*ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಕರೆ ನೀಡದಿರಲು ಒಪ್ಪಿಗೆ*: *7 ದಿನಗಳ ಬಳಿಕ ತಿಹಾರ್ ಜೈಲಿನಿಂದ CJP ನಾಯಕರ ಬಿಡುಗಡೆ*

ಪ್ರಗತಿವಾಹಿನಿ ಸುದ್ದಿ: ದೆಹಲಿಯ ಕಾಕ್ರೋಚ್ ಜನತಾ ಪಕ್ಷದ (CJP) ಪ್ರಮುಖ ನಾಯಕರಾದ ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಏಳು ದಿನಗಳ ನ್ಯಾಯಾಂಗ ಬಂಧನದ ಬಳಿಕ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಜಂತರ್ ಮಂತರ್‌ನಲ್ಲಿ ಅಧಿಕೃತ ಅನುಮತಿ ದೊರೆಯುವವರೆಗೆ ಪ್ರತಿಭಟನೆಗೆ ಕರೆ ನೀಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಲಿಖಿತ ಮುಚ್ಚಳಿಕೆ ಸಲ್ಲಿಸಿದ್ದಾರೆ.
ತಲಾ ₹50 ಸಾವಿರದ ವೈಯಕ್ತಿಕ ಮತ್ತು ಶ್ಯೂರಿಟಿ ಬಾಂಡ್‌ಗಳನ್ನು ಸಲ್ಲಿಸಿದ ಬಳಿಕ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಬಿಡುಗಡೆಗೆ ಆದೇಶಿಸಿದ್ದಾರೆ. ದೆಹಲಿ ಪೊಲೀಸರು ಇನ್ನೂ ಮೂರು ದಿನಗಳ ಕಾಲ ಕಸ್ಟಡಿ ವಿಸ್ತರಣೆಗೆ ಮನವಿ ಮಾಡಿದ್ದರೂ, ನ್ಯಾಯಾಲಯ ಅದನ್ನು ತಿರಸ್ಕರಿಸಿ ಷರತ್ತುಬದ್ಧ ಬಿಡುಗಡೆಗೆ ಅನುಮತಿ ನೀಡಿದೆ.
ಮುಚ್ಚಳಿಕೆಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವ ಯಾವುದೇ ಚಟುವಟಿಕೆಯಲ್ಲಿ ತೊಡಗುವುದಿಲ್ಲ ಎಂದು ಇಬ್ಬರೂ ಭರವಸೆ ನೀಡಿದ್ದಾರೆ. ಜಂತರ್ ಮಂತರ್ ಅನ್ನು ಅಧಿಕೃತ ಪ್ರತಿಭಟನಾ ಸ್ಥಳವೆಂದು ಮರುಘೋಷಿಸುವವರೆಗೆ ಅಲ್ಲಿ ಪ್ರತಿಭಟನೆಗೆ ಕರೆ ನೀಡುವುದಿಲ್ಲ. ಮುಂದಿನ ದಿನಗಳಲ್ಲಿ ನಡೆಸುವ ಹೋರಾಟಗಳನ್ನು ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನೊಳಗೆ ನಡೆಸಲಾಗುವುದು ಎಂದೂ ಸ್ಪಷ್ಟಪಡಿಸಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಅಕ್ಟೋಬರ್ 10ರಂದುಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪಕ್ಷ ಹೋರಾಟ ನಡೆಸಿತ್ತು. ಮೊದಲ ಪ್ರತಿಭಟನೆಯ ಬಳಿಕ ಬಿಡುಗಡೆಗೊಂಡಿದ್ದ ರಂಕಾ ಮತ್ತು ದಾಸ್, ಅಕ್ಟೋಬರ್ 13ರಂದು ಜಂತರ್ ಮಂತರ್‌ನ ಮುಚ್ಚಿದ ಗೇಟ್ ಏರಿ ರಾಷ್ಟ್ರಧ್ವಜ ಹಾರಿಸಲು ಯತ್ನಿಸಿದ ಆರೋಪದ ಮೇಲೆ ಮತ್ತೆ ಬಂಧನಕ್ಕೊಳಗಾಗಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನಲ್ಲಿ ಬಂಧನದ ಅವಧಿ ವಿಸ್ತರಣೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ವೇಳೆ ಬ್ಯಾರಿಕೇಡ್‌ಗಳನ್ನು ದಾಟಿ ನಿಯಮ ಉಲ್ಲಂಘಿಸಿದರೆ ಸಂಭವಿಸಬಹುದಾದ ಅನಾಹುತಗಳಿಗೆ ಯಾರು ಹೊಣೆ ಎಂಬ ಪ್ರಶ್ನೆಯನ್ನು ನ್ಯಾಯಾಲಯ ಎತ್ತಿತ್ತು. ಬಳಿಕ ಅರ್ಜಿಯನ್ನು ಹಿಂಪಡೆದು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಲಿಖಿತ ಮುಚ್ಚಳಿಕೆ ಸಲ್ಲಿಸಲಾಯಿತು.
ಬಿಡುಗಡೆಯ ಬಳಿಕ ಸೌರವ್ ದಾಸ್, ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಮತ್ತು ಪಕ್ಷದ ಕಾನೂನು ವಿಭಾಗದ ಮುಖ್ಯಸ್ಥೆ ರತ್ನಾ ಸಿಂಗ್ ಕೂಡ ಬಿಡುಗಡೆಯನ್ನು ಸ್ವಾಗತಿಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಅಕ್ರಮಗಳ ಆರೋಪದ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 23ರಂದು ನಡೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




