*2028ಕ್ಕೆ ಸಮ್ಮಿಶ್ರ ಸರ್ಕಾರ ನಿಶ್ಚಿತ*: *ಆಗ ಕುಮಾರಸ್ವಾಮಿಯ ಇನ್ನೊಂದು ಮುಖ ತೋರಿಸುತ್ತೇನೆ: ಪ್ರಿಯಾಂಕ್ ಖರ್ಗೆಗೆ ಹೆಚ್ ಡಿಕೆ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: 2028ಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರುವುದು ನಿಶ್ಚಿತ. ಆಗ ಕುಮಾರಸ್ವಾಮಿಯ ಇನ್ನೊಂದು ಮುಖ ತೋರಿಸುತ್ತೇನೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಹಾಸನದಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ನನ್ನನ್ನು ಉತ್ತರ ಕುಮಾರ ಅಂತ ಕರೆದಿದ್ದಾರೆ. ಆತನನ್ನು ಗೃಹ ಸಚಿವ ಎಂದು ಕರೆಯಲು ಆಗುತ್ತಾ? ಎಂದು ಕುಮಾರಸ್ವಾಮಿ ಗರಂ ಆದರು. ಗೃಹ ಸಚಿವರ ನಡೆ ನೋಡಿದ್ರೆ ಹುನ್ನಾರ ನಡೆದಿದೆ ಎನ್ನಿಸುತ್ತಿದೆ. ನನ್ನನ್ನು ಪ್ರಚೋದಿಸಲು ಸಿಎಂರಿಂದ ನಿರ್ದೇಶನ ತೆಗೆದುಕೊಂಡು ಪ್ರಿಯಾಂಕ್ ಖರ್ಗೆ ಹೀಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕೆಪಿಎಸ್ ಸಿ ಹಗರಣದ ಬಗ್ಗೆ ಎಲ್ಲ ಮಾಹಿತಿ ಇದ್ದರೂ ಎಲ್ಲಿದೆ ಅಂತಾರೆ. ಕೆಪಿಎಸ್ಸಿ ಹಗರಣದ ವಿಚಾರದಲ್ಲಿ ಅವರ ಬಳಿ ಉತ್ತರವೇ ಇಲ್ಲ ಎಂದರು. ಈಗ ಸ್ಟಿಂಗ್ ಆಪರೇಷನ್ ನಾನೇ ಮಾಡಿದ್ದೇನೆಂದು ಆ ವ್ಯಕ್ತಿ ಹೇಳಿದ್ದು, ತನಿಖೆ ನಡೆಸಲು ಇವರಿಗೆ ಇನ್ನೇನು ದಾಖಲೆ ಬೇಕು? ಈಗಲೂ ಆರೋಪಿಯನ್ನು ರಕ್ಷಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಇಲ್ಲದಿದ್ರೆ ಕಾಂಗ್ರೆಸ್ ಯಾವತ್ತೋ ಮುಗಿದು ಹೋಗ್ತಿತ್ತು. ಅವರ ಜೊತೆ ರಾಜಕೀಯವಾಗಿ ದೊಡ್ಡ ಹೋರಾಟ ಮಾಡಿದ್ದೇನೆ. ಆದರೆ ಈಗ ಸಿದ್ದರಾಮಯ್ಯರನ್ನು ಮುಗಿಸಲು ಏನೆಲ್ಲಾ ನಡೆದಿದೆ? ಯಾವಾಗಲೂ ಅಧಿಕಾರದಲ್ಲಿ ನೀವೇ ಇರ್ತಿರಾ, 1 ವರ್ಷ ಕಳೆಯಲಿ ಏನಾಗುತ್ತೆ ಎಂದು ಗೊತ್ತಾಗಲಿದೆ. ಸಮ್ಮಿಶ್ರ ಸರ್ಕಾರ ಬರುವುದು ಖಚಿತ. ಅಂದು ನಾನು ನನ್ನ ಇನ್ನೊಂದು ಮುಖ ತೋರಿಸುತ್ತೇನೆ ಎಂದರು.
ಸ್ಟಿಂಗ್ ಆಪರೇಷನ್ ನಾನೇ ಮಾಡಿದ್ದೇನೆಂದು ಆ ವ್ಯಕ್ತಿ ಹೇಳಿದ್ದು, ತನಿಖೆ ನಡೆಸಲು ಇವರಿಗೆ ಆಗುತ್ತಿಲ್ಲ. ಪಕ್ಷದ ಕಾರ್ಯಕರ್ತೆಯನ್ನು ಕೂರಿಸಿಕೊಂಡು ಸಿದ್ದರಾಮಯ್ಯ ಹೆಸರು ಹೇಳು ಅಂತಾರೆ. ಸಿದ್ದರಾಮಯ್ಯ ಎಷ್ಟೊತ್ತು ಇದ್ದರು, ಅವರ ದೇಹದ ಗುರುತು ಇದೆಯಾ ಎಂದು ಕಾರ್ಯಕರ್ತೆಯೊಬ್ಬರನ್ನು ಪ್ರಶ್ನೆ ಮಾಡುತ್ತಾರೆ. ಆ ವ್ಯಕ್ತಿಯನ್ನ ಟಚ್ ಮಾಡೋಕೆ ಆಗ್ತಿಲ್ಲ ಇವರಿಗೆ, ಯಾಕೆ ಟಚ್ ಮಾಡೋಕೆ ಆಗ್ತಿಲ್ಲ? ಸಾಕಷ್ಟು ಪೊಲೀಸ್ ಅಧಿಕಾರಿಗಳ ಸ್ಟಿಂಗ್ ಆಪರೇಷನ್ ಕೂಡ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಮತ್ತೊಂದು ಸ್ಫೋಟಕ ಆರೋಪ ಮಾಡಿದ್ದಾರೆ.
ಹಲವು ನಾಯಕರ ಸ್ಟಿಂಗ್ ಆಪರೇಷನ್ ಆಗಿದೆ ಎಂದು ರಾಜಣ್ಣ ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ಹಿರಿಯ ಶಾಸಕರ ಬಾಯಿಯನ್ನೇ ಮುಚ್ಚಿಸಿದ್ದಾರೆ. ಒಬ್ಬರು ಮಾಜಿ ಪ್ರಧಾನಮಂತ್ರಿಗಳ ಬಗ್ಗೆ ಏಕವಚನದಲ್ಲಿ ಮಾತನಾಡ್ತಾನೆ. ಈ ಕಾಂಗ್ರೆಸ್ ಸರ್ಕಾರ ಎಲ್ಲಿಗೆ ಹೋಗ್ತಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




