Latest

ಮರುಕಳಿಸಲಿದೆಯೇ ಬೆಳಗಾವಿ ವಿಮಾನ ನಿಲ್ದಾಣದ ವೈಭವ? -ಸೋಮವಾರ ರೂಟ್ ಗಳ ಘೋಷಣೆ ಸಾಧ್ಯತೆ

ಪ್ರಗತಿವಾಹಿನಿ ವಿಶೇಷ

      ಎಂ.ಕೆ.ಹೆಗಡೆ,  ಬೆಳಗಾವಿ

ಬೆಳಗಾವಿ ವಿಮಾನ ನಿಲ್ದಾಣ ಮತ್ತೆ ತನ್ನ ಹಳೆಯ ವೈಭವವನ್ನು ಮರಳಿ ಪಡೆಯಲಿದೆಯೇ?

ಬೆಳಗಾವಿಯಿಂದ ನಿರಂತರ ವಿಮಾನ ಸಂಚಾರ ಪುನಃ ಆರಂಭವಾಗಲಿದೆಯೇ?

ಸೋಮವಾರ ಸಂಜೆಯ ಹೊತ್ತಿಗೆ ಈ ದಿಸೆಯಲ್ಲಿ ಬೆಳಗಾವಿಗೆ ಶುಭ ಸುದ್ದಿ ಸಿಗುವ ನಿರೀಕ್ಷೆ ಇದೆ. 

ಬೆಳಗಾವಿ ವಿಮಾನ ನಿಲ್ದಾಣದಿಂದ ಯಾವ ಯಾವ ಸಂಸ್ಥೆಗಳ ವಿಮಾನ ಹಾರಾಡಲಿದೆ? ಯಾವ ಯಾವ ನಗರಗಳು ಬೆಳಗಾವಿಯಿಂದ ಸಂಪರ್ಕಪಡೆಯಲಿವೆ ಎನ್ನುವ ಅಂಶಗಳು ಸೋಮವಾರ ಬಹಿರಂಗವಾಗುವ ಸಾಧ್ಯತೆ ಇದೆ. 

ಈಗಾಗಲೆ ತಾಂತ್ರಿಕ ಬಿಡ್ ಪೂರೈಸಿರುವ ಕೇಂದ್ರ ವಿಮಾನಯಾನ ಸಚಿವಾಲಯ, ಬಿಡ್ ನಲ್ಲಿ ಪಾಲ್ಗೊಂಡ ವಿಮಾನ ಯಾನ ಸಂಸ್ಥೆಗಳಿಗೆ ವಿಮಾನ ಸಂಚಾರ ನಡೆಸಲಿರುವ ಮತ್ತು ಬೆಳಗಾವಿಯಿಂದ ಹಾರಾಟ ನಡೆಸಬೇಕಾದ ರೂಟ್ ಗಳ ಹಂಚಿಕೆಯನ್ನು ಸೋಮವಾರ ಮಾಡಲಿದೆ. ಉಡಾನ್ 3ರಲ್ಲಿ ಅವಕಾಶ ಪಡೆದಿರುವ ವಿಮಾನ ನಿಲ್ದಾಣಗಳ ರೂಟ್ ಮತ್ತು ಪಾಲ್ಗೊಳ್ಳುವ ವಿಮಾನ ಯಾನ ಸಂಸ್ಥೆಗಳ ಹೆಸರನ್ನು ಸೋಮವಾರ ಘೋಷಿಸಲಾಗುತ್ತಿದೆ. 

ಒಟ್ಟೂ 122 ರೂಟ್ ಗಳಿಗೆ ಬಿಡ್ ನಡೆದಿದ್ದು, ಅವುಗಳಲ್ಲಿ ಬೆಳಗಾವಿಯಿಂದ ಹಾರಾಟ ನಡೆಸಲು 22 ರೂಟ್ ಗಳಿಗೆ ಬಿಡ್ ನಡೆದಿದೆ. ಪ್ರಾಥಮಿಕವಾಗಿ 17 ರೂಟ್ ಗಳನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಅಧಿಕೃತವಾಗಿ ಘೋಷಣೆಯಾಗಿಲ್ಲ. ಯಾವ ಯಾವ ಸಂಸ್ಥೆಗಳು ಭಾಗಿಯಾಗಿವೆ ಎನ್ನುವುದೂ ಬಹಿರಂಗವಾಗಿಲ್ಲ.

ಕೇಂದ್ರ ವಿಮಾನಯಾನ ಸಚಿವಾಲಯದ ತಾಂತ್ರಿಕ ಸಿಬ್ಬಂದಿ ಎಲ್ಲ ಅಂಶಗಳನ್ನು ಪರಿಗಣಿಸಿ ರೂಟ್ ಮತ್ತು ವಿಮಾನಯಾನ ಸಂಸ್ಥೆಗಳಿಗೆ ಅನುಮತಿ ನೀಡಲಿದ್ದಾರೆ. ಹತ್ತಿರದ ವಿಮಾನ ನಿಲ್ದಾಣಗಳಿಂದ ಈಗ ಇರುವ ವಿಮಾನ ಸಂಪರ್ಕ, ಬೆಳಗಾವಿಯಿಂದ ಈ ಹಿಂದೆ ಸಂಚರಿಸುತ್ತಿದ್ದ ರೂಟ್ ಮತ್ತು ಅವುಗಳ ಸಂಚಾರ ದಟ್ಟಣ, ಸಂಪರ್ಕ ಕಲ್ಪಿಸಬೇಕಾದ ವಿಮಾನ ನಿಲ್ದಾಣಗಳಲ್ಲಿ ಸ್ಲಾಟ್ ಲಭ್ಯತೆ ಮೊದಲಾದವುಗಳನ್ನು ಪರಿಗಣಿಸಲಾಗುತ್ತದೆ. 

ಉಡಾನ್ 2ರಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಹೆಸರು ಘೋಷಣೆಯಾಗುತ್ತಿದ್ದಂತೆ ಬೆಳಗಾವಿಯಿಂದ ಸಂಚರಿಸುತ್ತಿದ್ದ ಎಲ್ಲ ವಿಮಾನಗಳು ಹುಬ್ಬಳ್ಳಿಗೆ ಸ್ಥಳಾಂತರಗೊಂಡಿದ್ದವು. ತಕ್ಷಣ ಎಚ್ಚೆತ್ತ ಬೆಳಗಾವಿ ನಾಗರಿಕರು ಲೋಕಸಭಾ ಸದಸ್ಯ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ನೇತೃತ್ವದಲ್ಲಿ ತೀವ್ರ ಹೋರಾಟ ನಡೆಸಿದ್ದರು. ಶಾಸಕ ಅಭಯ ಪಾಟೀಲ ಕೂಡ ನವದೆಹಲಿಗೆ ನಿಯೋಗದೊಂದಿಗೆ ತೆರಳಿ ಪ್ರಯತ್ನ ನಡೆಸಿದ್ದರು. ಪರಿಣಾಮವಾಗಿ ಬೆಳಗಾವಿ 3ನೇ ಹಂತದ ಉಡಾನ್ ನಲ್ಲಿ ಸ್ಥಾನ ಪಡೆಯಿತು. ಈಗ ಈ ಸಂಬಂಧ ಬಿಡ್ ಪ್ರಕ್ರಿಯೆ ಕೂಡ ಮುಕ್ತಾಯವಾಗಿದೆ.

ಇದರಿಂದಾಗಿ ಬೆಳಗಾವಿ ವಿಮಾನ ನಿಲ್ದಾಣ ಮತ್ತೆ ನಿರಂತರ ವಿಮಾನ ಹಾರಾಟದಿಂದ ಬ್ಯುಸಿಯಾಗುವ ನಿರೀಕ್ಷೆ ಮೂಡಿದೆ. ತನ್ಮೂಲಕ ಬೆಳಗಾವಿ ರಾಷ್ಟ್ರದ ಎಲ್ಲ ಮೂಲೆಗಳಿಂದ ಸಂಪರ್ಕ ಪಡೆದು, ಇಲ್ಲಿಯ ವ್ಯಾಪಾರ, ವ್ಯವಹಾರ ವೃದ್ಧಿಸಿಕೊಳ್ಳುವ ಸಾಧ್ಯತೆ ಇದೆ.  ಕೇಂದ್ರ ವಿಮಾನಯಾನ ಸಚಿವಾಲಯದ ಉನ್ನತ ಮೂಲಗಳಿಂದ ಭಾನುವಾರ ಸಂಜೆ ಬಂದಿರುವ ಮಾಹಿತಿ ಪ್ರಕಾರ ಬೆಳಗಾವಿಗೆ ಉತ್ತಮ ವಿಮಾನಯಾನ ಸಂಸ್ಥೆಗಳು ಮತ್ತು ಉತ್ತಮ ರೂಟ್ ಗಳು ದೊರಕಿವೆ. ಸೋಮವಾರ ಸಂಜೆಯೊಳಗೆ, ತಪ್ಪಿದರೆ ಮಂಗಳವಾರ ಅಂತಿಮ ಘೋಷಣೆಯಾಗಲಿದೆ.

ಬೆಳಗಾವಿಯಿಂದ 36 ರೂಟ್ ಗಳಿಗೆ ವಿಮಾನ ಸಂಸ್ಥೆಗಳಿಂದ ಬೇಡಿಕೆ ಬಂದಿತ್ತು. ಮೊದಲ ಹಂತದಲ್ಲಿ 17 ರೂಟ್ ಅರ್ಹತೆ ಪಡೆದಿವೆ. ಅಂತಿಮವಾಗಿ ನವದೆಹಲಿ, ಹೈದರಾಬಾದ್, ಚೆನ್ನೈ, ಸೂರತ್ ಸೇರಿದಂತೆ ಉತ್ತಮ ರೂಟ್ ಗಳು ಘೋಷಣೆಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಸಂಸದ ಸುರೇಶ ಅಂಗಡಿ.

ಬೆಳಗಾವಿಯಿಂದ ಮುಂಬೈ, ಅಹಮದಾಬಾದ್, ಚೆನ್ನೈ, ಕೊಚ್ಚಿನ್, ಸೇರಿದಂತೆ ಕನಿಷ್ಟ 14 ರೂಟ್ ಗಳಿಗೆ ಸಂಪರ್ಕ ಸಿಗುವ ನಿರೀಕ್ಷೆ ಇದೆ ಎನ್ನುತ್ತಾರೆ ಪ್ರಭಾಕರ ಕೋರೆ.

ಬೆಳಗಾವಿಯಿಂದ ಸಂಪರ್ಕ ಕಲ್ಪಿಸುವ ಎಲ್ಲ ರೂಟ್ ಗಳಿಗೆ ಸಂಚಾರ ದಟ್ಟಣೆ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಇಲ್ಲಿಯ ನಾಗರಿಕರದ್ದಾಗಿದೆ. ಹಾಗಾದಲ್ಲಿ ಮಾತ್ರ ಮಂಜೂರಾಗುವ ಎಲ್ಲ ವಿಮಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಸೇವ್ ಐಎಕ್ಸಜಿ ಹೋರಾಟದ ಮುಂಚೂಣಿಯಲ್ಲಿದ್ದ ಉದ್ಯಮಿ ಚೈತನ್ಯ ಕುಲಕರ್ಣಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button