Belagavi NewsBelgaum NewsKannada NewsKarnataka NewsNationalSportsWorld

*42 ರಾಷ್ಟ್ರೀಯ ಪದಕಗಳ ಸಾಧನೆಗೆ ಈಗ ಅಂತಾರಾಷ್ಟ್ರೀಯ ವೇದಿಕೆಯ ಗೌರವ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 5ನೇ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಬೆಳಗಾವಿ ಜಿಲ್ಲೆಯ ಮುತ್ತಗಾ ಗ್ರಾಮದ ಪ್ರತಿಭಾವಂತ ಪ್ಯಾರಾ ಈಜುಪಟು ಸ್ವಾತಿಕ್ ನಾರಾಯಣ ಪಾಟೀಲ ಭಾರತವನ್ನು ಪ್ರತಿನಿಧಿಸಲಿದ್ದಾರೆ. 

ಸತತ ಅಭ್ಯಾಸ, ಕಠಿಣ ಪರಿಶ್ರಮ ಹಾಗೂ ಅಚಲ ಸಂಕಲ್ಪದ ಮೂಲಕ ಈ ಮಹತ್ವದ ಸಾಧನೆ ಮಾಡಿರುವ ಅವರು, ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಹೆಚ್ಚಿಸುವ ಉತ್ಸಾಹದಲ್ಲಿದ್ದಾರೆ.

ಎರಡು ಸ್ಪರ್ಧೆಗಳಲ್ಲಿ ಸ್ವಾತಿಕ್ ಕಣಕ್ಕೆ

ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಸ್ವಾತಿಕ್ ಎರಡು ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಅಕ್ಟೋಬರ್ 19ರಂದು 200 ಮೀಟರ್ ವೈಯಕ್ತಿಕ ಮೆಡ್ಲೆ ಹಾಗೂ ಅಕ್ಟೋಬರ್ 22ರಂದು 100 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

42 ರಾಷ್ಟ್ರೀಯ ಪದಕಗಳ ಸಾಧಕ

ಸ್ವಾತಿಕ್ ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಈಜು ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಕರ್ನಾಟಕವನ್ನು ಪ್ರತಿನಿಧಿಸಿ ಹಲವು ರಾಷ್ಟ್ರೀಯ ಪ್ಯಾರಾ ಈಜು ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸಿರುವ ಅವರು, ಒಟ್ಟು 42 ರಾಷ್ಟ್ರೀಯ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರಲ್ಲಿ 33 ಚಿನ್ನ, 7 ಬೆಳ್ಳಿ ಹಾಗೂ 2 ಕಂಚಿನ ಪದಕಗಳು ಸೇರಿವೆ. ಅಲ್ಲದೆ, ಆರು ರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸಿರುವ ಹೆಗ್ಗಳಿಕೆಯೂ ಅವರಿಗಿದೆ.

ಪ್ರತಿದಿನ ಆರು ಗಂಟೆಗಳ ಕಠಿಣ ಅಭ್ಯಾಸ

ಬೆಳಗಾವಿಯ ಸುವರ್ಣ ಜೆಎನ್‌ಎಂಸಿ ಒಲಿಂಪಿಕ್ ಗಾತ್ರದ ಈಜುಕೊಳ ಹಾಗೂ ಬೆಂಗಳೂರಿನ ನೆಟ್ಟಕಲ್ಲಪ್ಪ ಈಜು ಕೇಂದ್ರದಲ್ಲಿ ಸ್ವಾತಿಕ್ ತರಬೇತಿ ಪಡೆಯುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ ಮೂರು ಗಂಟೆ ಮತ್ತು ಸಂಜೆ ಮೂರು ಗಂಟೆಗಳ ಕಾಲ ಅಭ್ಯಾಸ ನಡೆಸುತ್ತಿದ್ದಾರೆ.

ಉಮೇಶ್ ಕಲಘಟಗಿ ಅವರ ಮಾರ್ಗದರ್ಶನದಲ್ಲಿ ಶರತ್ ಚಂದ್ರ, ಅಂಕುಶ್ ಕಣಬರಕರ್, ಅಕ್ಷಯ್ ಶೇರೆಗಾರ್, ಅಜಿಂಕ್ಯ ಮೆಂಡ್ಕೆ, ನಿತೀಶ್ ಕುಡುಚಕರ್ ಹಾಗೂ ಗೋವರ್ಧನ್ ಕಾಕತ್ಕರ್ ಅವರು ಸ್ವಾತಿಕ್ ಅವರ ತರಬೇತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಪ್ಯಾರಾಲಿಂಪಿಕ್ಸ್‌ನಲ್ಲಿ ದೇಶ ಪ್ರತಿನಿಧಿಸುವ ಗುರಿ

ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ದೊರೆತಿರುವುದು ತಮ್ಮ ಜೀವನದ ಅತ್ಯಂತ ಹೆಮ್ಮೆಯ ಕ್ಷಣಗಳಲ್ಲಿ ಒಂದಾಗಿದೆ ಎಂದು ಸ್ವಾತಿಕ್ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಸಾಧನೆಯ ಹಿಂದೆ ತರಬೇತುದಾರರು, ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಹಿತೈಷಿಗಳ ನಿರಂತರ ಬೆಂಬಲ ಮತ್ತು ಮಾರ್ಗದರ್ಶನವಿದೆ ಎಂದು ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

“ಭಾರತವನ್ನು ಪ್ರತಿನಿಧಿಸುವುದು ನನ್ನ ಕನಸು ನನಸಾದ ಕ್ಷಣ. ಆದರೆ ಇದು ಕೇವಲ ಆರಂಭವಷ್ಟೇ. ಮುಂದಿನ ದಿನಗಳಲ್ಲಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ, ದೇಶಕ್ಕೆ ಕೀರ್ತಿ ತರುವುದು ನನ್ನ ಅಂತಿಮ ಗುರಿ” ಎಂದು ಸ್ವಾತಿಕ್ ಹೇಳಿದ್ದಾರೆ.

ಸಾಧನೆಗೆ ಗಣ್ಯರ ಪ್ರೋತ್ಸಾಹ

ಮುತ್ತಗಾ ಗ್ರಾಮದ ನಾರಾಯಣ ಪಾಟೀಲ ಹಾಗೂ ಚಂಗುನಾ ಪಾಟೀಲ ದಂಪತಿಯ ಪುತ್ರನಾಗಿರುವ ಸ್ವಾತಿಕ್, ಅಲಹಾಬಾದ್‌ನ ಎನ್‌ಐಟಿಯಲ್ಲಿ ಪದವಿ ಪಡೆದಿದ್ದಾರೆ. ಪ್ರಸ್ತುತ ಝಾಪಿಂಗ್ (Zopping) ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸ್ವಾತಿಕ್ ಅವರ ಕ್ರೀಡಾ ಸಾಧನೆಗೆ ಕೆಎಎಚ್‌ಇಆರ್ ಕುಲಪತಿ ಡಾ. ಪ್ರಭಾಕರ ಕೋರೆ, ಜಯಭಾರತ್ ಫೌಂಡೇಶನ್ ಅಧ್ಯಕ್ಷ ಜಯಂತ್ ಹುಂಬರವಾಡಿ, ಪಾಲಿಹೈಡ್ರಾನ್ ಫೌಂಡೇಶನ್ ಅಧ್ಯಕ್ಷ ದಿಲೀಪ್ ಚಿಟ್ನಿಸ್, ಅಲೈಡ್ ಫೌಂಡರ್ಸ್ ಬೆಳಗಾವಿಯ ಸಿಎಂಡಿ ರಾಮ್ ಮಲ್ಯ, ಎಸ್‌ಎಲ್‌ಕೆ ಗ್ರೂಪ್ ಬೆಂಗಳೂರು, ಡಾ. ನಿತಿನ್ ಖೋತ್, ರೋಟೇರಿಯನ್ ಅವಿನಾಶ್ ಪೋತದಾರ, ಮಾನೆಕ್ ಕಪಾಡಿಯಾ, ಲತಾ ಕಿತ್ತೂರು, ಸುಧೀರ್ ಕುಸಣೆ, ಪ್ರಸಾದ್ ತೆಂಡೋಲ್ಕರ್ ಸೇರಿದಂತೆ ಹಲವು ಗಣ್ಯರು ಪ್ರೋತ್ಸಾಹ ಮತ್ತು ಬೆಂಬಲ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಪ್ರತಿಭೆ ಅಂತರರಾಷ್ಟ್ರೀಯ ಕ್ರೀಡಾ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಜಿಲ್ಲೆ ಹಾಗೂ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಸ್ವಾತಿಕ್ ಅವರ ಸಾಧನೆಗೆ ಕ್ರೀಡಾಭಿಮಾನಿಗಳು ಮತ್ತು ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದು, ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಯಶಸ್ಸು ಸಾಧಿಸಲಿ ಎಂದು ಹಾರೈಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button