Karnataka NewsLatest

*ಬೆಟ್ಟದಿಂದ ಉರುಳಿಬಿದ್ದು ಆನೆಮರಿ ಸಾವು*: *ತಾಯಿ ಆನೆಯ ಗೋಳಾಟದ ದೃಶ್ಯ ವೈರಲ್*

ಪ್ರಗತಿವಾಹಿನಿ ಸುದ್ದಿ: ಬೆಟ್ಟದ ಇಳಿಜಾರಿನಿಂದ ಉರುಳಿಬಿದ್ದು ಆನೆಮರಿಯೊಂದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ. ಮರಿ ನೋವಿನಿಂದ ನರಳುತ್ತಿದ್ದಾಗ ರಕ್ಷಿಸಲು ಧಾವಿಸಿದ ತಾಯಿ ಆನೆಯ ಪ್ರಯತ್ನ ವಿಫಲವಾಗಿದೆ. ಬಳಿಕ ಮರಿ ಮೃತಪಟ್ಟಿರುವುದನ್ನು ಕಂಡು ಆನೆಗಳ ಹಿಂಡು ಜೋರಾಗಿ ಘೀಳಿಟ್ಟಿವೆ. ಈ ಹೃದಯವಿದ್ರಾವಕ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕೇರಳದ ವಯನಾಡು ಜಿಲ್ಲೆಯ ಮಾನಂತವಾಡಿ ಸಮೀಪದ ಕಾಟ್ಟಿಕುಳಂನ ಮುತ್ತುಮಾರಿನ ಅರಣ್ಯದಂಚಿನ ತೋಟವೊಂದರಲ್ಲಿ ಘಟನೆ ನಡೆದಿದೆ. ತೋಟದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಆನೆಮರಿ ಬೆಟ್ಟದ ಇಳಿಜಾರಿನಲ್ಲಿ ಉರುಳಿಬೀಳುವ ದೃಶ್ಯ ಸೆರೆಯಾಗಿದೆ. ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು ದೃಶ್ಯ ಕಂಡು ಹಲವರು ಕಣ್ಣೀರು ಹಾಕಿದ್ದಾರೆ.

ದೃಶ್ಯಗಳಲ್ಲಿ ಆನೆಮರಿ ನೋವಿನಿಂದ ಕೂಗುತ್ತಿರುವುದು ಕಂಡುಬಂದಿದೆ. ಮರಿ ಸಂಕಷ್ಟದಲ್ಲಿರುವುದನ್ನು ಗಮನಿಸಿದ ತಾಯಿ ಆನೆ ತಕ್ಷಣವೇ ಅದರ ಬಳಿ ಧಾವಿಸಿದೆ. ಆದರೆ, ಮರಿಯನ್ನು ರಕ್ಷಿಸಲು ಮಾಡಿದ ಪ್ರಯತ್ನ ಫಲ ನೀಡಿಲ್ಲ. ಈ ವೇಳೆ ಆನೆಗಳ ಹಿಂಡು ಜೋರಾಗಿ ಘೀಳಿಡುವ ಶಬ್ದವೂ ಸಿಸಿಟಿವಿ ದೃಶ್ಯಾವಳಿಯಲ್ಲಿ ಕೇಳಿಬಂದಿದೆ.

ಘಟನೆ ಕುರಿತು ಮಾಹಿತಿ ಪಡೆದ ಉತ್ತರ ವಯನಾಡು ಅರಣ್ಯ ವಿಭಾಗದ ಕ್ಷಿಪ್ರ ಕಾರ್ಯಾಚರಣೆ ತಂಡ ಸ್ಥಳಕ್ಕೆ ಧಾವಿಸಿತ್ತು. ಆದರೆ, ಆನೆಗಳ ಹಿಂಡು ಮರಿಯ ಸುತ್ತಲೂ ಸೇರಿಕೊಂಡಿದ್ದರಿಂದ ಅರಣ್ಯ ಸಿಬ್ಬಂದಿಗೆ ಹತ್ತಿರ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ಕಾರ್ಯಾಚರಣೆ ತಂಡ ಮರಿಯ ಸ್ಥಿತಿಯನ್ನು ಪರಿಶೀಲಿಸಲು ತಕ್ಷಣವೇ ಮುಂದುವರಿಯಲು ಸಾಧ್ಯವಾಗಿರಲಿಲ್ಲ.

ಸೋಮವಾರ ಬೆಳಗ್ಗೆ ಬೇಗೂರು ಅರಣ್ಯ ವಲಯದ ಸಿಬ್ಬಂದಿ ಮತ್ತು ಕ್ಷಿಪ್ರ ಕಾರ್ಯಾಚರಣೆ ತಂಡದ ಜಂಟಿ ತಂಡ ಮತ್ತೆ ಸ್ಥಳಕ್ಕೆ ತೆರಳಿತು. ಬಳಿಕ ಆನೆಗಳ ಹಿಂಡನ್ನು ಕಾಡಿನತ್ತ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಯಿತು. ನಂತರ ಆನೆಮರಿಯನ್ನು ಪರಿಶೀಲಿಸಿದಾಗ ಅದು ಮೃತಪಟ್ಟಿರುವುದು ದೃಢಪಟ್ಟಿತು.

ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಆನೆಮರಿಯ ಮೃತದೇಹವನ್ನು ಕಾಡಿನ ಒಳಭಾಗಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಿದರು. ತಾಯಿ ಆನೆ ಮರಿಯನ್ನು ರಕ್ಷಿಸಲು ಪ್ರಯತ್ನಿಸಿದರೂ ಬದುಕುಳಿಸಲು ಸಾಧ್ಯವಾಗದ ಘಟನೆ ಪ್ರಾಣಿ ಪ್ರಿಯರಲ್ಲಿ ನೋವು ಮೂಡಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button