Kannada NewsKarnataka NewsPolitics

*ಮಾಜಿ ಸಿಎಂ ವಿರುದ್ಧ ಆ ಮಹಿಳೆಯನ್ನು ಎತ್ತಿ ಕಟ್ಟುವ ನೀಚ ಕೆಲಸ ಮಾಡುತ್ತಾನೆ*: *ಮತ್ತೊಂದು ಸ್ಫೋಟಕ ಆರೋಪ ಮಾಡಿದ ಹೆಚ್.ಡಿ.ಕುಮಾರಸ್ವಾಮಿ*

ಇಡೀ ವ್ಯವಸ್ಥೆಯನ್ನೇ ಬ್ಲಾಕ್ಮೇಲ್ ಮಾಡುವ ದುಷ್ಟನಿಗೆ ಡಿ.ಕೆ ಶಿವಕುಮಾರ್ ಸರ್ಕಾರ ಶರಣಾಗಿದೆ

ಪ್ರಗತಿವಾಹಿನಿ ಸುದ್ದಿ: ಅವನು ಯಾವನಿಗೋ ನಟ್ಟು ಬೋಲ್ಟು ಸರಿ ಇದ್ದಂತೆ ಇಲ್ಲ. 2028ಕ್ಕೆ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರಕಾರ ಬರುವುದು ನಿಶ್ಚಿತ. ಈಗಿರುವ ಮುಖ್ಯಮಂತ್ರಿ ಇರುವುದಿಲ್ಲ. ಆಗ ಕುಮಾರಸ್ವಾಮಿಯ ಇನ್ನೊಂದು ಮುಖ ತೋರಿಸುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ಹಾಸನದಲ್ಲಿ ಶಾಸಕ ಸ್ವರೂಪ ಪ್ರಕಾಶ್ ಅವರ ನಿವಾಸದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು; ನನ್ನನ್ನು ಆತ ಉತ್ತರ ಕುಮಾರ, ನಿರುದ್ಯೋಗಿ ಎಂದು ಕರೆದಿದ್ದಾರೆ. ಆತನನ್ನು ಗೃಹ ಸಚಿವ ಎಂದು ಕರೆಯಲು ಆಗುತ್ತದೆಯೇ? ಎಂದ ಕುಮಾರಸ್ವಾಮಿ ಅವರು, ಈ ಮಂತ್ರಿಯ ನಡೆ, ವರಸೆ ನೋಡಿದರೆ ಸ್ಟಿಂಗ್ ವಿಚಾರದಲ್ಲಿ ದೊಡ್ಡ ಹುನ್ನಾರ ನಡೆದಿದೆ ಎಂಬ ಅನುಮಾನ ಬರುತ್ತಿದೆ. ಇಡೀ ರಾಜ್ಯದ ದಿಕ್ಕು ತಪ್ಪಿಸಲು, ಸದಾಕಾಲ ಕುಮಾರಸ್ವಾಮಿಯನ್ನು ಪ್ರಚೋದಿಸಲು ಮುಖ್ಯಮಂತ್ರಿ ಪ್ರಿಯಾಂಕ್ ಖರ್ಗೆಗೆ ಸುಪಾರಿ ಕೊಟ್ಟಿರಬಹುದು. ಕೊಟ್ಟಿದ್ದರೆ ಕೊಡಲಿ ಎಂದು ಸಚಿವರು ಕಿಡಿಕಾರಿದರು.

ಈ ವ್ಯಕ್ತಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ಮಂತ್ರಿ ಆಗಿದ್ದಾಗ ನಡೆದಿರುವ ಕೆಪಿಎಸ್ಸಿ ಹಗರಣದ ಬಗ್ಗೆ ಎಲ್ಲ ಮಾಹಿತಿ ಇದ್ದರೂ ಎಲ್ಲಿದೆ ಹಗರಣ ಎಂದು ಕೇಳುತ್ತಾರೆ. ನಾನು ಸಾಲು ಸಾಲಾಗಿ ದಾಖಲೆಗಳನ್ನು ಬಿಡುಗಡೆ ಮಾಡಿದರೂ ಅದರ ಬಗ್ಗೆ ತುಟಿ ಬಿಚ್ಚಿದ ಈ ಖರ್ಗೆ, ಅದೇ ಬೇರೆ ವಿಷಯಗಳು ಬಂದ ಕೂಡಲೇ ಗಂಟಲು ದೊಡ್ಡದು ಮಾಡಿ ಕೂಗಾಡುತ್ತಾರೆ. ಕೆಪಿಎಸ್ಸಿ ಹಗರಣದ ವಿಚಾರದಲ್ಲಿ ಅವರ ಬಳಿ ಉತ್ತರವೇ ಇಲ್ಲ. ಜತೆಗೆ ಸ್ಟಿಂಗ್ ಆಪರೇಷನ್ ನಾನೇ ಮಾಡಿದ್ದು ಎಂದು ಅಪರಾಧಿ ಹೇಳಿದ್ದರೂ ಅವನನ್ನು ಮುಟ್ಟುವ ಧೈರ್ಯ ಈ ಮಂತ್ರಿಗೆ ಇಲ್ಲ. ಈಗಲೂ ಆರೋಪಿಯನ್ನು ರಕ್ಷಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಇವರೆಲ್ಲ ಸಿದ್ದರಾಮಯ್ಯ ಅವರಿಗೆ ಚಿರಋಣಿ ಇರಬೇಕು. ಅವರೊಬ್ಬರು ಇಲ್ಲದಿದ್ದರೆ ಇಷ್ಟೊತ್ತಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವೇ ಮುಗಿದು ಹೋಗುತ್ತಿತ್ತು. ಅಂತ ವ್ಯಕ್ತಿಯನ್ನು ಮುಗಿಸಲು ಈ ಪ್ರಿಯಾಂಕ ಖರ್ಗೆ, ಹಾಲಿ ಮುಖ್ಯಮಂತ್ರಿ ಎಲ್ಲರೂ ಸೇರಿಕೊಂಡು ಸ್ಟಿಂಗ್ ಮಾಡುವ ಕಿರಾತಕರನ್ನು ಜತೆಯಲ್ಲಿಟ್ಟುಕೊಂಡು ಅವರ ಅಧಿಕಾರವನ್ನು ಕಿತ್ತುಕೊಂಡರು ಎಂದು ಸಚಿವರು ಆರೋಪಿಸಿದರು.

ಇವರೇನು ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತಾರೆಯೇ? ಇನ್ನೊಂದು ವರ್ಷ ಕಳೆಯಲಿ. ಜನಾದೇಶ ಬರುತ್ತದೆ. ಇವರ ಅಕ್ರಮಗಳಿಗೆ ಕರ್ನಾಟಕದ ಜನ ತಕ್ಕ ಪಾಠ ಕಲಿಸುತ್ತಾರೆ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ಆಗ ನನ್ನ ಇನ್ನೊಂದು ಮುಖವನ್ನು ಇವರೆಲ್ಲ ತೋರಿಸುತ್ತೇನೆ. ಕುಮಾರಸ್ವಾಮಿ ಏನು ಎಂಬುದು ಇವರಿಗೆ ಅರಿವು ಮಾಡಿಸುತ್ತೇನೆ ಎಂದು ಕೇಂದ್ರ ಸಚಿವರು ಗುಡುಗಿದರು.

ಸ್ಟಿಂಗ್ ಮಾಡಿದ ಇವನು ಈಗ ನೋಡಿದರೆ ಸಿದ್ದರಾಮಯ್ಯ ಸಾಕ್ಷಾತ್ ನಮ್ಮಪ್ಪನ ತರ ಎಂದು ಹೇಳುತ್ತಾನೆ. ಇನ್ನೊಬ್ಬರ ತಂದೆ ತಾಯಿ ಬಗ್ಗೆ ಗೌರವ ಇಲ್ಲದ ಇವನು ಯಾರಿಗೆ ಹುಟ್ಟಿದನೋ ಗೊತ್ತಿಲ್ಲ. ಬಹಳ ಮೆರೆಯುತ್ತಿರುವ ಅವನಿಗೆ ಪಾಠ ಕಲಿಸುವ ದಿನ ದೂರವಿಲ್ಲ. ಈ ಮುಖ್ಯಮಂತ್ರಿ, ಈ ಗೃಹ ಮಂತ್ರಿ ಎಷ್ಟು ದಿನ ಅವನಿಗೆ ರಕ್ಷಣೆ ಕೊಡಲು ಸಾಧ್ಯ? ಕೇರಳಕ್ಕೆ ಹೋಗಿ ಇವನು ಏನು ಸ್ಟಿಂಗ್ ಮಾಡಿದ? ಎಲ್ಲಾದರೂ ಸಿದ್ದರಾಮಯ್ಯ ಅವರ ದೇಹದ ಮೇಲೆ ಮಚ್ಚೆಗಳು, ಗುರುತುಗಳು ಇವೆಯಾ? ಅವರು ಎಷ್ಟು ಹೊತ್ತು ಇದ್ದರು ಎಂದು ಕೇಳುತ್ತಾನೆ. ಮಾಜಿ ಮುಖ್ಯಮಂತ್ರಿ ವಿರುದ್ಧ ಆ ಮಹಿಳೆಯನ್ನು ಎತ್ತಿ ಕಟ್ಟುವ ನೀಚ ಕೆಲಸ ಮಾಡುತ್ತಾನೆ. ಅಂತವನಿಗೆ ಈ ಸರಕಾರ ರಕ್ಷಣೆ ಕೊಡುತ್ತಿದೆ ಎಂದು ಕುಮಾರಸ್ವಾಮಿ ಅವರು ಹರಿಹಾಯ್ದರು.

ನಿನ್ನೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸ್ಟಿಂಗ್ ಮಾಡಿದ ಆರೋಪಿಗಳ ಮೇಲೆ ದೂರು ಕೊಡಲು ಹೋಗಿದ್ದೆವು. ಪಾಪ.. ಅಲ್ಲಿ ಹಾಜರಿದ್ದವರ ಮುಖಭಾವ ನೋಡಿದರೆ ಸರಿಯಾದ ತನಿಖೆ ನಡೆಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಅವರಿಂದ ಯಾವುದೇ ಭಾವನೆಗಳು ವ್ಯಕ್ತವಾಗಲಿಲ್ಲ ಹಾಗೂ ಪ್ರತಿಕ್ರಿಯೆ ಕೂಡ ಸಿಗಲಿಲ್ಲ. ಪಾಪ.. ಅವನ ಸ್ಟಿಂಗ್ ಖೆಡ್ಡಾದಲ್ಲಿ ಅದೆಷ್ಟು ಪೊಲೀಸರು ಬಿದ್ದಿದ್ದಾರೋ ಗೊತ್ತಿಲ್ಲ. ಅದಕ್ಕೆ ಏನೋ ಇಡೀ ಪೊಲೀಸ್ ಇಲಾಖೆ ಅವನೆಂದರೆ ನಡುಗುತ್ತಿದೆ. ನನಗಿರುವ ಮಾಹಿತಿ ಪ್ರಕಾರ ಸುಮಾರು 100 ರಿಂದ 150 ಜನ ಪೊಲೀಸ್ ಅಧಿಕಾರಿಗಳನ್ನು ಸ್ಟಿಂಗ್ ಮಾಡಿ ವಿಡಿಯೋ ಇಟ್ಟುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಪ್ರಿಯಾಂಕ ಖರ್ಗೆ ನೋಡುತ್ತಿರುವ ಗೃಹ ಇಲಾಖೆ ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಇದೊಂದು ಸಾಕ್ಷಿ ಸಾಕು ಎಂದು ಕೇಂದ್ರ ಸಚಿವರು ತಿರುಗೇಟು ಕೊಟ್ಟರು.

ಎಸ್ಟಿ ಸಮುದಾಯ ಹಿರಿಯ ನಾಯಕರಾದ ರಮೇಶ್ ಜಾರಕಿಹೋಳಿ ಅವರ ವಿರುದ್ಧ ಸಂಚು ಮಾಡಿದವರು ಯಾರು? ಸಿದ್ದರಾಮಯ್ಯ ಸಂಪುಟದಲ್ಲಿ ಸಹಕಾರ ಸಚಿವರಾಗಿದ್ದ ಕೆ ಎನ್ ರಾಜಣ್ಣ ಅವರ ವಿರುದ್ಧ ಟ್ರ್ಯಾಪ್ ಮಾಡಿಸಲು ದುಶ್ಪ್ರಯತ್ನ ನಡೆಸಿದ್ದು ಯಾರು? ಸ್ವತಃ ರಾಜಣ್ಣ ಅವರೇ ವಿಧಾನಸಭೆಯಲ್ಲಿ ಹೇಳಿದರಲ್ಲಪ್ಪ ಪ್ರಿಯಾಂಕ ಖರ್ಗೆ.. ಅವತ್ತೇನು ಸದನದಲ್ಲಿ ಕಣ್ಣು ಕಿವಿ ಎಲ್ಲವನ್ನು ಮುಚ್ಚಿಕೊಂಡು ಕುಳಿತಿದ್ದೀಯಾ? ಹೇಗೆ ಎಂದು ಕೇಂದ್ರ ಸಚಿವರು ಖಾರವಾಗಿ ಪ್ರಶ್ನಿಸಿದರು.

ಇಡೀ ವ್ಯವಸ್ಥೆಯನ್ನೇ ಬ್ಲಾಕ್ಮೇಲ್ ಮಾಡುವ ದುಷ್ಟನಿಗೆ ಡಿಕೆ ಶಿವಕುಮಾರ್ ಸರ್ಕಾರ ಶರಣಾಗಿದೆ. ಇಡೀ ಪೊಲೀಸ್ ಇಲಾಖೆಯನ್ನು ಅವನಿಗೆ ಒತ್ತೆ ಇಟ್ಟಿದ್ದಾರ ಎನ್ನುವ ಅನುಮಾನ ಬರುತ್ತಿದೆ. ಆ ವ್ಯಕ್ತಿಗೆ ನಟ್ಟು ಬೋಲ್ಟು ಸರಿ ಇಲ್ಲವಾ ಅಂಥ ಅನಿಸುತ್ತಿದೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೆ ನಾನು ಮೊದಲ ಬಾರಿ ಸಿಎಂ ಆಗಿದ್ದಾಗ ನನ್ನ ವಿರುದ್ಧ ₹150 ಕೋಟಿ ಗಣಿ ಲಂಚ ಆರೋಪ ಮಾಡಲಾಯಿತು. ಜನಾರ್ದನರೆಡ್ಡಿಯಿಂದ ನನ್ನ ಮೇಲೆ ಆರೋಪ ಮಾಡಿಸಿದರು. ಆಗಲು ನಾನು ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ನಾನು ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇನೆ. ನಮ್ಮ ಕುಟುಂಬದ ಮುಗಿಸಲು ಹೊರಟಿದ್ದಾರೆ. ಹಾಸನಾನಾಂಬೆ ದೇಗುಲ ಬಾಗಿಲು ಶೀಘ್ರವಾಗಿ ತೆರೆಯಲಿದೆ. ಇಲ್ಲಿ ಕುಳಿತು ಮಾತಾಡುತ್ತಿದ್ದೇನೆ. 2028ಕ್ಕೆ ಸಮ್ಮಿಶ್ತ ಸರ್ಕಾರ ಬರೋದು ಶತಸಿದ್ಧ. ಕುಮಾರಸ್ವಾಮಿಯ ಇನ್ನೊಂದು ಮುಖ ತೋರಿಸುತ್ತೇನೆ ಎಂದು ಅವರು ಗುಡುಗಿದರು.

ರಾಜ್ಯದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಸಿದ್ದರಾಮಯ್ಯ ಅವರು ಬಾಯಿ ಬಿಡುತ್ತಿಲ್ಲ. ಅವರು ಮೌನಕ್ಕೆ ಶರಣಾಗಿದ್ದಾರೆ. ಇದು ನನಗೆ ಅಚ್ಚರಿ ಉಂಟು ಮಾಡಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.

ಮಾಧ್ಯಮಗೋಷ್ಟಿಯಲ್ಲಿ ಶಾಸಕರಾದ ಎ.ಮಂಜು, ಸ್ವರೂಪ್ ಪ್ರಕಾಶ್ ಸೇರಿದಂತೆ ಜೆಡಿಎಸ್ ಪಕ್ಷದ ವಿವಿಧ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button