*ರೈತರ ಜಮೀನುಗಳಲ್ಲಿ ಮೋಟಾರ್, ಬೋರ್ವೆಲ್ ಸ್ಟಾರ್ಟರ್ ಕಳ್ಳತನ: ಇಬ್ಬರ ಬಂಧನ*

ಪ್ರಗತಿವಾಹಿನಿ ಸುದ್ದಿ,ಬೆಳಗಾವಿ : ರೈತರ ಜಮೀನುಗಳಲ್ಲಿದ್ದ ವಿದ್ಯುತ್ ಮೋಟಾರ್ಗಳು, ಬೋರ್ವೆಲ್ ಸ್ಟಾರ್ಟರ್ಗಳು ಹಾಗೂ ಬೆಲೆಬಾಳುವ ಕೇಬಲ್ ವೈರ್ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹2.92 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಹುಕ್ಕೇರಿ ತಾಲೂಕಿನ ಶಿರಹಟ್ಟಿ ಬಿ.ಕೆ. ಗ್ರಾಮದ ರೈತರ ಜಮೀನುಗಳಲ್ಲಿ ಅಕ್ಟೋಬರ್ 25 ಮತ್ತು 26ರಂದು ರಾತ್ರಿ ವೇಳೆ ಕಳ್ಳತನ ನಡೆದಿತ್ತು. ಕುಮಾರ ಅಲ್ಲಪ್ಪ ಖೋತ, ಬಸವಂತಪ್ಪ ಸಾತಪ್ಪ ದಪಾದೂಳಿ, ದಯಾನಂದ ಅಣ್ಣಪ್ಪ ರಸದ ಹಾಗೂ ಕಾಡಪ್ಪ ಕಲ್ಲಪ್ಪ ಕೊಚ್ಚರಗಿ ಅವರಿಗೆ ಸೇರಿದ ಜಮೀನುಗಳಲ್ಲಿದ್ದ ವಿದ್ಯುತ್ ಮೋಟಾರ್ಗಳು, ಬೋರ್ವೆಲ್ ಸ್ಟಾರ್ಟರ್ಗಳು ಮತ್ತು ಕೇಬಲ್ ವೈರ್ಗಳನ್ನು ಕಳ್ಳರು ಕದ್ದೊಯ್ದಿದ್ದರು.
ಈ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದರು.
ಪ್ರಕರಣಗಳ ತನಿಖೆ ಕೈಗೊಂಡ ಹುಕ್ಕೇರಿ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಆರ್. ಗಣಾಚಾರಿ ನೇತೃತ್ವದ ತಂಡವು ಶಿರಹಟ್ಟಿ ಬಿ.ಕೆ. ಗ್ರಾಮದ ವಾಶೇಪ್ಪ ರಾಮಪ್ಪ ಹಾಲಟ್ಟಿ (40) ಮತ್ತು ಮಾಯಪ್ಪ ಅಡಿವೇಪ್ಪ ಹಾಲಟ್ಟಿ (42) ಎಂಬುವವರನ್ನು ಅಕ್ಟೋಬರ್ 28ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಆರೋಪಿಗಳು ಕಳ್ಳತನದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ ವಿವಿಧ ಕಂಪನಿಗಳ 5 ಎಚ್ಪಿ ಹಾಗೂ 2 ಎಚ್ಪಿ ವಿದ್ಯುತ್ ಮೋಟಾರ್ಗಳು, ಬೋರ್ವೆಲ್ ಸ್ಟಾರ್ಟರ್ಗಳು, ಸುಮಾರು 900ರಿಂದ 1,000 ಅಡಿ ಉದ್ದದ ಕೇಬಲ್ ವೈರ್ಗಳು ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ₹2,92,000 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಕೋರಿ ಹುಕ್ಕೇರಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ. ಬಸರಗಿ ಹಾಗೂ ಗೋಕಾಕ ಉಪವಿಭಾಗದ ಡಿವೈಎಸ್ಪಿ ರವಿ ಡಿ. ನಾಯಕ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.
ಹುಕ್ಕೇರಿ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಆರ್. ಗಣಾಚಾರಿ, ಪಿಎಸ್ಐ ರಾಜು ಗಸ್ತಿ, ಎಎಸ್ಐ ಬಿ.ಎಂ. ರಿಜಕನವರ ಹಾಗೂ ಪೊಲೀಸ್ ಸಿಬ್ಬಂದಿ ಎ.ಎನ್. ಮಸರಗುಪ್ಪಿ, ಮಂಜುನಾಥ ಎಸ್. ಕಲ್ಕೂರ, ಕುಮಾರ ಕರೆನ್ನವರ, ಎ.ಎಸ್. ಜೈನಾಪುರ ಮತ್ತು ಆರ್.ಎಂ. ಪಡತಾರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ರೈತರ ಜಮೀನುಗಳಲ್ಲಿನ ಕೃಷಿ ಉಪಕರಣಗಳು ಮತ್ತು ವಿದ್ಯುತ್ ಮೋಟಾರ್ಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಹುಕ್ಕೇರಿ ಪೊಲೀಸರ ಕಾರ್ಯಾಚರಣೆ ಯಶಸ್ವಿಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



