*ಪ್ರತಿ ಜಿಲ್ಲೆಯಿಂದ ನಾಲ್ಕು ರೈತರಿಗೆ ಮಾತ್ರ ಅವಕಾಶ!*

ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಸಂಬಂಧಿಸಿದ ಸಭೆ -ಪ್ರತಿ ಜಿಲ್ಲೆಯಿಂದ ನಾಲ್ಕು ರೈತರಿಗೆ ಮಾತ್ರ ಅವಕಾಶ; ರೈತರು ಸಹಕರಿಸಲು ಜಿಲ್ಲಾಡಳಿತದ ಮನವಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ದಿನಾಂಕ ೨೬.೧೦.೨೦೨೬ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸಭೆ ಜರುಗಲಿದೆ.
ಸಭೆಗೆ ಬೆಳಗಾವಿ ವಿಭಾಗ ಸೇರಿದಂತೆ ಸಂಬಂಧಪಟ್ಟ ೧೫ ಜಿಲ್ಲೆಗಳಿಂದ ರೈತರು ಆಗಮಿಸುವ ಹಿನ್ನೆಲೆಯಲ್ಲಿ, ಸಭೆಯ ವ್ಯವಸ್ಥಿತ ನಿರ್ವಹಣೆ, ಭದ್ರತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ, ಆಯುಕ್ತರು, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು, ಬೆಂಗಳೂರು ರವರ ಕಚೇರಿಯ ಸೂಚನೆಯಂತೆ ೧೫ ಜಿಲ್ಲೆಯಿಂದ ನಾಲ್ಕು ರೈತ ಪ್ರತಿನಿಧಿಗಳಿಗೆ ಮಾತ್ರ ಸಭೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಸಂಬಂಧಪಟ್ಟ ಎಲ್ಲಾ ಜಿಲ್ಲೆಗಳ ರೈತರು ಹಾಗೂ ರೈತ ಸಂಘಟನೆಗಳು ಈ ನಿರ್ಧಾರವನ್ನು ಗಮನದಲ್ಲಿಟ್ಟುಕೊಂಡು, ತಮ್ಮ ಜಿಲ್ಲೆಯಿಂದ ನಾಲ್ಕು ರೈತ ಪ್ರತಿನಿಧಿಗಳ ಮೂಲಕ ತಮ್ಮ ಸಮಸ್ಯೆಗಳು, ಬೇಡಿಕೆಗಳು ಹಾಗೂ ಅಹವಾಲುಗಳನ್ನು ಸಭೆಯಲ್ಲಿ ಮಂಡಿಸಲು ಸಹಕರಿಸಬೇಕು.
ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸುವುದರಿಂದ ಪ್ರವೇಶ ವ್ಯವಸ್ಥೆ, ಭದ್ರತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗದಂತೆ, ನಿಗದಿಪಡಿಸಲಾದ ರೈತ ಪ್ರತಿನಿಧಿಗಳು ಮಾತ್ರ ಸಭೆಗೆ ಆಗಮಿಸಬೇಕು. ಉಳಿದ ರೈತರು ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಹಕರಿಸಿ, ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಜಿಲ್ಲಾಡಳಿತವು ಮನವಿ ಮಾಡುತ್ತದೆ.
ರೈತರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಕ್ರೋಢೀಕರಿಸಿ, ಸಭೆಯಲ್ಲಿ ಸಮರ್ಪಕವಾಗಿ ಮಂಡಿಸಲು ಅಗತ್ಯ ಸಮನ್ವಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದ್ದರಿಂದ, ಎಲ್ಲಾ ರೈತರು ಹಾಗೂ ರೈತ ಸಂಘಟನೆಗಳು ಜಿಲ್ಲಾಡಳಿತದೊಂದಿಗೆ ಸಹಕರಿಸಿ, ಸಭೆಯು ಸುಗಮವಾಗಿ ಮತ್ತು ಶಾಂತಿಯುತವಾಗಿ ನಡೆಯಲು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



