್ರನಾಶಕಗಳ ಬಳಕೆಯ ಕುರಿತು ಮಾರ್ಗದರ್ಶನ ನೀಡಿದರು.
ಸಹ ಸಂಶೋಧನಾ ನಿರ್ದೇಶಕ ಡಾ. ಎಸ್.ಎ. ದೇಸಾಯಿ ಅವರು ರೈತರಿಗೆ ಕೇಸರಿ ಕೃಷಿಯಂತಹ ಅಧಿಕ ಆದಾಯ ತರುವ ಪರ್ಯಾಯ ಕೃಷಿ ವಿಧಾನಗಳ ಬಗ್ಗೆಯೂ ಮಾಹಿತಿ ನೀಡುವಂತೆ ಸಲಹೆ ನೀಡಿದರು.
ಕೊನೆಯಲ್ಲಿ ಮಾತನಾಡಿದ ಜಂಟಿ ಕೃಷಿ ನಿರ್ದೇಶಕ ಎಚ್.ಡಿ. ಕೋಳೆಕರ ಅವರು ಕೃಷಿ ಇಲಾಖೆಯ ಎಲ್ಲ ಯೋಜನೆಗಳನ್ನು ತ್ವರಿತವಾಗಿ ಹಾಗೂ ಸಮರ್ಪಕವಾಗಿ ರೈತರಿಗೆ ತಲುಪಿಸುವಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಿದರು.
ಕಾರ್ಯಕ್ರಮವನ್ನು ಸಿ.ಐ. ಹೂಗಾರ ನಿರೂಪಿಸಿದರು. ಉಪ ಕೃಷಿ ನಿರ್ದೇಶಕ ಸಲಿಂ ಸಂಗತ್ರಾಸ ವಂದನಾರ್ಪಣೆ ಸಲ್ಲಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



