Belagavi NewsBelgaum NewsKannada NewsKarnataka NewsPolitics

*ತ್ಯಾಜ್ಯ ವಿಲೇವಾರಿ ಹಾಗೂ ಜಲ ಶುದ್ಧೀಕರಣ ಘಟಕಕ್ಕೆ ಉಪಲೋಕಾಯುಕ್ತ ಬಿ. ವೀರಪ್ಪ ದಿಢೀರ್ ಭೇಟಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಜಲ ಶುದ್ಧೀಕರಣ ಘಟಕ ಹಾಗೂ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಶುಕ್ರವಾರ (ಅ.30) ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಘಟಕಗಳಿಂದ ಸುತ್ತಮುತ್ತಲಿನ ಗ್ರಾಮಗಳ ಜನರ ಆರೋಗ್ಯ ಮತ್ತು ಪರಿಸರದ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ತ್ಯಾಜ್ಯ ವಿಲೇವಾರಿ ಘಟಕದ ಸುತ್ತಮುತ್ತ ಬೆಳೆಯಲಾಗುತ್ತಿರುವ ಬೆಳೆಗಳು ಹಾಗೂ ತರಕಾರಿಗಳ ಸ್ಥಿತಿಗತಿ, ವಾಯುಮಾಲಿನ್ಯದ ವರದಿ, ಹಾಲಿನ ಗುಣಮಟ್ಟ, ಮಕ್ಕಳ ಆರೋಗ್ಯ ತಪಾಸಣಾ ವರದಿ, ನಾಯಿ ಕಡಿತ ಪ್ರಕರಣಗಳು ಹಾಗೂ ಕುಡಿಯುವ ನೀರಿನ ಪರೀಕ್ಷಾ ವರದಿಯನ್ನು ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಅಲ್ಲದೆ, ತ್ಯಾಜ್ಯ ವಿಲೇವಾರಿ ಘಟಕದ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯಿತಿ ಪ್ರದೇಶಗಳಲ್ಲಿ ನಾಯಿ ಕಡಿತಕ್ಕೆ ಒಳಗಾದವರ ಸಂಪೂರ್ಣ ಮಾಹಿತಿಯನ್ನು ಒದಗಿಸುವಂತೆ ನಿರ್ದೇಶನ ನೀಡಿದರು. ಬೀದಿನಾಯಿಗಳನ್ನು ಹಿಡಿದು ಸೂಕ್ತ ಸ್ಥಳಗಳಿಗೆ ಸ್ಥಳಾಂತರಿಸಲು ಹಾಗೂ ಈ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ವೇಳೆ ತ್ಯಾಜ್ಯ ವಿಲೇವಾರಿ ಘಟಕದ ಸುತ್ತಮುತ್ತಲಿನ ಗ್ರಾಮಸ್ಥರು ಘಟಕದಿಂದ ತೊಂದರೆಯಾಗುತ್ತಿದೆ ಎಂದು ಆರೋಪಿಸಿ, ಅದನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಉಪಲೋಕಾಯುಕ್ತರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಪನಿಬಂಧಕ ಅರವಿಂದ, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ ದೇಸಾಯಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್. ಶಿವಕುಮಾರ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button