CrimeKannada NewsLatest

*ವಿಡಿಯೋ ಮಾಡಿಟ್ಟು, ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ*

ಪ್ರಗತಿವಾಹಿನಿ ಸುದ್ದಿ: ವಿದ್ಯಾರ್ಥಿಯೊಬ್ಬ ತನ್ನ ತಂದೆಯ ಲೈಸೆನ್ಸ್ ಹೊಂದಿದ್ದ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ನಡೆದಿದೆ.

ಘಟನೆ ನಡೆಯುವ ಮುನ್ನ ವಿದ್ಯಾರ್ಥಿ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದ ಭಾವುಕ ವೀಡಿಯೊ ಸಂದೇಶವೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತ ವಿದ್ಯಾರ್ಥಿ ನಿವೃತ್ತ ಪಿಡಿಒ ಪುತ್ರನಾಗಿದ್ದಾನೆ.

19 ವರ್ಷದ ಬಿಎ ಪದವಿ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ಲೈಸೆನ್ಸ್ ಹೊಂದಿದ್ದ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಲವ ಪಟೇಲ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.

ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಗುರ್ಸರಾಯ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯುವಕ ದುಡುಕಿನ ನಿರ್ಧಾರ ಮಾಡಿದ್ದಾನೆ.

ಬೆಳಿಗ್ಗೆ ತಂದೆ ಮತ್ತು ಕುಟುಂಬಸ್ಥರು ಹೊಲದ ಕೆಲಸಕ್ಕೆ ತೆರಳಿದ್ದಾಗ ಲವ ಮನೆಯಲ್ಲಿ ಒಬ್ಬನೇ ಇದ್ದನು. ಸುಮಾರು 10 ಗಂಟೆಯ ಸುಮಾರಿಗೆ ಮನೆಯ ಒಳಗಿನಿಂದ ಭಾರಿ ಗುಂಡಿನ ಸದ್ದು ಕೇಳಿಬಂದಿದೆ. ಸಂಶಯಗೊಂಡ ನೆರೆಹೊರೆಯವರು ಓಡಿ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ನೆರೆಹೊರೆಯವರು ತಕ್ಷಣವೇ ಆತನ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಂದೆ ಧಾವಿಸಿ ಬಂದು ಬಾಗಿಲು ತೆಗೆದು ನೋಡಿದಾಗ ಯುವಕ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಪಕ್ಕದಲ್ಲೇ ಲೈಸೆನ್ಸ್ಡ್ ಪಿಸ್ತೂಲ್ ಬಿದ್ದಿತ್ತು. ತಕ್ಷಣ ಆತನನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರೂ, ವೈದ್ಯರು ಆತ ಮೃತಪಟ್ಟಿರುವುದಾಗಿ ದೃಢಪಡಿಸಿದರು.

ಸಾವಿಗೂ ಮುನ್ನ ವಿದ್ಯಾರ್ಥಿ ಮೊಬೈಲ್ ನಲ್ಲಿ ವೀಡಿಯೊ ಒಂದನ್ನು ರೆಕಾರ್ಡ್ ಮಾಡಿದ್ದು, “ಅಪ್ಪಾ, ಹಣವನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ, ನಾನು ಅಮ್ಮನ ಬಳಿಗೆ ಹೋಗುತ್ತಿದ್ದೇನೆ” ಎಂದು ಹೇಳಿದ್ದಾನೆ. ತನ್ನ ನಿರ್ಧಾರಕ್ಕೆ ಯಾರೂ ಕಾರಣರಲ್ಲ ಎಂದು ಆತ ಸ್ಪಷ್ಟಪಡಿಸಿದ್ದಾನೆ.

ಯುವಕನ ತಾಯಿ 2009ರಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತಾಯಿಯ ಸಾವಿನ ನಂತರ ಯುವಕ ತೀವ್ರ ಮಾನಸಿಕವಾಗಿ ಕುಗ್ಗಿದ್ದನು ಮತ್ತು ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡ ಹಾಗೂ ನಿದ್ರಾಹೀನತೆಯಿಂದ ಬಳಲುತ್ತಿದ್ದನು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆತನ ತಾಯಿ ಮೃತಪಟ್ಟ ಬಳಿಕ ಅವನ ತಂದೆ 2ನೇ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button