Belagavi NewsBelgaum NewsKannada NewsKarnataka News

*ಕರ್ನಾಟಕ ರಾಜ್ಯೋತ್ಸವಕ್ಕೆ ಬೆಳಗಾವಿ ಪೊಲೀಸ್‌ರಿಂದ ಭಾರಿ ಭದ್ರತೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ನವೆಂಬರ್ 1ರಂದು ನಡೆಯಲಿರುವ ಕರ್ನಾಟಕ ರಾಜ್ಯೋತ್ಸವದ ಅದ್ಧೂರಿ ಆಚರಣೆಗೆ ಪೊಲೀಸ್ ಇಲಾಖೆ ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದೆ. 

ಲಕ್ಷಾಂತರ ಜನರು ರಾಜ್ಯೋತ್ಸವದ ಮೆರವಣಿಗೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯ ಹಿನ್ನೆಲೆಯಲ್ಲಿ ನಗರಾದ್ಯಂತ ಬೃಹತ್ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಬೆಳಗಾವಿ ನಗರದಿಂದ 3 ಡಿಎಸ್ಪಿ, 6 ಪೊಲೀಸ್ ಇನ್ಸ್‌ಪೆಕ್ಟರ್, 20 ಪಿಎಸ್‌ಐ ಹಾಗೂ 98 ಎಎಸ್‌ಐ ಸೇರಿದಂತೆ 528 ಹೆಡ್‌ಕಾನ್ಸ್‌ಟೇಬಲ್ ಮತ್ತು ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ನಿಯೋಜಿಸಲಾಗಿದೆ.

ಹೊರ ಜಿಲ್ಲೆಗಳು ಹಾಗೂ ವಿವಿಧ ಘಟಕಗಳಿಂದ ಹೆಚ್ಚುವರಿಯಾಗಿ 8 ಡಿಎಸ್ಪಿ, 48 ಪೊಲೀಸ್ ಇನ್ಸ್‌ಪೆಕ್ಟರ್, 206 ಪಿಎಸ್‌ಐ/ಎಎಸ್‌ಐ, 1,270 ಹೆಡ್‌ಕಾನ್ಸ್‌ಟೇಬಲ್/ಪೊಲೀಸ್ ಕಾನ್ಸ್‌ಟೇಬಲ್, 400 ಹೋಮ್‌ಗಾರ್ಡ್‌ಗಳು ಸೇರಿದಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ. ಅಲ್ಲದೆ, 10 ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಹಾಗೂ 8 ವಿಶೇಷ ತುಕಡಿಗಳನ್ನು ನಿಯೋಜಿಸಲಾಗಿದೆ.

25 ಸಾವಿರ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು

ರಾಜ್ಯೋತ್ಸವದ ಸಂದರ್ಭದಲ್ಲಿ ನಗರದಲ್ಲಿ ಅಳವಡಿಸಿರುವ ಒಟ್ಟು 25 ಸಾವಿರ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ವಹಿಸಲಾಗುತ್ತಿದೆ. ಮೆರವಣಿಗೆ ಮಾರ್ಗ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ 540 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ 4 ಡ್ರೋನ್ ಕ್ಯಾಮೆರಾಗಳು ಹಾಗೂ 18 ವಿಡಿಯೋಗ್ರಾಫರ್‌ಗಳನ್ನು ನಿಯೋಜಿಸಲಾಗಿದೆ.

ವಿಧ್ವಂಸಕ ಕೃತ್ಯಗಳನ್ನು ತಡೆಯಲು 2 ಎಎಸ್‌ಎನ್ ತಂಡಗಳನ್ನು ನಿಯೋಜಿಸಲಾಗಿದ್ದು, ನಗರದಾದ್ಯಂತ 12 ರಾಪಿಡ್ ರೆಸ್ಪಾನ್ಸ್ ತಂಡಗಳು, 12 ಆಂಟಿ ಸ್ಯಾಬೋಟೇಜ್ ಸ್ಕ್ವಾಡ್‌ಗಳು ಹಾಗೂ 5 ಮಾದಕ ವಸ್ತು ಪರಿಶೀಲನಾ ತಂಡಗಳು ಕಾರ್ಯನಿರ್ವಹಿಸಲಿವೆ.

ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ

ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳು ಹಾಗೂ ಪ್ರಚೋದನಕಾರಿ ಸಂದೇಶಗಳನ್ನು ತಡೆಗಟ್ಟಲು ದಿನದ 24 ಗಂಟೆಯೂ ನಿಗಾ ವಹಿಸಲಾಗುತ್ತಿದೆ. ಇದಕ್ಕಾಗಿ ಒಟ್ಟು 13 ತಂಡಗಳನ್ನು ರಚಿಸಲಾಗಿದೆ. ಮಹಿಳೆಯರ ಸುರಕ್ಷತೆಗಾಗಿ 12 ಹೂಕ್-ಅಪ್ ಮತ್ತು ಕ್ವಿಕ್ ರೆಸ್ಪಾನ್ಸ್ ಸ್ಕ್ವಾಡ್‌ಗಳನ್ನು ಹಾಗೂ ಆಯ್ದ ಸ್ಥಳಗಳಲ್ಲಿ ಸ್ನೈಪರ್/ಬ್ರೈಟನ್ ಕಣ್ಗಾವಲು ವ್ಯವಸ್ಥೆ ಕಲ್ಪಿಸಲಾಗಿದೆ.

ಮೆರವಣಿಗೆ ಮಾರ್ಗದಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಸಂಚಾರ ನಿಯಂತ್ರಣಕ್ಕಾಗಿ ನಗರವನ್ನು 32 ಸೆಕ್ಟರ್‌ಗಳಾಗಿ ವಿಂಗಡಿಸಲಾಗಿದೆ. ಅಲ್ಲದೆ, 33 ಕ್ರೇನ್‌ಗಳು, 15 ಹೊಯ್ಸಳ ವಾಹನಗಳು ಹಾಗೂ 9 ಹೈವೇ ಪೆಟ್ರೋಲಿಂಗ್ ವಾಹನಗಳನ್ನು ನಿಯೋಜಿಸಲಾಗಿದೆ.

ಮಹಾನಗರ ಪಾಲಿಕೆ, ಹೆಸ್ಕಾಂ, ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸಾರ್ವಜನಿಕರಿಗೆ ಸಂಚಾರ ಸುಗಮವಾಗಿಸಲು 75 ಕಡೆಗಳಲ್ಲಿ ಬ್ಯಾರಿಕೇಡಿಂಗ್ ಪಾಯಿಂಟ್‌ಗಳನ್ನು ನಿರ್ಮಿಸಲಾಗಿದ್ದು, 4 ಕಡೆಗಳಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಳಗಾವಿ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ.

ಒಟ್ಟಾರೆ, ಕರ್ನಾಟಕ ರಾಜ್ಯೋತ್ಸವವನ್ನು ಶಾಂತಿಯುತವಾಗಿ, ಸಂಭ್ರಮದಿಂದ ಹಾಗೂ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಆಚರಿಸಲು ಬೆಳಗಾವಿ ಪೊಲೀಸ್ ಇಲಾಖೆ ಸರ್ವ ಸಿದ್ಧತೆ ಮಾಡಿಕೊಂಡಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Related Articles

Back to top button