Belagavi NewsBelgaum NewsKannada NewsKarnataka News

*ಮಧ್ಯರಾತ್ರಿಯಿಂದಲೇ ಕನ್ನಡ ರಾಜ್ಯೋತ್ಸವದ ಸಂಭ್ರಮ: ಕೆಂಪು-ಹಳದಿ ಬಣ್ಣದಲ್ಲಿ ಕಂಗೊಳಿಸಿದ ಕುಂದಾನಗರಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 71ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ನಾಡಿನಾದ್ಯಂತ ಮನೆಮಾಡಿದ್ದು, ಗಡಿನಾಡು ಬೆಳಗಾವಿಯಲ್ಲಿ ಹಬ್ಬದ ಸಡಗರ ಮುಗಿಲು ಮುಟ್ಟಿದೆ. 

ಕನ್ನಡ ನಾಡು, ನುಡಿ, ಸಂಸ್ಕೃತಿಯ ಅಭಿಮಾನವನ್ನು ಸಾರುವಂತೆ ಕುಂದಾನಗರಿ ಸಂಪೂರ್ಣ ಕೆಂಪು-ಹಳದಿ ಬಣ್ಣದಲ್ಲಿ ಮಿಂದೆದ್ದಿದೆ. ನಗರದ ಪ್ರಮುಖ ವೃತ್ತಗಳು, ರಸ್ತೆಗಳು ಹಾಗೂ ಕಟ್ಟಡಗಳು ಕನ್ನಡ ಬಾವುಟ ಮತ್ತು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ.

ರಾಜ್ಯೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಗುವಂತೆ ನವೆಂಬರ್ 1ರ ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆಯೇ ನಗರದ ವಿವಿಧೆಡೆ ಕನ್ನಡಾಭಿಮಾನಿಗಳು ಬೀದಿಗಿಳಿದು ಸಂಭ್ರಮಾಚರಣೆಯಲ್ಲಿ ತೊಡಗಿದರು. ಕನ್ನಡ ಬಾವುಟಗಳನ್ನು ಹಿಡಿದು ಜಯಘೋಷ ಮೊಳಗಿಸಿದ ಯುವಕರು, ಹಿರಿಯರು ರಾಜ್ಯೋತ್ಸವದ ಕಳೆ ಹೆಚ್ಚಿಸಿದರು.

ಚನ್ನಮ್ಮ ವೃತ್ತದಲ್ಲಿ ಕೇಕ್ ಕತ್ತರಿಸಿ ಸಂಭ್ರಮಕ್ಕೆ ಚಾಲನೆ

ನಗರದ ಐತಿಹಾಸಿಕ ರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಮಧ್ಯರಾತ್ರಿಯಿಂದಲೇ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಾವಿರಾರು ಕನ್ನಡಾಭಿಮಾನಿಗಳು ಒಂದೆಡೆ ಸೇರಿ ಕನ್ನಡದ ಪರ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮೇಯರ್ ಪ್ರೀತಿ ಕಮ್ಕಾರ್ ಅವರು ಬೃಹತ್ ಕೇಕ್ ಕತ್ತರಿಸುವ ಮೂಲಕ ರಾಜ್ಯೋತ್ಸವದ ಸಂಭ್ರಮಕ್ಕೆ ಚಾಲನೆ ನೀಡಿದರು. ಬಳಿಕ ನೆರೆದಿದ್ದವರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

‘ಜೈ ಕನ್ನಡಾಂಬೆ’, ‘ಸಿರಿಗನ್ನಡಂ ಗೆಲ್ಗೆ, ಕನ್ನಡಂ ಬಾಳ್ಗೆ’ ಎಂಬ ಘೋಷಣೆಗಳು ವಾತಾವರಣವನ್ನು ಕನ್ನಡಮಯಗೊಳಿಸಿದವು.

ಪಟಾಕಿಗಳ ಬೆಳಕಿನಲ್ಲಿ ಮಿನುಗಿದ ಕುಂದಾನಗರಿ

ಮಧ್ಯರಾತ್ರಿಯಲ್ಲಿ ಕೇಕ್ ಕತ್ತರಿಸುವ ಕಾರ್ಯಕ್ರಮದ ಬೆನ್ನಲ್ಲೇ ಆಕಾಶದಲ್ಲಿ ಬಣ್ಣಬಣ್ಣದ ಪಟಾಕಿಗಳು ಚಿತ್ತಾರ ಮೂಡಿಸಿದವು. ಕೆಂಪು-ಹಳದಿ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ರಸ್ತೆಗಳು ಮತ್ತು ವೃತ್ತಗಳು ಹಬ್ಬದ ವೈಭವವನ್ನು ಮತ್ತಷ್ಟು ಹೆಚ್ಚಿಸಿದವು. ಕನ್ನಡ ಗೀತೆಗಳ ನಾದಕ್ಕೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಬೆಳಗಿನ ಅಧಿಕೃತ ಮೆರವಣಿಗೆ ಆರಂಭಕ್ಕೂ ಮುನ್ನವೇ ಬೆಳಗಾವಿ ನಗರ ಕನ್ನಡ ಬಾವುಟಗಳಿಂದ ಅಲಂಕೃತಗೊಂಡು ಕನ್ನಡಾಭಿಮಾನದ ಅಲೆಯಲ್ಲಿ ತೇಲಿತು. ಗಡಿನಾಡಿನ ನೆಲದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ನೆಲ-ಜಲದ ಮೇಲಿನ ಅಭಿಮಾನ ಎಂದಿಗೂ ಕುಂದಿಲ್ಲ ಎಂಬುದಕ್ಕೆ ಮಧ್ಯರಾತ್ರಿಯ ಈ ಸಂಭ್ರಮವೇ ಸಾಕ್ಷಿಯಾಯಿತು.

Related Articles

Back to top button