
ಪ್ರಗತಿವಾಹಿನಿ ಸುದ್ದಿ: ದಕ್ಷಿಣ ಯೆಮೆನ್‌ನ ಶಬ್ದಾ ಪ್ರಾಂತ್ಯದಲ್ಲಿರುವ ಅಲ್-ಅಲಮ್ ಸೇನಾ ತರಬೇತಿ ಶಿಬಿರದ ಮೇಲೆ ಇರಾನ್ ಬೆಂಬಲಿತ ಹೌತಿ ಬಂಡುಕೋರರು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 53 ಯೋಧರು ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.
ಸೇನಾ ಶಿಬಿರದಲ್ಲಿ ಹೊಸದಾಗಿ ನೇಮಕಗೊಂಡ ಭದ್ರತಾ ಪಡೆಗಳಿಗೆ ತರಬೇತಿ ನೀಡಲಾಗುತ್ತಿದ್ದ ವೇಳೆ ಈ ದಾಳಿ ನಡೆದಿದೆ. ತರಬೇತಿಯಲ್ಲಿ ನಿರತರಾಗಿದ್ದ ಯೋಧರನ್ನು ಗುರಿಯಾಗಿಸಿಕೊಂಡು ಬಂಡುಕೋರರು ಮೂರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದ್ದಾರೆ ಎನ್ನಲಾಗಿದೆ. ದಾಳಿಯ ತೀವ್ರತೆಗೆ ಶಿಬಿರದಲ್ಲಿ ಭಾರೀ ಹಾನಿ ಸಂಭವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
2022ರಲ್ಲಿ ಕದನ ವಿರಾಮ ಜಾರಿಯಾದ ಬಳಿಕ ಯೆಮೆನ್‌ನಲ್ಲಿ ಸೌದಿ ಅರೇಬಿಯಾ ಬೆಂಬಲಿತ ಸರ್ಕಾರಿ ಪಡೆಗಳು ಹಾಗೂ ಹೌತಿ ಬಂಡುಕೋರರ ನಡುವಿನ ಸಂಘರ್ಷ ಸ್ವಲ್ಪಮಟ್ಟಿಗೆ ತಗ್ಗಿತ್ತು. ಆದರೆ, ಇತ್ತೀಚಿನ ಪ್ರಾದೇಶಿಕ ಉದ್ವಿಗ್ನತೆಗಳ ಹಿನ್ನೆಲೆಯಲ್ಲಿ ಮತ್ತೆ ಹಿಂಸಾಚಾರ ತೀವ್ರಗೊಂಡಿದೆ.
ಕೆಂಪು ಸಮುದ್ರದ ತೀರದಲ್ಲಿರುವ ಆಯಕಟ್ಟಿನ ಪ್ರದೇಶಗಳ ಮೇಲೆ ಹೌತಿಗಳು ಹಿಡಿತ ಸಾಧಿಸಿದ ಬೆನ್ನಲ್ಲೇ ಸಂಘರ್ಷ ಮತ್ತಷ್ಟು ಉಲ್ಬಣಿಸಿದೆ. ಇದಕ್ಕೆ ಪ್ರತಿಯಾಗಿ ಸರ್ಕಾರಿ ಪಡೆಗಳು ಬಂಡುಕೋರರ ವಶದಲ್ಲಿರುವ ಪ್ರದೇಶಗಳನ್ನು ಮರಳಿ ಪಡೆಯಲು ‘ಡಾನ್ ಆಫ್ ಯೆಮೆನ್’ ಕಾರ್ಯಾಚರಣೆ ಆರಂಭಿಸಿವೆ ಎಂದು ವರದಿಯಾಗಿದೆ.
ಇದೇ ವೇಳೆ ಸೌದಿ ಅರೇಬಿಯಾದ ಪ್ರಮುಖ ಮೂಲಸೌಕರ್ಯಗಳನ್ನೂ ಗುರಿಯಾಗಿಸಿಕೊಂಡು ಹೌತಿಗಳು ದಾಳಿ ನಡೆಸುತ್ತಿರುವುದಾಗಿ ವರದಿಗಳಾಗಿವೆ. ಇದರಿಂದ ಪ್ರಾದೇಶಿಕ ಭದ್ರತೆಯ ಬಗ್ಗೆ ಆತಂಕ ಹೆಚ್ಚಾಗಿದೆ.
ತರಬೇತಿ ಪಡೆಯುತ್ತಿದ್ದ ಯೋಧರ ಮೇಲಿನ ದಾಳಿಯನ್ನು ಖಂಡಿಸಿರುವ ಯೆಮೆನ್ ಅಧ್ಯಕ್ಷೀಯ ಮಂಡಳಿಯ ಮುಖ್ಯಸ್ಥ ರಶಾದ್ ಅಲ್-ಅಲಿಮಿ, ಈ ಕೃತ್ಯಕ್ಕೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಒತ್ತಡ ಎದುರಾದಾಗ ಹೌತಿಗಳು ಇಂತಹ ದಾಳಿಗಳ ಮೂಲಕ ಭೀತಿ ಸೃಷ್ಟಿಸಲು ಮುಂದಾಗುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾಳಿಯ ಹೊಣೆ ಹೊತ್ತ ಹೌತಿ ಸಂಘಟನೆ
ಸೇನಾ ತರಬೇತಿ ಶಿಬಿರದ ಮೇಲಿನ ಕ್ಷಿಪಣಿ ದಾಳಿಯ ಹೊಣೆಯನ್ನು ಹೌತಿ ಸಂಘಟನೆ ಹೊತ್ತುಕೊಂಡಿದೆ. ಸೌದಿ ಅರೇಬಿಯಾ ಬೆಂಬಲಿತ ಪಡೆಗಳ ನೆಲೆಗಳು ತಮ್ಮ ದಾಳಿಯ ಗುರಿಗಳಾಗಿದ್ದು, ಮುಂದೆಯೂ ಇಂತಹ ದಾಳಿಗಳನ್ನು ಮುಂದುವರಿಸುವುದಾಗಿ ಸಂಘಟನೆಯ ವಕ್ತಾರ ಯಾಹ್ಯಾ ಸಾರೀ ಹೇಳಿದ್ದಾನೆ ಎನ್ನಲಾಗಿದೆ.
ಇನ್ನೊಂದೆಡೆ, ಯೆಮೆನ್ ಸರ್ಕಾರಿ ಪಡೆಗಳು ತೈಜ್ ಪ್ರಾಂತ್ಯದ ದಕ್ಷಿಣ ಭಾಗದಲ್ಲಿರುವ ಹೌತಿ ಬಂಡುಕೋರರ ಅಡಗುದಾಣಗಳು ಹಾಗೂ ಶಸ್ತ್ರಾಸ್ತ್ರ ಸಾಗಣೆ ವಾಹನಗಳನ್ನು ಗುರಿಯಾಗಿಸಿಕೊಂಡು ಪ್ರತಿದಾಳಿ ನಡೆಸುತ್ತಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



